ಮಳೆಗಾಲದಲ್ಲಿ ಬಿಸಿಬಿಸಿಯಾದ ಸೂಪ್‌ ಕುಡಿಯಬೇಕು ಅನಿಸಿದರೆ ಟೊಮೆಟೊ ಸೂಪ್‌ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ತಾಜಾ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಕೆಲವು ಸರಳ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ರುಚಿಕರವಾದ ಟೊಮೆಟೊ ಸೂಪ್‌ ತಯಾರಿಸಬಹುದು.

ಮಳೆಗಾಲದಲ್ಲಿ ಬಿಸಿಬಿಸಿಯಾದ ಸೂಪ್‌ ಕುಡಿಯಬೇಕು ಅನಿಸಿದರೆ ಟೊಮೆಟೊ ಸೂಪ್‌ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ತಾಜಾ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಕೆಲವು ಸರಳ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ರುಚಿಕರವಾದ ಟೊಮೆಟೊ ಸೂಪ್‌ ತಯಾರಿಸಬಹುದು. ರೆಸ್ಟೋರೆಂಟ್‌ನಲ್ಲಿ ಸಿಗುವಂತಹ ರುಚಿಯನ್ನು ಮನೆಯಲ್ಲೇ ಪಡೆಯಲು ಈ ಸುಲಭ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.

ಟೊಮೆಟೊ ಸೂಪ್‌ ಮಾಡಲು ಬೇಕಾಗುವ ಸಾಮಗ್ರಿಗಳು

ಟೊಮೆಟೊ – 4 ಮಧ್ಯಮ ಗಾತ್ರದ

ಈರುಳ್ಳಿ – 1 ಮಧ್ಯಮ ಗಾತ್ರದ

ಬೆಳ್ಳುಳ್ಳಿ – 4-5 ಎಸಳು

ಎಣ್ಣೆ – 1 ಟೀಸ್ಪೂನ್

ಬೆಣ್ಣೆ – 1 ಟೀಸ್ಪೂನ್

ಒಣ ತುಳಸಿ ಅಥವಾ ಓರೆಗಾನೊ – 1 ಟೀಸ್ಪೂನ್

ಕಾಳುಮೆಣಸು ಪುಡಿ – ½ ಟೀಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಸಕ್ಕರೆ – 1-2 ಟೀಸ್ಪೂನ್

ನೀರು – 2 ಕಪ್

ಟೊಮೆಟೊ ಸೂಪ್‌ ಮಾಡುವ ವಿಧಾನ

ಮೊದಲಿಗೆ ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಗೂ ಬೆಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ ಕೆಲವು ನಿಮಿಷ ಚೆನ್ನಾಗಿ ಬೇಯಿಸಿ. ಟೊಮೆಟೊ ಮೆತ್ತಗಾದ ಬಳಿಕ ಸುಮಾರು 2 ಕಪ್ ನೀರು, ಉಪ್ಪು ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ. ಪಾತ್ರೆಯನ್ನು ಮುಚ್ಚಿ 8-10 ನಿಮಿಷಗಳ ಕಾಲ ಕುದಿಸಿಕೊಳ್ಳಿ.

ಟೊಮೆಟೊ ಚೆನ್ನಾಗಿ ಬೆಂದ ಬಳಿಕ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ಸೂಪ್‌ ಅನ್ನು ಸೋಸಿಕೊಳ್ಳಬಹುದು. ರುಬ್ಬಿದ ಮಿಶ್ರಣವನ್ನು ಮತ್ತೆ ಪಾತ್ರೆಗೆ ಹಾಕಿ. ಇದಕ್ಕೆ ಕಾಳುಮೆಣಸು ಪುಡಿ ಹಾಗೂ ಓರೆಗಾನೊ ಅಥವಾ ಒಣ ತುಳಸಿ ಸೇರಿಸಿ. ಕಡಿಮೆ ಉರಿಯಲ್ಲಿ 3-5 ನಿಮಿಷಗಳ ಕಾಲ ಕುದಿಸಿ. ಸೂಪ್‌ ಹೆಚ್ಚು ಗಟ್ಟಿಯಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಬಹುದು. ಕೊನೆಗೆ ಬಿಸಿಬಿಸಿಯಾದ ಸೂಪ್‌ ಅನ್ನು ಬೌಲ್‌ಗೆ ಹಾಕಿ, ಮೇಲೆ ಸ್ವಲ್ಪ ಕಾಳುಮೆಣಸು ಪುಡಿ ಮತ್ತು ಹಸಿರು ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.

ಒಂದು ಚಿಕ್ಕ ಟಿಪ್‌

ಟೊಮೆಟೊಗಳು ಹೆಚ್ಚು ಹುಳಿಯಾಗಿದ್ದರೆ ಸೂಪ್‌ಗೆ ಸ್ವಲ್ಪ ಸಕ್ಕರೆ ಸೇರಿಸಿ. ಇದರಿಂದ ಹುಳಿ-ಸಿಹಿಯ ರುಚಿ ಬ್ಯಾಲೆನ್ಸ್‌ ಆಗಿ ಸೂಪ್‌ ಇನ್ನಷ್ಟು ರುಚಿಕರವಾಗುತ್ತದೆ. ಬಿಸಿಬಿಸಿಯಾದ, ಸುವಾಸನೆಯ ಟೊಮೆಟೊ ಸೂಪ್‌ ಇದೀಗ ಸವಿಯಲು ಸಿದ್ಧ. ಮಳೆ ಅಥವಾ ಚಳಿಯ ವಾತಾವರಣದಲ್ಲಿ ಮನೆಯವರೊಂದಿಗೆ ಈ ರುಚಿಕರ ಸೂಪ್‌ ಅನ್ನು ಸವಿಯಬಹುದು.