'ಪ್ರೇಮದ ಊರಲಿ' ಸಿನಿಮಾ ಹಿಟ್ ಆದ ಬಳಿಕ ಹಾಸನದ ಸೀಗೆಗುಡ್ಡದ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಮತ್ತು ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ನವೆಂಬರ್ 11ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ರೀಲ್ಸ್ ನೋಡಿ ಬರಬೇಡಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಹಾಸನ (ನ.01): ಒಂದೊಳ್ಳೆ ಸಿನಿಮಾ ಕೇವಲ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದು ಮಾತ್ರವಲ್ಲ, ಮರೆಯಾಗಿದ್ದ ನೈಸರ್ಗಿಕ ಹಾಗೂ ಧಾರ್ಮಿಕ ತಾಣಗಳಿಗೂ ಹೊಸ ಕಳೆ ತಂದುಕೊಡಬಲ್ಲದು ಎಂಬುದಕ್ಕೆ ಹಾಸನ ತಾಲೂಕಿನ ಸೀಗೆಗುಡ್ಡದ ಮಳೆ ಮಲ್ಲೇಶ್ವರ ಬೆಟ್ಟ ಸಾಕ್ಷಿಯಾಗಿದೆ. ಹೊಸಬರ ‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ, ಚಿತ್ರೀಕರಣ ನಡೆದ ಸೀಗೆಗುಡ್ಡ ಪ್ರದೇಶ ಇದೀಗ ಜನರ ನೆಚ್ಚಿನ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 'ಜನ ಮರಳೋ, ಜಾತ್ರೆ ಮರಳೋ' ಎನ್ನುವಂತೆ ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಮುಗಿಬೀಳುತ್ತಿದ್ದಾರೆ.

ಸೀಗೆಗುಡ್ಡದಲ್ಲಿ ಹಬ್ಬದಂಥ ವಾತಾವರಣ:

‘ಪ್ರೇಮದ ಊರಲಿ’ ಸಿನಿಮಾದಲ್ಲಿ ಮೂಡಿಬಂದ ಹಳ್ಳಿಯ ವಾತಾವರಣ, ಹಸಿರಿನ ಸಿರಿ ಹಾಗೂ ಮಳೆ ಮಲ್ಲೇಶ್ವರ ದೇವಸ್ಥಾನದ ಆವರಣ ಜನರನ್ನು ಬಹುವಾಗಿ ಆಕರ್ಷಿಸಿದೆ. ಇದರಿಂದಾಗಿ ನಿತ್ಯ ಸಾವಿರಾರು ಪ್ರವಾಸಿಗರು ತಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಪರಿಣಾಮವಾಗಿ, ಸುತ್ತಮುತ್ತಲಿನ ಊರುಗಳಿಂದ ತಿಂಡಿ-ತಿನಿಸುಗಳು, ಐಸ್‌ಕ್ರೀಂ ಅಂಗಡಿಗಳು ಹಾಗೂ ತಾತ್ಕಾಲಿಕ ಆಟಿಕೆ ಮಳಿಗೆಗಳು ಇಲ್ಲಿಗೆ ಆಗಮಿಸಿದ್ದು, ಬೆಟ್ಟದ ಮೇಲಿನ ವಾತಾವರಣ ಸಂಪೂರ್ಣವಾಗಿ ಜಾತ್ರೆಯ ಸ್ವರೂಪ ಪಡೆದುಕೊಂಡಿದೆ.

ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ನಿತ್ಯ 3 ರಿಂದ 5 ಸಾವಿರ ಜನರಿಗೆ ಅನ್ನದಾನ

ಈ ಮೊದಲು ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ತೀರಾ ವಿರಳವಾಗಿತ್ತು. ದಿನಕ್ಕೆ 30 ರಿಂದ 50 ಜನರು ಬಂದರೂ ಹೆಚ್ಚಾಗಿತ್ತು. ಆದರೆ ಸಿನಿಮಾ ರಿಲೀಸ್ ಆದ ಬಳಿಕ ವಾರದ ದಿನಗಳಲ್ಲೇ 3,000ಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ. ಇನ್ನು ವಾರಾಂತ್ಯದ ರಜಾದಿನಗಳು, ಹಬ್ಬ-ಹುಣ್ಣಿಮೆಗಳಲ್ಲಿ ಭಕ್ತರ ಸಂಖ್ಯೆ 5,000ದಿಂದ 10,000ಕ್ಕೆ ಏರಿಕೆಯಾಗುತ್ತಿದೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಸೀಗೆಗುಡ್ಡದಲ್ಲಿ ನಿತ್ಯ ಬೃಹತ್ ಮಟ್ಟದಲ್ಲಿ ಅನ್ನದಾನ ಸೇವೆ ನಡೆಯುತ್ತಿದೆ.

ಟ್ರಾಫಿಕ್ ಜಾಮ್ ಹಾಗೂ ಬೆಟ್ಟ ಕುಸಿತದ ಭೀತಿ

ವಾಹನ ಸಂಚಾರ ನಿಷೇಧ!ದಿಢೀರನೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದರಿಂದ ಕಿರಿದಾದ ಬೆಟ್ಟದ ರಸ್ತೆಯಲ್ಲಿ ಅಡ್ಡಾದಿಡ್ಡ ವಾಹನಗಳನ್ನು ನಿಲ್ಲಿಸಿ ಸಂಚಾರ ನಡೆಸಲಾಗುತ್ತಿತ್ತು. ಇದರಿಂದ ನಿರಂತರ ಟ್ರಾಫಿಕ್ ಜಾಮ್ ಹಾಗೂ ಮಳೆಯ ಕಾರಣದಿಂದ ಗುಡ್ಡ ಕುಸಿತದ ಭೀತಿ ಎದುರಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಹಾಸನ ಜಿಲ್ಲಾಧಿಕಾರಿಗಳು ಸೀಗೆಗುಡ್ಡ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರವನ್ನು ನವೆಂಬರ್ 11ರವರೆಗೆ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪ್ರವಾಸಿಗರು ಕೆಳಗಡೆಯೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಷ್ಟೇ ಮೇಲೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

ರೀಲ್ಸ್ ನೋಡಿ ಆತುರಪಡಬೇಡಿ – ಸ್ಥಳೀಯರ ಮನವಿ:

ವಾಹನ ನಿಷೇಧ ಹೇರಿದ್ದರೂ ಪ್ರವಾಸಿಗರ ಹರಿವು ಕಮ್ಮಿಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ನೋಡಿ ಸಾವಿರಾರು ಜನರು ಏಕಾಏಕಿ ಆಗಮಿಸುತ್ತಿದ್ದು, ಸುರಕ್ಷತೆಯ ಹಿತದೃಷ್ಟಿಯಿಂದ ಪ್ರಸ್ತುತ ಶಿವನ ಮೂರ್ತಿಯ ಹತ್ತಿರ ಹೋಗಲು ಬಿಡುತ್ತಿಲ್ಲ. ಹೀಗಾಗಿ ರೀಲ್ಸ್ ವೀಡಿಯೋಗಳನ್ನು ನೋಡಿ ತಕ್ಷಣವೇ ಭೇಟಿ ನೀಡಲು ಆತುರ ಪಡಬೇಡಿ, ರಶ್ ಕಡಿಮೆಯಾದ ನಂತರ ಅಥವಾ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಎಂದು ಸ್ಥಳೀಯರು ಹಾಗೂ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.