ಯುವಕನೊಬ್ಬ ರಾತ್ರೋರಾತ್ರಿ ಫೇಮಸ್ ಆಗಲು ಎಐ ತಂತ್ರಜ್ಞಾನ ಬಳಸಿ ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದಂತೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ದಾನೆ. ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಬೆಂಗಳೂರು ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ಹೇಳಿ-ಕೇಳಿ ಇದು ಎಐ ಯುಗ. ಯಾರು ಏನು ಬೇಕಾದರೂ ಮಾಡಬಹುದು. ಇದು ಅಸಲಿನೋ, ನಕಲಿನೋ ಎಂದು ತಿಳಿಯದ ಮಟ್ಟಿಗೆ ಈ ವಿಡಿಯೋ ಕಾಣಿಸುತ್ತದೆ. ರಾಜಕಾರಣಿಗಳು, ಅವರ ಬೆಂಬಲಿಗರು ತಮಗೆ ಆಗದವರ ವಿರುದ್ಧ ಇದೇ ರೀತಿ ಏನೇನೋ ಎಐ ಫೋಟೋಗಳನ್ನು ಹರಿಬಿಟ್ಟು ಹೆಸರು ಕೆಡಿಸಲು ನೋಡುವುದು ಇದೆ. ಅಸಭ್ಯ, ಅಶ್ಲೀಲ ಎನ್ನಿಸುವಂಥ ಚಿತ್ರಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೂ, ಅವರ ವಿರುದ್ಧ ಯಾರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ, ಇದು ಅವ್ಯಾಹತವಾಗಿ ನಡೆಯುತ್ತಿದೆ. ರಾತ್ರೋರಾತ್ರಿ ಫೇಮಸ್ ಆಗಬೇಕು ಎನ್ನುವ ಕಾರಣದಿಂದ ಯುವಕನೊಬ್ಬ ಈಗ ಇದೇ ಎಐ ತಂತ್ರಜ್ಞಾನ ಬಳಸಿ ವಿಧಾನಸೌಧಕ್ಕೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಿದಂತೆ ವಿಡಿಯೋ ಅಪ್‌ಲೋಡ್ ಮಾಡಿದ್ದಾನೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೊದಲ್ಲಿ ಕಿಡಿಗೇಡಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ದಸರಾ ವೇಳೆ ಆತಂಕ ಸೃಷ್ಟಿಸಲು ಯತ್ನಿಸಿದ್ದಾನೆ. Jnx king Hg ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಎಐ ತಂತ್ರಜ್ಞಾನ ಬಳಸಿ ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಉಗ್ರನಂತೆ ಬಿಂಬಿಸಿಕೊಂಡಿದ್ದಾನೆ!
ಈ ವಿವಾದಾತ್ಮಕ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಈ ವಿಡಿಯೋ ಕೆಳಗೆ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದಾರೆ. ಪೊಲೀಸರನ್ನು ಟ್ಯಾಗ್ ಮಾಡಿ, ಹಬ್ಬದ ದಿನ ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿರುವ ಈ ಯುವಕನ ವಿರುದ್ಧ ಕೂಡಲೇ ಕಾನೂನು ಕ್ರಮ ಜಾರಿಯಾಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಈಗ ವಿರೋಧ, ಆಮೇಲೆ...?
ಬಾಂಬ್ ಬ್ಲಾಸ್ಟ್ ಮಾಡುವಂಥ ಮನಸ್ಥಿತಿ ಇರುವಾಗ ಈತ ಯಾರಿರಬಹುದು, ನಿಜಕ್ಕೂ ಈತನ ಉದ್ದೇಶ ಏನು ಎನ್ನುವ ಬಗ್ಗೆ ದೊಡ್ಡ ಮಟ್ಟಿನ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಮೊದಲೇ ಹೇಳಿದಂತೆ ತಮಗೆ ಆಗದವರ ವಿರುದ್ಧ ಎಐ ವಿಡಿಯೋ ಮಾಡಿ ಹರಿಬಿಡುವುದು ಇದೆ. ಆದರೆ ಈ ರೀತಿ ಬಾಂಬ್ ಬ್ಲಾಸ್ಟ್ ಮಾಡುವಂಥ ಮನಸ್ಥಿತಿ ಇರುವುದು ದೊಡ್ಡ ಮಟ್ಟಿನ ಅಪಾಯ, ಈ ಯುವಕನ ಹಿನ್ನೆಲೆ ಬಗ್ಗೆ ತನಿಖೆ ಆಗಬೇಕು. ಈತನಿಗೆ ಕಠಿಣಾತಿಕಠಿಣ ಶಿಕ್ಷೆ ಕೊಡಬೇಕು. ಇನ್ನು ಮುಂದೆ ಯಾರೂ ಇಂಥ ವಿಡಿಯೋ ಹಾಕಲು ಧೈರ್ಯ ಮಾಡದ ಸ್ಥಿತಿ ನಿರ್ಮಾಣ ಆಗಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ದುರದೃಷ್ಟ ಎಂದರೆ, ಈಗ ಹೀಗೆ ಶಿಕ್ಷೆಗೆ ಆಗ್ರಹಿಸುವವರೇ ಕೊನೆಗೆ ಆತನ ಜಾತಿ, ಧರ್ಮ ಎಲ್ಲವೂ ಹೊರಕ್ಕೆ ಬಂದಾಗ, ಶಿಕ್ಷೆ ನೀಡಿದ ಕೋರ್ಟ್ಗಳ ವಿರುದ್ಧವೇ ಮಾತನಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಏನೂ ಇಲ್ಲದಾಗ ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ ಎಂದು ಕೇಳುವವರೂ ಇವರೇ. ಆದ್ದರಿಂದ ಇಂಥಮನಸ್ಥಿತಿ ನಿಲ್ಲುವವರೆಗೂ, ಈ ರೀತಿ ವಿಡಿಯೋ ಹರಿಬಿಡುವವರು, ವಿಡಿಯೋ ಮಾತ್ರವಲ್ಲದೇ, ನಿಜಕ್ಕೂ ಇಂಥಕೃತ್ಯ ಮಾಡಲೂ ಹೇಸದವರು ಮುಂದುವರೆಯುತ್ತಲೇ ಇರುತ್ತಾರೆ. ಜಾತಿ- ಧರ್ಮದ ವಿಷಯ ಬಂದಾಗ ಓಡೋಡಿ ಅವರ ಪರವಾಗಿ ನಿಲ್ಲುವ ಜನರು ಇರುವವರೆಗೂ ಇದು ಮುಂದುವರೆಯುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯೂ ಆಗುತ್ತಿದೆ.


