Asianet Suvarna News Asianet Suvarna News

ಹಸುಗಳ ಮೇಲೆ ಕಟುಕರ ಕಣ್ಣು: ಗೋ ಶಾಲೆ ತೆರೆಯಲು ಯುವ ಬ್ರಿಗೇಡ್ ಆಗ್ರಹ

ಸರ್ಕಾರದ ಕಾನೂನೂ ಗಾಳಿಗೆ ತೂರಿ ಬೀದಿಯಲ್ಲಿ ಬಿಟ್ಟಿಯಾಗಿ ಸಿಗುವ ಗೂಳಿಗಳ ಮೇಲೆ ಕಣ್ಣು ಹಾಕಿದ ಕಟುಕರು 

Youth Brigade Demand to Open Gaushala in Mysuru grg
Author
Bengaluru, First Published Aug 9, 2022, 1:17 PM IST

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌,  ಮೈಸೂರು

ಮೈಸೂರು(ಆ.09):  ಗೋ ರಕ್ಷಣೆಗಾಗಿ ರಾಜ್ಯ ಸರ್ಕಾರ ಕಠಿಣ ಕಾನೂನೂ ಜಾರಿ ಮಾಡಿದ್ದರೂ, ಕಟುಕರಿಂದ ಹಸುಗಳನ್ನು ರಕ್ಷಣೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಮನೆಯಲ್ಲಿರುವ ಗೋವುಗಳ ರಕ್ಷಣೆ ಒಂದೆಡೆಯಾದರೆ ಬೀದಿಯಲ್ಲಿರುವ ದೇವರ ಗೂಳಿಗಳನ್ನು ರಕ್ಷಣೆ ಮಾಡೋರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸರ್ಕಾರದ ಕಾನೂನೂ ಗಾಳಿಗೆ ತೂರಿರುವ ಕಟುಕರು ಬೀದಿಯಲ್ಲಿ ಬಿಟ್ಟಿಯಾಗಿ ಸಿಗುವ ಗೂಳಿಗಳ ಮೇಲೆ ಕಣ್ಣು ಹಾಕಿದ್ದಾರೆ. ನಂಜುಂಡೇಶ್ವರನ ಸನ್ನಿದಿಯಲ್ಲಿ ಗೂಳಿ ಕದಿಯುವ ವಿಫಲ ಯತ್ನ ನಡೆದಿದ್ದು, ಇದರಿಂದ ಕೆರಳಿದ ಯುವ ಬ್ರಿಗೇಡ್ ಸದಸ್ಯರು ಸಿಎಂ‌ಗೆ ಪತ್ರ ಬರೆದು ಗೋ ಶಾಲೆ ತೆರೆಯುವಂತೆ ಆಗ್ರಹಿಸಿದ್ದಾರೆ.

ಗೋವುಗಳ ರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನ

ನಂಜನಗೂಡು ಶ್ರೀಕಂಠೇಶ್ವರ ದೇವರಿಗೆ ಬಿಡುವ ಗೂಳಿಗಳ ರಕ್ಷಣೆಗೆ ಈಗ ಸ್ವತಃ ಪಟ್ಟಣದ ನಾಗರೀಕರೇ ಮುಂದಾಗಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಕಟುಕರ ಕಣ್ಣು ಬೀದಿ ದನಗಳ‌ ಮೇಲೆ ಬಿದ್ದಿದ್ದು, ಅಂತಹವರಿಂದ ಗೂಳಿಗಳ ರಕ್ಷಣೆ ಮಾಡಲು ನಂಜನಗೂಡು ಪಟ್ಟಣದ ಯುವ ಬ್ರಿಗೇಡ್ ಸದಸ್ಯರು ಮುಂದಾಗಿದ್ದಾರೆ. ಗೂಳಿಗಳ‌ ರಕ್ಷಣೆಗಾಗಿ ಶ್ರೀಕಂಠೇಶ್ವರ ದೇವಾಲಯದ ವತಿಯಿಂದಲೇ ಗೋಶಾಲೆ ತೆರೆಯುವಂತೆ ಅವರು ಒತ್ತಾಯಿಸಿದ್ದಾರೆ. ಇದಕ್ಕಾಗಿ ದೇವಸ್ಥಾನದ ಮುಂಭಾಗ ಭಕ್ತರು ಹಾಗೂ ನಾಗರೀಕರಿಂದ ಸಹಿ ಸಂಗ್ರಹ ಅಭಿಯಾನ ನಡೆದಿದ್ದು, ನಾಗರೀಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ

Youth Brigade Demand to Open Gaushala in Mysuru grg

ದೇವರ ದರ್ಶನಕ್ಕೆ ಬಂದವರೆಲ್ಲ ಸಹಿ ಹಾಕಿ ಬೆಂಬಲ

ಇನ್ನು ನಂಜನಗೂಡು ಶ್ರೀಕಂಠೇಶ್ವರ ದೇವರ ದರ್ಶನಕ್ಕೆ ಬಂದ ಭಕ್ತರೆಲ್ಲರೂ ಯುವ ಬ್ರಿಗೇಡ್ ಸದಸ್ಯರು ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದರು. ದೇವಸ್ಥಾನಕ್ಕೆ ಸೇರಿದ ಸಾಕಷ್ಟು ಭೂಮಿ ಪಾಳು ಬಿದ್ದಿದ್ದು, ಅದರಲ್ಲಿ ಗೋ ಶಾಲೆ ತೆರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿ ತಿಂಗಳು 6 ರಿಂದ 8 ಹಸುಗಳನ್ನು ಹರಕೆಯ ರೂಪದಲ್ಲಿ ಭಕ್ತರು ದೇವಸ್ಥಾನಕ್ಕೆ ನೀಡುತ್ತಾರೆ. ಆರಂಭದಲ್ಲಿ ಈ‌ ಹಸುಗಳು ಮೇಯಲು ದೇವಸ್ಥಾನದ ಗೋಮಾಳ ಇತ್ತಾದರೂ ಈಗ ಅದು ಕಣ್ಮರೆ ಆಗಿದೆ. ಇದರಿಂದ ಹರಕೆಯ ಗೂಳಿಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇದನ್ನು ಸರಿಪಡಿಸಲು ದೇವಸ್ಥಾನದ ವತಿಯಿಂದಲೇ ಗೋಶಾಲೆ ಮಾಡಬೇಕು ಎಂಬುದು ಯುವ ಬ್ರಿಗೇಡ್ ಸದಸ್ಯರ ಒತ್ತಾಯವಾಗಿದೆ.

ಗೋ ಶಾಲೆಗಾಗಿ ಸಿಎಂ‌ಗೆ ಪತ್ರ

ಸ್ಥಳೀಯರ ಸಹಿ ಸಂಗ್ರಹ ಹೊಂದಿರುವ ಪತ್ರವನ್ನು ಸಿಎಂ‌ಗೆ ಕಳುಹಿಸಿರುವ ಸದಸ್ಯರು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಗೋ ರಕ್ಷಣೆಗೆ ಗೋಶಾಲೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಯುವ ಬ್ರಿಗೇಡ್ ಸದಸ್ಯರು ಸಿಎಂ‌ಗೆ ಬರೆದ ಪತ್ರದ ವಿವರ ಇಂತಿದೆ.

ಗೌರವಾನ್ವಿತ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ಬೆಂಗಳೂರು.
ವಿಷಯ: ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವತಿಯಿಂದ ಗೋ ಶಾಲಾ ಆರಂಭಿಸಲು ಹಕ್ಕೊತ್ತಾಯ.

ದಕ್ಷಿಣ ಕಾಶಿ ಎಂದ ಪ್ರಸಿದ್ಧವಾಗಿರುವ ನಂಜನಗೂಡು ಶ್ರೀಕಂಠೇಶ್ವರನಿಗೆ ಹಲವು ರೀತಿಯಲ್ಲಿ ಹರಕೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಅವುಗಳಲ್ಲಿ ಲಿಂಗ ಮುದ್ರೆಯೊತ್ತಿ ಹರಿಕೆ ರೂಪದಲ್ಲಿ ಗೂಳಿ ಬಿಡುವುದು ಒಂದು ಪ್ರಮುಖ ಹರಕೆಯಾಗಿದೆ. ಈ ಹರಕೆಯನ್ನು ನಮ್ಮ ರಾಜ್ಯದ ಭಕ್ತರಲ್ಲದೇ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಭಕ್ತರು ಹರಿಕೆ ರೂಪದಲ್ಲಿ ಹೋರ್ಗರ (ಗಂಡು ಕರು) ಗಳನ್ನು ಹೊತ್ತು ತಂದು ಲಿಂಗ ಮುದ್ರೆಯೊತ್ತಿಸಿ ದೇವರಿಗೆ ಬಿಡುವುದು ಪ್ರತೀತಿ. ಒಂದು ಕೋನದಲ್ಲಿ ಇದು ದೇವರಿಗೆ ಹರಕೆ ಸಲ್ಲಿಸುವುದಾದರೆ, ಗೋವುಗಳ ತಳಿಯನ್ನು ಉಳಿಸುವುದು ಮತ್ತೊಂದು ಉದ್ದೇಶವಾಗಿತ್ತು.

ಜಿಟಿ ಜಿಟಿ ಮಳೆಯಲ್ಲಿ ಕಾಡಿನಿಂದ ನಾಡಿಗೆ ದಸರಾ ಗಜ ಪಯಣ

ಹಾಗಾಗಿಯೇ ನಂಜುಂಡೇಶ್ವರನ ಹೆಸರಿನಲ್ಲಿ ಹಳ್ಳಿಕಾರ್, ಅಮೃತ್ ಮಹಾಲ್, ದೇವಣಿ, ಕಿಲ್ಲಾರ್, ಓಂಗೋಲ್,ಕಂಗಾಯಮ್ ಹೀಗೆ ಹಲವು ತಳಿಗಳ ಗಂಡು ಕರುಗಳಿಗೆ ದೇವಾಲಯದ ಮುಂದೆ ಲಿಂಗ ಮುದ್ರೆಯೊತ್ತಿ ಪೂಜೆ ಸಲ್ಲಿಸಿ ಬಿಟ್ಟು ಬಿಡುತ್ತಾರೆ. ಹೀಗೆ ತಿಂಗಳಿಗೆ ಕನಿಷ್ಠ 5-6 ಕರುಗಳಾದರು ಹರಕೆ ರೂಪದಲ್ಲಿ ದೇವಾಯದ ಅಂಗಳ ಸೇರುತ್ತವೆ. ಇಂತಹ ಗೂಳಿಗಳ ಮೇವಿಗೆಂದು ದೇವಾಲಯದ ಮುಂಭಾಗದ ಗುಂಡ್ಲು ನದಿ ತೀರದಲ್ಲಿ ಎಕರೆ ಗಟ್ಟಲೇ ಗೋಮಾಳಗಳಿದ್ದುವು. ಗೂಳಿಗಳು ಹೆಚ್ಚಾದರೆ ದೇವನೂರು ಸೇರಿದಂತೆ ಹಲವು ಮಠಗಳಿಗೆ ಕಳುಹಿಸುವ ಪದ್ಧತಿಯೂ ಹಿಂದೆ ಇತ್ತು. 2002 ರಲ್ಲಿ ದೇವಾಲಯದ ಸವಾಂರ್ಗೀಣ ಅಭಿವೃದ್ಧಿ ಕೈಗೊಂಡ ಸಮಯದಲ್ಲಿ ಗೋಮಾಳಗಳೆಲ್ಲ ಕಟ್ಟಡ, ಪಾರ್ಕ್ ಗಳಾಗಿ ನಿರ್ಮಾಣಗೊಂಡ ಪರಿಣಾಮ ಗೋ ಮಾಳದಲ್ಲಿ ಮೇಯುತ್ತಿದ್ದ ಗೂಳಿಗಳು ಬೀದಿಗೆ ಬಿದ್ದವು.

ದೇವಾಲಯ ಸುತ್ತಮುತ್ತಲು ಓಡಾಡಿಕೊಂಡಿರುವ ಈ ದೇವರ ಕರುಗಳಿಗೆ ಸ್ಥಳಿಯ ನಿವಾಸಿಗಳು ಅಂಗಡಿ, ಹೋಟೆಲ್ ಮಾಲೀಕರು ದೇವಾಲಯಕ್ಕೆ ಬರುವ ಭಕ್ತರು ನಂಜುಂಡಪ್ಪನ ಗೂಳಿ ಎಂದು ಅಕ್ಕಿ, ಬೆಲ್ಲ, ಹಣ್ಣು, ತರಕಾರಿಗಳನ್ನು ನೀಡಿ ಸಲಹುತ್ತಾ ಕರುಗಳನ್ನು ದಷ್ಟಪುಷ್ಪ ಗೂಳಿಗಳನ್ನಾಗಿಸುತ್ತಾರೆ.

ಸೌಮ್ಯ ಸ್ವಭಾವದ ಜನ ಸ್ನೇಹಿ ಆದ ಈ ಗೂಳಿಗಳ ಸ್ವಭಾವ ಅರಿತ ಮತಾಂಧರು ರಾತ್ರೋರಾತ್ರಿ ಕಸಾಯಿ ಖಾನೆಗೆ ಕದ್ದೊಯ್ದು ದೇವರ ಗೂಳಿಗಳನ್ನು ಕೊಂದುತ್ತಿನ್ನುತ್ತಿರುವುದು ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು ಇದು ಶ್ರೀಕಂಠೇಶ್ವರನ ಭಕ್ತರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತಿದೆ. ಈ ಕೃತ್ಯದ ವಿರುದ್ಧ ಹಲವು ಬಾರಿ ಭಕ್ತರು ಹಾಗೂ ಹಿಂದೂಪರ ಸಂಘಟನೆ ಧ್ವನಿ ಎತ್ತಿವೇಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಹೀಗೆ ಮುಂದುವರೆದರೆ ಮುಂದೆ ಕೋಮು ಸಂಘರ್ಷಕ್ಕೂ ಕಾರಣವಾಗಲಿದೆ.

ಶ್ರೀಕಂಠೇಶ್ವರನ ದೇವಾಲಯಕ್ಕೆ ಹಣ, ಸಿಬ್ಬಂದಿ, ಜಾಗ ಎಲ್ಲವೂ ಇದೆ. ಆದ್ದರಿಂದ ದೇವರ ಹರಕೆ ಗೂಳಿಗಳ ರಕ್ಷಣೆಗೆ ಮುಂದಾಗಿ. ದೇವಾಲಯದ ವತಿಯಿಂದಲೇ ಗೋ ಶಾಲೆ ಆರಂಭಿಸಿ ಭಕ್ತರ ಭಾವನೆ ಹಾಗೂ ಹರಿಕೆ ಗೋವುಗಳ ಸಂರಕ್ಷಣೆ ಮತ್ತು ಮುಂದೆ ಆಗುವ ಕೋಮು ಸಂಘರ್ಷಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಂಡು ಗೋ ಶಾಲೆ ನಿರ್ಮಿಸಬೇಕಾಗಿ ಸವಿನಯ ಪ್ರಾರ್ಥನೆ.
ತಾವು ನಮ್ಮ ಆಗ್ರಹವನ್ನು ಮಾನ್ಯ ಮಾಡಬೇಕೆಂದು ಶ್ರೀಕಂಠೇಶ್ವರನ ಭಕ್ತರಾಗಿ, ಭಾರತದ ಪ್ರಜೆಯಾಗಿ ನಾವು ಆಗ್ರಹಿಸುತ್ತವೆ.
ವಂದನೆಗಳು....
ಇಂತಿ,
ನಂಜನಗೂಡು ನಾಗರೀಕರು ಹಾಗೂ ಯುವ ಬ್ರಿಗೇಡ್ ಸದಸ್ಯರು.
 

Follow Us:
Download App:
  • android
  • ios