Asianet Suvarna News Asianet Suvarna News

ಬಿಬಿಎಂಪಿಯಲ್ಲಿ ಮೊದಲ ಬಾರಿ ವಲಯವಾರು ಬಜೆಟ್‌ ಹಂಚಿಕೆ

*   ಕಾಮಗಾರಿ ಸಂಖ್ಯೆಗೆ ಅನುಗುಣವಾಗಿ ಅನುದಾನ
*  ಅಧಿಕಾರ ವಿಕೇಂದ್ರಿಕರಣದಡಿ ಹಂಚಿಕೆ
*  2020ರ ಏಪ್ರಿಲ್‌ವರೆಗೆ ಬಿಲ್‌ ಪಾವತಿ
 

Zonal Budget Allocation for the First Time in BBMP grg
Author
Bengaluru, First Published May 27, 2022, 4:59 AM IST | Last Updated May 27, 2022, 4:59 AM IST

ಬೆಂಗಳೂರು(ಮೇ.27): ಬಿಬಿಎಂಪಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಸಕ್ತ ಸಾಲಿನ ಆಯವ್ಯಯವನ್ನು ವಲಯವಾರು ಹಂಚಿಕೆ ಮಾಡಲಾಗಿದ್ದು, ವಲಯಗಳಿಂದಲೇ ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಪಾಲಿಕೆ ಕೇಂದ್ರ ಕಚೇರಿಯಿಂದಲೇ ಪ್ರತಿಯೊಂದು ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆಗೆ ಅನುಮತಿ ನೀಡಲಾಗುತ್ತಿತ್ತು. ಆದರೆ, ಬಿಬಿಎಂಪಿ ಕಾಯ್ದೆ 2020ರ ಅನ್ವಯ ಅಧಿಕಾರ ವಿಕೇಂದ್ರೀಕರಣದ ಅಡಿಯಲ್ಲಿ ವಲಯ ಕಚೇರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದರು.

ಬಜೆಟ್‌ನಲ್ಲಿ ತಿಳಿಸಲಾದ ಕಾಮಗಾರಿ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಪ್ರತಿಯೊಂದು ವಲಯಕ್ಕೆ ಹಂಚಿಕೆ ಮಾಡುವಂತೆ ಮುಖ್ಯ ಆಯುಕ್ತರು ಮೇ 17ರಂದು ಆದೇಶ ಹೊರಡಿಸಿದ್ದಾರೆ. ಅದರಂತೆ ಎಲ್ಲ ವಲಯಗಳಿಗೆ ಪಿ-ಕೋಡ್‌ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ!

ಈವರೆಗೆ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಮುಖ್ಯ ಆಯುಕ್ತರಿಂದ ಅನುಮೋದನೆ ಪಡೆಯುತ್ತಿದ್ದರು, ನಂತರ, ಅದಕ್ಕೆ ಕೌನ್ಸಿಲ್‌ ಸಭೆ ಅಥವಾ ಆಡಳಿತಾಧಿಕಾರಿ ಒಪ್ಪಿಗೆ ಪಡೆದು ಕಾಮಗಾರಿಗೆ ಟೆಂಡರ್‌ ಕರೆದು ಕಾರ್ಯರೂಪಕ್ಕೆ ತರಲಾಗುತ್ತಿತ್ತು. ಈಗ ವಲಯ ಮಟ್ಟದಲ್ಲಿಯೇ ಬಜೆಟ್‌ನಲ್ಲಿ ಘೋಷಣೆ ಮಾಡಲಾದ ಯೋಜನೆಗೆ ವಲಯಗಳಲ್ಲಿಯೇ ಸೂಕ್ತ ಕ್ರಿಯಾಯೋಜನೆ ರೂಪಿಸಿ, ಅದಕ್ಕೆ ಆಡಳಿತಾಧಿಕಾರಿ ಅನುಮೋದನೆ ಪಡೆದು ಕಾಮಗಾರಿಯನ್ನು ಆರಂಭಿಸಬಹುದು. ಇದಕ್ಕಾಗಿ ಪಾಲಿಕೆ ಕೇಂದ್ರ ಕಚೇರಿಗೆ ಅಧಿಕಾರಿಗಳು ಅಲೆದಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

2020ರ ಏಪ್ರಿಲ್‌ವರೆಗೆ ಬಿಲ್‌ ಪಾವತಿ

ಕಳೆದ ವಾರಾಂತ್ಯಕ್ಕೆ 2020ರ ಏಪ್ರಿಲ್‌ ತಿಂಗಳವರೆಗಿನ ಪಾಲಿಕೆ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಲಾಗಿದೆ. ಈಗ 2020ರ ಮೇ ತಿಂಗಳ ಬಿಲ್‌ ಪಾವತಿಯನ್ನು ಜ್ಯೇಷ್ಠತೆ ಆಧಾರದಲ್ಲಿ ಮಾಡಲಾಗುತ್ತಿದೆ ಎಂದರು.

ತಪ್ಪು ಬ್ಯಾಂಕ್‌ ವಿವರ

ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ನುಗ್ಗಿ ಹಾನಿಗೀಡಾದ ಮನೆಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಮಳೆ ನೀರು ನುಗ್ಗಿದ ಬಗ್ಗೆ ಪರಿಹಾರ ಪಡೆಯಲು 3,321 ಅರ್ಜಿಗಳು ಸಲ್ಲಿಕೆ ಆಗಿದ್ದವು. ಅದರಲ್ಲಿ 676 ಜನರ ಬ್ಯಾಂಕ್‌ ಖಾತೆ ವಿವರ ತಪ್ಪಾಗಿದ್ದು, ಅವರನ್ನು ಪುನಃ ಸಂಪರ್ಕಿಸಿ ಪರಿಹಾರ ವಿತರಿಸಲಾಗುತ್ತದೆ ಎಂದು ತುಳಸಿ ಮದ್ದಿನೇನಿ ತಿಳಿಸಿದರು.
 

Latest Videos
Follow Us:
Download App:
  • android
  • ios