Asianet Suvarna News Asianet Suvarna News

ಜಿಟಿ ಜಿಟಿ ಮಳೆಯಲ್ಲಿ ಕಾಡಿನಿಂದ ನಾಡಿಗೆ ದಸರಾ ಗಜ ಪಯಣ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆ ಚಾಲನೆ ದೊರೆಯಿತು. 

Dasara Elephants Gajapayana Starts From Nagarahole gvd
Author
Bangalore, First Published Aug 8, 2022, 10:30 PM IST

ಬಿ. ಶೇಖರ್‌ ಗೋಪಿನಾಥಂ

ವೀರನಹೊಸಹಳ್ಳಿ (ಹುಣಸೂರು ತಾಲೂಕು) (ಆ.08): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆ ಚಾಲನೆ ದೊರೆಯಿತು. ದಸರೆಯಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು.

ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯ ನೇತೃತ್ವದಲ್ಲಿ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ ಮತ್ತು ಲಕ್ಷೀ್ಮ ಆನೆಗಳು ಲಾರಿಯ ಮೂಲಕ ಸಂಜೆ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ತಲುಪಿದವು. ಮಹೇಂದ್ರ ಆನೆಯು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. ಉಳಿದ ಗೋಪಿ, ವಿಕ್ರಮ, ಶ್ರೀರಾಮ, ಪಾರ್ಥಸಾರಥಿ ಮತ್ತು ವಿಜಯ ಆನೆಗಳು ಎರಡನೇ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಲಿವೆ.

ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ: ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಬಳಿ ಭಾನುವಾರ ಬೆಳಗ್ಗೆ 9.01 ರಿಂದ 9.35ರ ಒಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಪುರೋಹಿತರಾದ ಎಸ್‌.ವಿ. ಪ್ರಹ್ಲಾದ್‌ ರಾವ್‌ ನೇತೃತ್ವದಲ್ಲಿ ನಡೆದ ಪೂಜೆ ವೇಳೆ ಅಲಂಕೃತ ಗಜಪಡೆಗಳ ಪಾದ ತೊಳೆದ ಅರ್ಚಕರು, ನಂತರ ಆನೆಗಳಿಗೆ ದೃಷ್ಟಿತೆಗೆದರು. 

Mysuru: ಕೊನೆಗೂ ಪತ್ತೆಯಾಯ್ತು ನಾಪತ್ತೆಯಾಗಿದ್ದ ಬೆಕ್ಕು: ಬಹುಮಾನದ ಹಣ ಪಡೆಯಲು ನಿರಾಕರಣೆ

ಬಳಿಕ ಹಣೆ ಹಾಗೂ ಪಾದಗಳಿಗೆ ಕುಂಕುಮ, ಹರಿಶಿಣ, ಗರಿಕೆ, ಬೆಲ್ಲ, ಕಬ್ಬು, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆ, ಗಂಧ, ಪಂಚಫಲ, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಷೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು. ತದನಂತರ ಆನೆಗಳಿಗೆ ನವಧಾನ್ಯಗಳ ಪೂಜೆ ನೆರವೇರಿಸಲಾಯಿತು. 

ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ಅರಣ್ಯ ಸಚಿವ ಉಮೇಶ್‌ ಕತ್ತಿ ಅವರು ಚಾಲನೆ ನೀಡಿದರು. ಈ ವೇಳೆ ಮಾವುತರ ಸಂಜ್ಞೆಯಂತೆ ಸೊಂಡಿಲೆತ್ತಿ ಸಲ್ಯೂಟ್‌ ಮಾಡಿದ ಆನೆಗಳು ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು. ಇದೇ ವೇಳೆ ಗೊಂಬೆ ಕುಣಿತ, ಚಂಡೆ ಮೇಳ, ನಗಾರಿ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಾಕಾರಗಳು ಮೇಳೈಸಿದವು. ಅಲ್ಲದೆ, ಮುತ್ತೈದೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಕಲಾತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.

10 ರಂದು ಅರಮನೆ ಪ್ರವೇಶ: ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆ.10 ರಂದು ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ಅಂದು ಬೆಳಗ್ಗೆ 9.20 ರಿಂದ 10 ರವರೆಗೆ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಅರಮನೆ ಆವರಣಕ್ಕೆ ಸ್ವಾಗತ ಕೋರಲಾಗುತ್ತದೆ. ನಂತರ ಅರಮನೆ ಆವರಣದಲ್ಲಿ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ಆರಂಭಿಸಲಿವೆ.

ಶಾಸಕ ಎಚ್‌.ಪಿ. ಮಂಜುನಾಥ್‌, ಎಚ್‌. ವಿಶ್ವನಾಥ್‌, ಸಿ.ಎನ್‌. ಮಂಜೇಗೌಡ, ಮೇಯರ್‌ ಸುನಂದಾ ಪಾಲನೇತ್ರ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್‌, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಕಾಂಪೋಸ್ಟ್‌ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್‌. ಮಹದೇವಯ್ಯ, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ದೊಡ್ಡ ಹೆಜ್ಜೂರು ಗ್ರಾಪಂ ಅಧ್ಯಕ್ಷ ಎಂ.ಎಸ್‌. ಸುಭಾಷ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ಎಸ್ಪಿ ಆರ್‌. ಚೇತನ್‌, ಎಪಿಸಿಸಿಎಫ್‌ ಜಗತ್‌ರಾಮ್‌, ಸಿಸಿಎಫ್‌ ಡಾ.ಎಂ. ಮಾಲತಿಪ್ರಿಯ, ಡಿಸಿಎಫ್‌ಗಳಾದ ಡಾ.ವಿ. ಕರಿಕಾಳನ್‌, ಕಮಲಾ ಕರಿಕಾಳನ್‌ ಮೊದಲಾದವರು ಇದ್ದರು.

ಗಜಪಯಣದ ಹಿನ್ನೆಲೆ: ಮೈಸೂರನ್ನು ಆಳಿದ ರಾಜಮಹಾರಾಜರ ಕಾಲದಲ್ಲಿ ಆನೆಗಳನ್ನು ಕಾಡಿನಿಂದ ನಾಡಿಗೆ ನಾಗರಹೊಳೆಯಿಂದ ಗಜಪಯಣದ ಹೆಸರಿನಲ್ಲಿ ಕರೆ ತರಲಾಗುತ್ತಿತ್ತು. ನಂತರ ಈ ಸಂಪ್ರದಾಯ ನಿಂತು ಹೋಗಿ, ಆನೆಗಳನ್ನು ನೇರವಾಗಿ ವಿವಿಧ ಶಿಬಿರಗಳಲ್ಲಿ ಲಾರಿಗಳಲ್ಲಿ ಮೈಸೂರಿಗೆ ತಂದು, ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಮಾಡಲಾಗುತ್ತಿತ್ತು.

2003ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌. ವಿಶ್ವನಾಥ್‌ ಅವರು ಗಜಪಯಣವನ್ನು ಮತ್ತೆ ಆರಂಭಿಸಿದರು. ಮೊದಲ ವರ್ಷ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಮೈಸೂರುವರೆಗೆ ಕಾಲ್ನಡಿಗೆಯಲ್ಲಿ ಕರೆ ತರಲಾಗಿತ್ತು. ಈ ವೇಳೆ ಮಾರ್ಗವುದ್ದಕ್ಕೂ ಜನರು ನೀಡಿದ ಕಬ್ಬು, ಬೆಲ್ಲ, ತೆಂಗಿನಕಾಯಿ ತಿಂದು ಆನೆಗಳ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮರು ವರ್ಷದಿಂದ ಗಜಪಯಣದ ನಂತರ ಆನೆಗಳನ್ನು ನೇರವಾಗಿ ಲಾರಿಯಲ್ಲಿ ಮೈಸೂರಿಗೆ ಕರೆತರಲಾಗುತ್ತದೆ.

ಸೋಷಿಯಲ್ ಮೀಡಿಯಾ ಟ್ರಾಲ್ ನೆನೆದು ಕಣ್ಣೀರು ಹಾಕಿದ ಸಾ.ರಾ.ಮಹೇಶ್

2003 ರಿಂದಲೂ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಿಸಲಾಗುತ್ತಿತ್ತು. ಆದರೆ, 2012 ರಿಂದ 2017 ರವರೆಗೆ ವೀರನಹೊಸಹಳ್ಳಿಯಿಂದ 4 ಕಿ.ಮೀ. ದೂರದಲ್ಲಿರುವ ನಾಗಾಪುರ-1ನೇ ಬ್ಲಾಕ್‌ನ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣ ಆರಂಭಿಸಲಾಗುತ್ತಿತ್ತು. 2018 ರಿಂದ ವೀರನಹೊಸಹಳ್ಳಿ ಬಳಿ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮತ್ತೆ ಆರಂಭಿಸಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದೇ ಸಂಪ್ರದಾಯವು 2022ನೇ ದಸರೆಯಲ್ಲಿ ಮುಂದುವರೆಯಿತು.

Follow Us:
Download App:
  • android
  • ios