ಮಲ್ಲಿಕಾರ್ಜುನ ದರಗಾದ 

ಹುನಗುಂದ(ಏ.18): ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ತಾಲೂಕಿನಾದ್ಯಂತ ಗುಂಪುಗೂಡುವುದಕ್ಕೆ, ಅನಗತ್ಯವಾಗಿ ಸುತ್ತಾಡುವುದಕ್ಕೆ ತಾಲೂಕು ಆಡಳಿತ ನಿರ್ಬಂಧ ಹೇರಿದ್ದರೂ ಪಟ್ಟಣದ ಬಹುತೇಕ ಯುವಕರು ಪೊಲೀಸರ ಕಣ್ತಪ್ಪಿಸಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ.

ದಿನೇ ದಿನೇ ವಾತಾವರಣದ ಪ್ರಖರತೆ ಹೆಚ್ಚುತ್ತಿದೆ. ಹಿರಿಯರೆಲ್ಲ ಮನೆಯಲ್ಲಿ ಉಳಿದಿದ್ದಾರೆ. ಆದರೆ, ಯುವಕರಿಗೆ ಮನೆಯಲ್ಲಿ ಇರಲು ಆಗುತ್ತಿಲ್ಲ. ಅನಗತ್ಯವಾಗಿ ತಿರುಗಲು ಪೊಲೀಸರು ಬಿಡುತ್ತಿಲ್ಲ. ಅಂಗಡಿಗಳಲ್ಲಿ ಏನೂ ಸಿಗುತ್ತಿಲ್ಲ. ಹೀಗಾಗಿ ನದಿ, ಕೆರೆ, ಬಾವಿ ಸೇರಿದಂತೆ ಜಲಮೂಲಗಳಿಗೆ ಹೋಗಿ ನೀರಾಟ ಆಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ತೋಟದ ಮನೆಗಳಿಗೆ ಹೋಗಿ ಪಾರ್ಟಿ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಅವರು ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲನೆ ಮಾಡುತ್ತಿಲ್ಲ.

ಕೊರೋನಾ ಕರಿ ಛಾಯೆ: ಕೂಡಲಸಂಗಮ ರಥೋತ್ಸವ ರದ್ದು

ಸಾಮಾನ್ಯವಾಗಿ ಕೂಡಲಸಂಗಮದ ಸಂಗಮನಾಥನ ದೇವಾಲಯದ ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದ ಸ್ಥಳದಲ್ಲಿ ತಾಲೂಕಿನ ಜನತೆಯ ಸುಳಿವು ಇರುತ್ತಿರಲಿಲ್ಲ. ಬೆರೆ ಕಡೆಯಿಂದ ಬಂದ ಜನರೇ ಇಲ್ಲಿ ಕಾಣುತ್ತಿದ್ದರು. ಆದರೆ ಈಗ ಕೃಷ್ಣಾ-ಮಲಪ್ರಭಾ ನದಿಗಳ ಸಂಗಮ ಸ್ಥಳ ಸೇರಿ ಈ ನದಿಗಳ ತೀರದಲ್ಲಿ ಸ್ಥಳಿಯ ಯುವಕರ ದಂಡೇ ಕಾಣಿಸುತ್ತಿದೆ. ನದಿ, ಕೆರೆ, ಬಾವಿಗಳ ಆಳಕ್ಕೆ ಹೋಗಿ ಸಾಹಸ ಮಾಡುವುದು. ಮೆಲಿನಿಂದ ಜಿಗಿಯುವುದನ್ನು ಟಿಕ್‌ ಟಾಕ್‌ ರೇಕಾರ್ಡಿಂಗ್‌ನಂತಹ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತುಕೊಳ್ಳಲು ಅಗುತ್ತಿಲ್ಲ. ಬೇಸಿಗೆಯ ಬಿಸಿಲು ಹೆಚ್ಚಾಗಿ ನೆತ್ತಿ ಸುಡುತ್ತಿದೆ. ಹೀಗಾಗಿ ನದಿ, ಬಾವಿ, ಕೆರೆಯಲ್ಲಿ ಈಜಾಡಿ ದೇಹ ತಂಪು ಮಾಡಿಕೊಳ್ಳುತ್ತಿದ್ದೇವೆ ಹೊರತು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡುತ್ತಿಲ್ಲ ಎಂದು ಯುವಕನೊಬ್ಬ ಕನ್ನಡಪ್ರಭಕ್ಕೆ ಹೇಳಿದ್ದಾನೆ.

ಕ್ರೀಡೆ, ವಾಯುವಿಹಾರ ಅಭಾದಿತ:

ಯುವಕರು ನಿತ್ಯ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ ವಾಯುವಿಹಾರಕ್ಕೆ ಬರುವರರ ಸಂಖ್ಯೆಯೂ ಕಮ್ಮಿ ಇಲ್ಲ. ಪುರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ಪ್ರತಿನಿತ್ಯ ಅಟೋಗಳಲ್ಲಿ ಅಂತರ ಕಾಯ್ದುಕೊಳ್ಳಿ, ಮುಖಕ್ಕೆ ಮಾಸ್ಕ್‌ ಧರಿಸಿ ಎಂಬ ಜಾಗೃತಿ ಮೂಡಿಸುತ್ತದ್ದರೂ ಎಲ್ಲರೂ ಅದನ್ನು ಪಾಲಿಸುತ್ತಿಲ್ಲ. ಗುಂಪು ಗುಂಪಾಗಿ ಪಟ್ಟಣದ ಅಂಗಡಿ ಲೇಔಟ್‌, ಲಾರಿ ಪಾರ್ಕಿಂಗ್‌, ತಾಲೂಕು ಕ್ರೀಡಾಂಗಣ, ವಿಎಂ. ಕಾಲೇಜು ಮೈದಾನ ಸೇರಿ ಅನೇಕ ಕಡೆಗಳಲ್ಲಿ ಜನ ವಾಯುವಿವಾರ ನಡೆಸುತ್ತಿದ್ದಾರೆ.

ವಾಯುವಿಹಾರ ನಡೆಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಯಾರು ಮನೆಯಿಂದ ಹೊರಗಡೆ ಬರದೇ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಹೆಚ್ಚು ಸೂಕ್ತ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.