ಅಂಕೋಲಾದ ಮಾದನಗೇರಿ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸಂಕಷ್ಟಿ ಅಂಗವಾಗಿ ಒಂದೇ ರಾತ್ರಿಯಲ್ಲಿ 25 ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಒಡೆಯಲಾಯಿತು. ದೇವಸ್ಥಾನದ ಮಹಾಪಾತ್ರಿ ಸುನಿಲ್ ಪೈ ಅವರು ಭಕ್ತರ ಸಂಕಷ್ಟ ಪರಿಹಾರಕ್ಕಾಗಿ ಈ ಅಪರೂಪದ ಧಾರ್ಮಿಕ ಸೇವೆ ನೆರವೇರಿಸಿದರು.
ರಾಘು ಕಾಕರಮಠ
ಅಂಕೋಲಾ: ಒಂದು ತೆಂಗಿನಕಾಯಿ ಒಡೆಯುವುದೇ ಕೆಲವೊಮ್ಮೆ ಪ್ರಯಾಸದ ಕೆಲಸ. ಆದರೆ ಸಾವಿರಾರು ಭಕ್ತರ ಸಂಕಷ್ಟ ಪರಿಹಾರಕ್ಕಾಗಿ ಒಂದೆರಡಲ್ಲ, ಬರೋಬ್ಬರಿ 25 ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಒಂದೇ ರಾತ್ರಿಯಲ್ಲಿ ಎಡೆಬಿಡದೆ ಒಡೆಯುವುದು ಎಂದರೆ ಸಾಮಾನ್ಯ ಸಂಗತಿಯಲ್ಲ. ಇಂತಹ ಅಪರೂಪದ ಧಾರ್ಮಿಕ ಆಚರಣೆಗೆ ತಾಲೂಕಿನ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಾಲಯ ಸಾಕ್ಷಿಯಾಯಿತು.
ಕಾರ್ತಿಕ ಮಾಸದ ಸಂಕಷ್ಟಿ ಉತ್ಸವದ ಅಂಗವಾಗಿ ನಡೆದ ಈ ವಿಶಿಷ್ಟ ಸೇವೆಯಲ್ಲಿ ದೇವಸ್ಥಾನದ ಮಹಾಪಾತ್ರಿ ಸುನಿಲ್ ಪೈ ಅವರು 25 ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಭಕ್ತರ ಗಮನ ಸೆಳೆದರು. ಒಂದೆಡೆ ತೆಂಗಿನಕಾಯಿ ಒಡೆಯುವ ಸದ್ದು, ಮತ್ತೊಂದೆಡೆ ದೇವರ ಜಯಘೋಷ, ಇನ್ನೊಂದೆಡೆ ಸಾವಿರಾರು ಭಕ್ತರ ಭಕ್ತಿಭಾವದ ಉದ್ಘಾರದ ನಡುವೆ ಇಡೀ ದೇವಾಲಯದ ಪರಿಸರವೇ ಭಕ್ತಿಯ ರೋಮಾಂಚನದಲ್ಲಿ ಮಿಂದೆದ್ದಿತ್ತು.
ಸಂಕಷ್ಟ ಪರಿಹಾರಕ್ಕೆ ಅಪರೂಪದ ಸೇವೆ
ಇಲ್ಲಿನ ಆಚರಣೆಯ ವಿಶೇಷತೆಯೇ ವಿಶಿಷ್ಟ. ಜೀವನದ ನಾನಾ ಸಮಸ್ಯೆಗಳಿಂದ ಬಳಲುವ ಭಕ್ತರು ದೇವರ ದರ್ಶನ ಕಾರ್ಯಕ್ರಮದಲ್ಲಿ ಮಹಾಪಾತ್ರಿಗಳಿಂದ ಉತ್ತರ ಹಾಗೂ ಪರಿಹಾರ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಸೂಚಿಸಿದ ಸಂಖ್ಯೆಯಷ್ಟು ತೆಂಗಿನಕಾಯಿಗಳನ್ನು ದೇವರಿಗೆ ಹರಕೆಯ ರೂಪದಲ್ಲಿ ಸಮರ್ಪಿಸುತ್ತಾರೆ. ಹೀಗೆ ಭಕ್ತರು ಅರ್ಪಿಸಿದ ತೆಂಗಿನಕಾಯಿಗಳನ್ನು ಮಹಾಪಾತ್ರಿಗಳು ಭಕ್ತರ ಸಮ್ಮುಖದಲ್ಲಿಯೇ ಒಡೆದು ಸೇವೆ ಸಲ್ಲಿಸುತ್ತಾರೆ.
ಪ್ರತಿವರ್ಷ ಕಾರ್ತಿಕ ಮಾಸದ ಸಂಕಷ್ಟಿಯಂದು ನಡೆಯುವ ಈ ಸೇವೆ ನೋಡಲು ನಾಡಿನ ವಿವಿಧ ಭಾಗಗಳಲ್ಲಷ್ಟೇ ಅಲ್ಲದೆ ಹೊರನಾಡಿನಿಂದಲೂ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಕೂಡ ಭಕ್ತರ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.
ಶುಕ್ರವಾರ ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿಯ ನಂತರ ಮತ್ತೊಂದು ಅಚ್ಚರಿಯ ಕ್ಷಣ ಭಕ್ತರ ಗಮನ ಸೆಳೆಯಿತು. ಉರಿಯುತ್ತಿದ್ದ ಯಜ್ಞಕುಂಡದಿಂದ ಮಹಾಪಾತ್ರಿ ಸುನಿಲ್ ಪೈ ಅವರು ಬರಿಗೈಯಲ್ಲಿ ಕೆಂಡವನ್ನು ತೆಗೆದು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿದರು. ಈ ಅಪರೂಪದ ಆಚರಣೆಯನ್ನು ಕಂಡ ಭಕ್ತರು ಭಕ್ತಿಭಾವದಿಂದ ಕೈಮುಗಿದು ದೇವರ ಸ್ಮರಣೆ ಮಾಡಿದರು.
ದೇವಸ್ಥಾನದ ಧರ್ಮದರ್ಶಿಯೂ ಆಗಿರುವ ಸುನಿಲ್ ಪೈ ಅವರು ದೇವರನ್ನು ಆವಾಹನೆ ಮಾಡಿಕೊಂಡು ತೆಂಗಿನಕಾಯಿ ಸೇವೆಯನ್ನು ನೆರವೇರಿಸಿದರು. ಶುಕ್ರವಾರ ರಾತ್ರಿ ಆರಂಭಗೊಂಡ ಈ ವಿಶಿಷ್ಟ ಸೇವೆ ಶನಿವಾರ ಬೆಳಗ್ಗೆ 7.50 ಕ್ಕೆ ಸಂಪನ್ನಗೊಂಡಿತು. ಈ ಅವಧಿಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಒಡೆಯಲಾಯಿತು. ಉತ್ಸವದ ಸಂದರ್ಭದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಮಾದನಗೇರಿಯ ದರ್ಶನದ ವೈಶಿಷ್ಟ್ಯ!
ತಾಲೂಕು ಕೇಂದ್ರದಿಂದ ಸುಮಾರು 16 ಕಿಮೀ ದೂರದಲ್ಲಿರುವ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಾಲಯ ಧಾರ್ಮಿಕ ನಂಬಿಕೆ ಮತ್ತು ವಿಶಿಷ್ಟ ಆಚರಣೆಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕಳೆದ ಸುಮಾರು 30 ವರ್ಷಗಳಿಂದ ಇಲ್ಲಿ ನಿರಂತರವಾಗಿ ನಡೆಯುತ್ತಿರುವ ದರ್ಶನ ಕಾರ್ಯಕ್ರಮ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: ಸಿಂಗಾಪುರದ ತಟ್ಟೆಯಲ್ಲಿ ಅಂಕೋಲಾ ಫೇಮಸ್ ಏಡಿ; ವಿಮಾನ ಏರುವ ಮಾದನಗೇರಿಯ ಕಲ್ಲು ಜೆಂಜಿ
ಮಾದನಗೇರಿ ಗ್ರಾಮದ ಪೈ ಕುಟುಂಬದವರಿಗೆ ಮನೆಯ ಸಮೀಪ ದೊರೆತ ಸಿದ್ಧಿವಿನಾಯಕನ ವಿಗ್ರಹ ಹಾಗೂ ಅವರ ಕುಲದೇವತೆಯಾದ ಮಹಾಲಸಾ ದೇವಿಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಲಾಗಿದೆ. 1987ರಲ್ಲಿ ಪೈ ಕುಟುಂಬದ ಯುವಕ ಸುನಿಲ್ ಪೈ ಅವರಿಗೆ ದರ್ಶನದ ಯೋಗ ಸಿದ್ಧಿಸಿತು. ಅಂದಿನಿಂದ ಈ ಧಾರ್ಮಿಕ ಪರಂಪರೆ ನಿರಂತರವಾಗಿ ಮುಂದುವರಿದಿದೆ.
ಇದನ್ನೂ ಓದಿ: ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ, ಡಿಕೆ ಶಿವಕುಮಾರ್ ಮಹತ್ವದ ಘೋಷಣೆ












