SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ!
2022ನೇ ಸಾಲಿನಲ್ಲಿ ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ದೊಡ್ಡ ಶಾಕ್ ಎದುರಾಗಿದೆ. ಈ ಬಾರಿ ಎರಡು ಶಾಲೆಗಳು ಶೂನ್ಯ ಸಾಧನೆ ಮಾಡಿದ್ದು, ಶಿಕ್ಷಕರನ್ನು ವಜಾ ಮಾಡಿದೆ.
ಬೆಂಗಳೂರು (ಮೇ.26): 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ (SSLC Exam) ಶೇ.99.94 ರಷ್ಟು ಫಲಿತಾಂಶ ದಾಖಲಿಸಿದ ಬಳಿಕ ಈ ಸಾಲಿನಲ್ಲಿ ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ದೊಡ್ಡ ಶಾಕ್ ಎದುರಾಗಿದ್ದು, ಪುರಸಭೆಯಿಂದ ನಿರ್ವಹಣೆಯಾಗುತ್ತಿರುವ ಶಾಲೆಗಳಲ್ಲಿ (School) ಫಲಿತಾಂಶ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಎರಡು ಶಾಲೆಗೆ ನೋಟಿಸ್ ನೀಡಲಾಗಿದ್ದು, ಶಿಕ್ಷಕರನ್ನು ವಜಾ ಮಾಡಲಾಗಿದೆ.
ಬಿಬಿಎಂಪಿ (BBMP) ಶಾಲೆಗಳು 2022ನೇ ಸಾಲಿನ ಎಸ್ಎಸ್ ಶೇ.71.27 ರಷ್ಟು ತೇರ್ಗಡೆ ಫಲಿತಾಂಶವನ್ನು ಹೊಂದಿದ್ದು, ತೀವ್ರ ಕುಸಿತ ಕಂಡಿದೆ. ಜೊತೆಗೆ ಎರಡು ಶಿಕ್ಷಣ ಸಂಸ್ಥೆಗಳು ಶೂನ್ಯ ಸಾಧನೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್‌ನ 19 ವಿದ್ಯಾರ್ಥಿಗಳು ಮತ್ತು ಕೆ.ಜಿ.ನಗರದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
2020 ರಲ್ಲಿ ಶೇ.50.16 2019ರಲ್ಲಿ ಶೇ.52 ಮತ್ತು 2018 ರಲ್ಲಿ ಶೇ. 51 ಫಲಿತಾಂಶವಿತ್ತು. ಆ ವರ್ಷಗಳಿಗೆ ಹೋಲಿಸಿದರೆ 2022 ರ ಉತ್ತೀರ್ಣ ಶೇಕಡಾವಾರು ಶೇಕಡಾ 71.27 ರಷ್ಟಿದೆ. ವಾಸ್ತವವಾಗಿ, ಕೆ ಜಿ ನಗರ ಶಾಲೆಯು 2020 ರ ನಂತರ ಎರಡನೇ ಬಾರಿಗೆ ಶೂನ್ಯ ಶೇಕಡಾವನ್ನು ಪಡೆದುಕೊಂಡಿದೆ.
ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ
ಬಿಬಿಎಂಪಿಯ ಶಿಕ್ಷಣ ಸಹಾಯಕ ಆಯುಕ್ತ ಉಮೇಶ್ ಡಿ ಎಸ್ ಪ್ರಕಾರ, ಬಿಬಿಎಂಪಿ (Bruhat Bengaluru Mahanagara Palike) ಶಾಲೆಗಳ ಸುಧಾರಣೆಗೆ ಮೀಸಲಿಟ್ಟ ಹಣ ಸಾಕಾಗುವುದಿಲ್ಲ. “ನಾವು ಈ ವರ್ಷ ಸುಮಾರು 100 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದೇವೆ ಮತ್ತು ಕೇವಲ 70 ಕೋಟಿ ರೂಪಾಯಿಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಅದರಲ್ಲಿ 22 ಕೋಟಿ ರೂ.ಗಳನ್ನು ಶಿಕ್ಷಕರ ವೇತನಕ್ಕೆ ಮತ್ತು ಉಳಿದವು ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಈ ಪೈಕಿ ಬಹಳಷ್ಟು ಶಿಕ್ಷಕರು ಏಜೆನ್ಸಿ ಮೂಲಕ ಹೊರಗುತ್ತಿಗೆ ಪಡೆದಿದ್ದು, ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಯಾವೊಬ್ಬ ಶಿಕ್ಷಕರು ಶಿಕ್ಷಣದ ಗುಣಮಟ್ಟ ಸುಧಾರಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಹಲಸೂರಿನಲ್ಲಿರುವ ಮರ್ಫಿ ಟೌನ್ BBMP ಶಾಲೆಯಿದ್ದು, ಪ್ರಧಾನವಾಗಿ ತಮಿಳು ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ರಹೀಂ ಮಾತನಾಡಿ, ವಿದ್ಯಾರ್ಥಿಗಳು ಕನ್ನಡದ ವಿಷಯಗಳನ್ನು ಗ್ರಹಿಸಲು ಕಷ್ಟಪಡುತ್ತಾರೆ ಮತ್ತು ಕಳಪೆ ಸಾಧನೆ ಮಾಡುತ್ತಾರೆ ಎಂದಿದ್ದಾರೆ.
ಈ BBMP ಶಾಲೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ವಲಸೆ ಕಾರ್ಮಿಕರಾದ ತಮಿಳು ಮಾತನಾಡುವ ಪೋಷಕರ ಮಕ್ಕಳಾಗಿರುವುದರಿಂದ, ಅವರು ಕನ್ನಡವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಅಷ್ಟೇನೂ ಮಾಡುವುದಿಲ್ಲ. ವಾಸ್ತವವಾಗಿ, 19 ವಿದ್ಯಾರ್ಥಿಗಳಲ್ಲಿ 10 ಹುಡುಗರು ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅಂತ್ಯಕ್ರಿಯೆಯ ಸಮಯದಲ್ಲಿ ಡ್ರಮ್ ಬೀಟರ್‌ಗಳಾಗಿ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿಗಳು 15 ದಿನಗಳವರೆಗೆ ಶಾಲೆಯನ್ನು ಬಂಕ್ ಮಾಡಿದ್ದಾರೆ. ಮಾತ್ರವಲ್ಲ, ಹುಡುಗಿಯರು ಸಹ ಮನೆಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಹೀಗಾಗಿ ಓದಲು ಸಮಯ ಸಾಕಾಗುವುದಿಲ್ಲ. ಇವೆಲ್ಲ ಅಂಶಗಳು ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ವಿಶ್ವಾಸ ಇದೆ ಎಂದು ಅಬ್ದುಲ್ ರಹೀಂ ಹೇಳಿದ್ದಾರೆ.
Karnataka Legislative Assembly Recruitment 2022 ವಿವಿಧ 77 ಹುದ್ದೆಗಳಿಗೆ ನೇಮಕಾತಿ
ಆದರೆ ಬಿಬಿಎಂಪಿ ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಶಿಕ್ಷಕರನ್ನೂ ವಜಾ ಮಾಡಿದೆ. ಕಳಪೆ ಶೈಕ್ಷಣಿಕ ಸಾಧನೆಗೆ ವಿವರಣೆ ನೀಡುವಂತೆ ನಾವು ಶೋಕಾಸ್ ನೋಟಿಸ್ ನೀಡಿದ್ದೇವೆ. ಶೇ.50ಕ್ಕಿಂತ ಕಡಿಮೆ ಉತ್ತೀರ್ಣತೆ ಪಡೆದಿರುವ ಬಿಬಿಎಂಪಿ ಶಾಲೆಗಳಿಗೂ ಗುರುತು ಹಾಕಿದ್ದು, ಸುಧಾರಿಸಿಕೊಳ್ಳುವಂತೆ ಎಚ್ಚರಿಸಿದ್ದೇವೆ. ಈ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ತರಗತಿಗಳನ್ನು ಪರಿಚಯಿಸಲು, ನಾಗರಿಕ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಹೋಂ ವರ್ಕ್ ವ್ಯವಸ್ಥೆಯನ್ನು ಹೆಚ್ಚಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಬಿಬಿಎಂಪಿಯ ಶಿಕ್ಷಣ ಸಹಾಯಕ ಆಯುಕ್ತ ಉಮೇಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ವಿಭಾಗದ ಆಯುಕ್ತ ಶರತ್ ಬಿ, ಬಿಬಿಎಂಪಿ ತನ್ನ ಶಾಲೆಗಳ ಕ್ಷಮತೆಯ ಮೌಲ್ಯಮಾಪನ ಮಾಡಲಿದೆ, ತನ್ನ ವ್ಯಾಪ್ತಿಗೆ ಬರುವ ಶಿಕ್ಷಣ ಇಲಾಖೆಯನ್ನು ಸದೃಢಗೊಳಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಿದೆ. ಬಿಬಿಎಂಪಿ ಶಾಲೆಗಳ ಶಿಕ್ಷಕರಿಗೆ ಆಗಾಗ ಓರಿಯಂಟೇಶನ್ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಶಿಕ್ಷಕರು ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಿಐಇಟಿ) ಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈರವೇಶ್ವರನಗರ ಬಿಬಿಎಂಪಿ ಶಾಲೆಯ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಪಾಸ್ ಆಗುವ ಮೂಲಕ ಅತಿ ಹೆಚ್ಚು ಶೇಕಡಾ 91.52 ರಷ್ಟು ಫಲಿತಾಂಶ ಪಡೆದಿದೆ. ನಂತರದ ಸ್ಥಾನದಲ್ಲಿ ಹೇರೋಹಳ್ಳಿ ಶಾಲೆ ಇದ್ದು, 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಪಾಸ್ ಆಗುವ ಮೂಲಕ ಶೇಕಡಾ 90 ರಷ್ಟು ಫಲಿತಾಂಶ ಪಡೆದಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಜೂನ್ 27 ರಂದು ಪ್ರಾರಂಭವಾಗುವ ಪೂರಕ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.