ಮನೆಯಲ್ಲಿ ಸಕ್ಕರೆ ಡಬ್ಬ ಇಟ್ರೆ ಸಾಕು ಇರುವೆ ಮುತ್ತಿಕೊಳ್ಳುತ್ವೆ. ಅದನ್ನು ಓಡಿಸೋದೇ ದೊಡ್ಡ ಸಮಸ್ಯೆ ಅನ್ನೋರಿಗೆ ಟೆನ್ಷನ್ ಬೇಡ. ಕಡಿಮೆ ಖರ್ಚಿನಲ್ಲಿ ಸುಲಭ ಟಿಪ್ಸ್ ಇಲ್ಲಿದೆ. 

ಸಿಹಿ (sweet) ಕಂಡ್ರೆ ಇರುವೆ ಬರದೆ ಇರುತ್ತಾ? ಮಳೆಗಾಲ, ಬೇಸಿಗೆ ಕಾಲದಲ್ಲಿ ಈ ಇರುವೆ (ant) ಕಾಟ ಸ್ವಲ್ಪ ಜಾಸ್ತಿ. ನೀವು ಮಾಡೋ ಸಿಹಿ ಅಡುಗೆಗೆ ಮಾತ್ರವಲ್ಲ ಸಕ್ಕರೆ ಡಬ್ಬದ ಫೆವರೆಟ್ ನೆಂಟ ಇರುವೆ. ಅದೆಲ್ಲೇ ಇಡಿ, ದಾರಿ ಪತ್ತೆ ಮಾಡಿ ಅಲ್ಲಿಗೆ ಲಗ್ಗೆ ಇಡುವ ಈ ಇರುವೆಗಳನ್ನು ಓಡಿಸೋದು ಸುಲಭವಲ್ಲ. ಸಕ್ಕರೆ ಡಬ್ಬಕ್ಕೆ ಇರುವೆ ಬರದೆ ಇರಲಿ ಅಂದ ಮಾರುಕಟ್ಟೆಯಲ್ಲಿ ಸಿಗೋ ಕೆಮಿಕಲ್ ಬಳಸುವ ಜನ ಇದ್ದಾರೆ. ಅವು ಎಷ್ಟೇ ಸುರಕ್ಷಿತ ಅಂದ್ರೂ ನಿರ್ಲಕ್ಷ್ಯ ಮಾಡೋಕೆ ಸಾಧ್ಯವಿಲ್ಲ. ಸಕ್ಕರೆ ಡಬ್ಬಕ್ಕೆ ಇರುವೆ ಬರದಂತೆ ತಡೆಯಲು ನೈಸರ್ಗಿಕ ವಿಧಾನ ಹುಡುಕುತ್ತಿರುವವರು ಸುಲಭವಾದ ಟಿಪ್ಸ್ ಫಾಲೋ ಮಾಡಿ. ಮಾರುಕಟ್ಟೆಯಲ್ಲಿ ಐದು ರೂಪಾಯಿಗೆ ಸಿಗುವ ಪದಾರ್ಥವನ್ನು ನೀವು ಬಳಸ್ಬೇಕು.

ಸಕ್ಕರೆ ಡಬ್ಬಕ್ಕೆ ಬರುವ ಇರುವೆ ತಡೆಯೋದು ಹೇಗೆ? : ನಿಮ್ಮ ಮನೆಯ ಸಕ್ಕರೆ ಡಬ್ಬಕ್ಕೆ ಮಕ್ಕಳು ಮಾತ್ರವಲ್ಲ ಇರುವೆ ಕೂಡ ಬರ್ತಿರುತ್ತೆ ಎಂದಾದ್ರೆ ಒಂದು ಲವಂಗದಿಂದ ನಿಮ್ಮ ಕೆಲ್ಸ ಸಾಧಿಸಿ. ಇದು ಅತ್ಯಂತ ಸುರಕ್ಷಿತ, ಸುಲಭ ಹಾಗೂ ಕಡಿಮೆ ಖರ್ಚಿನ ಕೆಲಸ. ಅಡುಗೆಗೆ ಮಾತ್ರವಲ್ಲ ಅಡುಗೆ ಮನೆಗೂ ಲವಂಗದ ಅಗತ್ಯವಿದೆ. ಇದನ್ನು ನೀವು ಇರುವೆ ಓಡಿಸಲು ಬಳಸ್ಬಹುದು. ಲವಂಗವನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ ಅಂತೆಲ್ಲ ನಾವು ಹೇಳೋದಿಲ್ಲ. ಅಡುಗೆ ಮನೆಯಲ್ಲಿ ಇರುವ ಲವಂಗವನ್ನು ನೇರವಾಗಿ ಸಕ್ಕರೆ ಡಬ್ಬಕ್ಕೆ ಹಾಕಿದ್ರೆ ನಿಮ್ಮ ಕೆಲಸ ಮುಗೀತು. ಒಂದು ಲವಂಗವನ್ನು ತೆಗೆದುಕೊಂಡು ಸಕ್ಕರೆ ಹಾಕಿರುವ ಡಬ್ಬದ ಒಳಗೆ ಹಾಕಿ. ನಂತ್ರ ಡಬ್ಬವನ್ನು ಮುಚ್ಚಿಡಿ. ನಿಮ್ಮ ಸಕ್ಕರೆ ಡಬ್ಬಕ್ಕೆ ಬರ್ತಿದ್ದ ಇರುವೆ ಆ ಕಡೆ ಸುಳಿಯೋದಿಲ್ಲ.

ಈಗಾಗಲೇ ಇರುವೆ ಡಬ್ಬದಲ್ಲಿದ್ರೆ ಏನು ಮಾಡ್ಬೇಕು? : ಸಕ್ಕರೆಯಲ್ಲಿ ಈಗಾಗಲೇ ಇರುವೆ ಸೇರಿದೆ. ಅದನ್ನು ತೆಗೆಯೋದೆ ದೊಡ್ಡ ತಲೆ ನೋವು ಅನ್ನೋರು ಕೂಡ ಲವಂಗದಿಂದಲೇ ಇರುವೆ ಓಡಿಸಬಹುದು. ನೀವು ಸಕ್ಕರೆಯನ್ನು ಇನ್ನೊಂದು ಪಾತ್ರೆಗೆ ಅಥವಾ ಪ್ಲೇಟ್ಗೆ ಹಾಕಿ. ನಂತ್ರ ಅದಕ್ಕೆ ಲವಂಗ ಸೇರಿಸಿ. ಲವಂಗದ ವಾಸನೆಗೆ ಇರುವೆ ಅಲ್ಲಿಂದ ಓಡಿ ಹೋಗುತ್ತದೆ. ಸಕ್ಕರೆ ಡಬ್ಬವನ್ನು ಕ್ಲೀನ್ ಮಾಡಿ, ಮತ್ತೆ ಅದಕ್ಕೆ ಸಕ್ಕರೆಯನ್ನು ಹಾಕಿ, ಒಂದೆಡರು ಲವಂಗ ಹಾಕಿ, ಡಬ್ಬದ ಮುಚ್ಚಲನ್ನು ಮುಚ್ಚಿ. ಸಕ್ಕರೆ ಎಷ್ಟಿದೆ, ಯಾವ ಪಾತ್ರೆಯಲ್ಲಿ ಸಕ್ಕರೆ ಹಾಕಿದ್ದೀರಿ ಎಂಬುದನ್ನು ನೋಡಿಕೊಂಡು ಲವಂಗ ಹಾಕ್ಬೇಕು. ಅತಿ ಚಿಕ್ಕ ಡಬ್ಬವಾಗಿದ್ರೆ ಒಂದು ಲವಂಗ ಸಾಕಾಗುತ್ತದೆ. ಅದೇ ಡಬ್ಬ ದೊಡ್ಡದಿದ್ದರೆ ಅಥವಾ ಐದಾರು ಕೆಜಿ ಸಕ್ಕರೆ ಡಬ್ಬದಲ್ಲಿದ್ದರೆ ಒಂದು ಲವಂಗ ಸಾಲೋದಿಲ್ಲ. ಆಗ ಡಬ್ಬಕ್ಕೆ ತಕ್ಕಂತೆ ನಿಮ್ಮ ಲವಂಗದ ಪ್ರಮಾಣವನ್ನು ಹೆಚ್ಚಿಸಬೇಕು.

ಇರುವೆ ಓಡಿ ಹೋಗೋದು ಹೇಗೆ? : ಲವಂಗ ವಿಶೇಷ ವಾಸನೆಯನ್ನು ಹೊಂದಿದೆ. ಲವಂಗದ ವಾಸನೆ ಇರುವೆಗಳಿಗೆ ಇಷ್ಟವಾಗುವುದಿಲ್ಲ. ಲವಂಗದ ವಾಸನೆ ಬರ್ತಾ ಇದ್ದಂತೆ ಅಲ್ಲಿಂದ ಓಡಿ ಹೋಗುತ್ತವೆ. ಇರುವೆಗಳು ವಾಸನೆ ಮೇಲೆ ಹೆಚ್ಚು ಅವಲಂಭಿತವಾಗಿವೆ. ಅವು ವಾಸನೆ ತೆಗೆದುಕೊಳ್ತಾ ತಮ್ಮ ಆಹಾರವನ್ನು ಹುಡುಕುತ್ತವೆ. ಸಕ್ಕರೆ ವಾಸನೆಯನ್ನು ಲವಂಗದ ವಾಸನೆ ತಡೆಯುವುದ್ರಿಂದ ಇರುವೆ ಅಲ್ಲಿಗೆ ಬರೋದಿಲ್ಲ. ನೀವು ಸಕ್ಕರೆಗೆ ಮಾತ್ರವಲ್ಲ ಎಲ್ಲ ರೀತಿಯ ಸಿಹಿ ಪದಾರ್ಥಕ್ಕೆ ಈ ಟ್ರಿಕ್ಸ್ ಬಳಸಬಹುದು. ಅಡುಗೆ ಮನೆಯ ಯಾವ ಜಾಗಕ್ಕೆ ಇರುವೆ ಹೆಚ್ಚು ಬರುತ್ತದೆ ಎಂಬುದನ್ನು ಗಮನಿಸಿ ಅಲ್ಲಿ ಲವಂಗ ಇಡಬೇಕು. ಲವಂಗ ದೀರ್ಘಕಾಲ ಇರುತ್ತದೆ. ಹಾಗೆಯೇ ವಾಸನೆ ಕೂಡ ಬೇಗ ಕಡಿಮೆ ಆಗುವುದಿಲ್ಲ.