orange peel soap : ಕಿತ್ತಳೆ ಹಣ್ಣಿನ ಸಿಪ್ಪೆ ಬಳಸಿ ಸುಲಭವಾಗಿ ನೀವು ಸೋಪ್‌ ತಯಾರಿಸಬಹುದು. ಇದು ನಿಮ್ಮ ಸೌಂದರ್ಯ ಹೆಚ್ಚಿಸುವ ಜೊತೆಗೆ ಇಡೀ ದಿನ ನಿಮ್ಮ ಮೈ ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ.

ಕಿತ್ತಳೆ ಹಣ್ಣಿನ ಸೀಸನ್‌ ಶುರುವಾಗಿದೆ. ವಿಟಮಿನ್‌ ಸಿ ಹೆಚ್ಚಿರುವ ಕಿತ್ತಳೆ ಹಣ್ಣನ್ನು ಬಹುತೇಕ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಕಿತ್ತಳೆಹಣ್ಣು ತಿಂದು ಸಿಪ್ಪೆಯನ್ನು ಕಸಕ್ಕೆ ಹಾಕ್ತಾರೆ. ಈ ಸಿಪ್ಪೆಯಿಂದ ಕೆಲ ಆಹಾರ ತಯಾರಿಸ್ಬಹುದು. ಹಾಗೆಯೇ ನಿಮ್ಮ ಸೌಂದರ್ಯ ವರ್ದಕವಾಗಿ ಅದನ್ನು ಬಳಸಬಹುದು. ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಸೋಫ್‌ ತಯಾರಿಸೋದು ಹೇಗೆ ಗೊತ್ತಾ?

ಸೋಫ್ ತಯಾರಿಸಲು ಬೇಕಾಗುವ ವಸ್ತುಗಳು

ತಾಜಾ ಕಿತ್ತಳೆ ಹಣ್ಣಿನ ಸಿಪ್ಪೆಗಳು, ಸೋಪ್ ಬೇಸ್, ಸ್ವಲ್ಪ ನೀರು, ಸೋಪ್ ಗಟ್ಟಿಯಾಗಿಸಲು ಸಿಲಿಕಾನ್ ಮೋಲ್ಡ್. ಇದು ಇಲ್ಲದಿದ್ದರೆ ಪೇಪರ್ ಕಪ್ ಬಳಸಬಹುದು.

ಕಿತ್ತಳೆ ಸಿಪ್ಪೆಯ ಸೋಪ್ ತಯಾರಿಸುವ ವಿಧಾನ

ಮೊದಲಿಗೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಅವುಗಳ ಮೇಲಿರುವ ಧೂಳು, ಕೊಳೆ ಸಂಪೂರ್ಣವಾಗಿ ಹೋಗುವಂತೆ ಸ್ವಚ್ಛಗೊಳಿಸಿ. ಬಳಿಕ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಹೆಚ್ಚು ನೀರು ಸೇರಿಸದಂತೆ ಎಚ್ಚರವಹಿಸಿ. ರುಬ್ಬಿದ ಮಿಶ್ರಣವನ್ನು ಸಣ್ಣ ಜಾಲರಿಯ ಅಥವಾ ಸ್ವಚ್ಛವಾದ ಹತ್ತಿ ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ. ಇದರಿಂದ ಸಿಪ್ಪೆಯ ದೊಡ್ಡ ತುಂಡುಗಳು ಬೇರ್ಪಟ್ಟು ನಯವಾದ ಮಿಶ್ರಣ ಸಿಗುತ್ತದೆ. ನಂತರ ಸೋಪ್ ಬೇಸ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಯೊಳಗೆ ಸಣ್ಣ ಬಟ್ಟಲನ್ನು ಇಡಿ. ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ, ಬಟ್ಟಲು ಸ್ವಲ್ಪ ಮುಳುಗುವಂತೆ ನೋಡಿಕೊಳ್ಳಿ. ಆದರೆ ಬಟ್ಟಲಿನೊಳಗೆ ನೀರು ಹೋಗಬಾರದು.

ಈಗ ಬಟ್ಟಲಿನೊಳಗೆ ಸೋಪ್ ಬೇಸ್ ತುಂಡುಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಇದನ್ನು ಡಬಲ್ ಬಾಯ್ಲರ್ ವಿಧಾನ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಸೋಪ್ ಬೇಸ್ ಸುಡದೆ ನಿಧಾನವಾಗಿ ಕರಗುತ್ತದೆ. ಸೋಪ್ ಬೇಸ್ ಸಂಪೂರ್ಣವಾಗಿ ಕರಗಿದ ಬಳಿಕ ಅದಕ್ಕೆ ಮೊದಲೇ ತಯಾರಿಸಿಟ್ಟ ಕಿತ್ತಳೆ ಸಿಪ್ಪೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಸುಮಾರು 12ರಿಂದ 13 ನಿಮಿಷಗಳ ಕಾಲ ನಿರಂತರವಾಗಿ ಕಲಕುತ್ತಾ ಬೇಯಿಸಿ. ಮಿಶ್ರಣದಲ್ಲಿ ಯಾವುದೇ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ.

ಈಗ ತಯಾರಾದ ಮಿಶ್ರಣವನ್ನು ಸಾಬೂನಿನ ಅಚ್ಚಿಗೆ ಹಾಕಿ. ಅಚ್ಚು ಇಲ್ಲದಿದ್ದರೆ ಸ್ವಲ್ಪ ತಣ್ಣಗಾದ ಬಳಿಕ ಪೇಪರ್ ಕಪ್ಗೆ ಹಾಕಬಹುದು. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಸುಮಾರು 30 ನಿಮಿಷಗಳ ಕಾಲ ಗಟ್ಟಿಯಾಗಲು ಬಿಡಿ. ಬೇಗ ಗಟ್ಟಿಯಾಗಬೇಕೆಂದರೆ ಸ್ವಲ್ಪ ಸಮಯ ಫ್ರಿಡ್ಜ್ನಲ್ಲಿಡಬಹುದು. ಸೋಪ್ ಗಟ್ಟಿಯಾದ ಬಳಿಕ ಅಚ್ಚಿನಿಂದ ಹೊರತೆಗೆಯಿರಿ. ಇಷ್ಟಾದರೆ ಮನೆಯಲ್ಲೇ ಕಿತ್ತಳೆ ಸಿಪ್ಪೆಯ ಸೋಪ್ ಸಿದ್ಧ.

ಈ ಸೋಪ್ ಸ್ನಾನಕ್ಕೆ ಬಳಸಬಹುದು. ಇದರಿಂದ ದೇಹಕ್ಕೆ ಕಿತ್ತಳೆಯ ನೈಸರ್ಗಿಕ ಪರಿಮಳ ಸಿಗುತ್ತದೆ. ಕಿತ್ತಳೆ ಸಿಪ್ಪೆಯನ್ನು ತ್ವಚೆಯ ಆರೈಕೆಗೂ ಬಳಸಲಾಗುತ್ತದೆ.