ಮಂಡ್ಯ (ಅ.16):  ನಿಮ್ಮಲ್ಲಿರುವ ಚಿನ್ನ ನಮಗೆ ಕೊಡಿ. ನಿಮಗೆ ಹೆಚ್ಚಿನ ಬಡ್ಡಿ ಕೊಡಿಸ್ತೇವೆ. ಪ್ರತಿ ನೂರು ಗ್ರಾಂ ಚಿನ್ನಕ್ಕೆ ತಿಂಗಳಿಗೆ ಶೇ.40ರಂತೆ ಬಡ್ಡಿ ಬರುತ್ತೆ. ಶ್ರಮವಿಲ್ಲದೆ ಸಂಪಾದನೆ ಮಾಡಬಹುದು ಎಂದು ನಯವಾದ ಮಾತುಗಳಿಂದ ನಂಬಿಸಿದ ಯುವಜೋಡಿಯೊಂದು ಮಹಿಳೆಯರು, ಮಂಗಳಮುಖಿಯಿಂದ ಕೋಟ್ಯಂತರ ರು. ಮೌಲ್ಯದ ಚಿನ್ನ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಆರ್‌.ಪಿ.ರಸ್ತೆಯಲ್ಲಿರುವ ಫೆಡ್‌ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದ ಸೋಮು ಹಾಗೂ ಮಂಡ್ಯದ ದೊಡ್ಡ ವರ್ತಕರೊಬ್ಬರ ಸೊಸೆ ಪೂಜಾ ವಂಚಿಸಿದ ಯುವ ಜೋಡಿಗಳಾಗಿದ್ದಾರೆ. ಇವರಿಬ್ಬರೂ ಹತ್ತಾರು ಕೋಟಿ ರು.ಗೂ ಹೆಚ್ಚಿನ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಬೆಣ್ಣೆಯ ಮಾತುಗಳಿಗೆ ಮರುಳಾಗಿ 40ಕ್ಕೂ ಹೆಚ್ಚು ಮಹಿಳೆಯರು ಮೋಸಹೋಗಿದ್ದಾರೆ ಎಂದು ಗೊತ್ತಾಗಿದೆ. ಸದ್ಯರೂ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.

ಸೋಮಶೇಖರ್‌ ಗುತ್ತಲು ಬಡಾವಣೆಯ ನಿವಾಸಿ. ಈತನಿಗೆ ಮಂಡ್ಯದ ದೊಡ್ಡ ವರ್ತಕರೊಬ್ಬರ ಸೊಸೆ ಪೂಜಾ ಸ್ನೇಹಿತೆಯಾಗಿದ್ದಳು. ಇವರಿಬ್ಬರೂ ಜೊತೆಯಾಗಿ ಮಹಿಳೆಯರಿಗೆ ದೋಖಾ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಡಿಮೆ ಬೆಲೆಗೆ ಸೈಟ್‌ ಆಸೆ ತೋರಿಸಿ 38 ಲಕ್ಷ ಮೋಸ: ಕಂಗಾಲಾದ ವ್ಯಕ್ತಿ ...

ಫೆಡ್‌ ಬ್ಯಾಂಕ್‌ ಎಕ್ಸಿಕ್ಯೂಟೀವ್‌ ಆಗಿದ್ದ ಸೋಮಶೇಖರ್‌ ಆರಂಭದಲ್ಲಿ ತನ್ನ ಕೆಲವು ಪರಿಚಯಸ್ಥ ಮಹಿಳೆಯರಿಂದ ಹಣ ಪಡೆದು ಹೇಳಿದ ಸಮಯಕ್ಕೆ ವಾಪಸ್‌ ನೀಡಿ ವಿಶ್ವಾಸ ಸಂಪಾದಿಸಿದ್ದನು. ಅದೇ ವಿಶ್ವಾಸ, ನಂಬಿಕೆಯಿಂದಲೇ ಮಹಿಳೆಯರು ಈತನಿಗೆ ಕೇಳಿದಾಗಲೆಲ್ಲಾ ಲಕ್ಷಗಟ್ಟಲೆ ಹಣ ಕೊಡುತ್ತಿದ್ದರು. ಹಣ ಪಡೆದಿರುವುದಕ್ಕೆ ಪ್ರತಿಯಾಗಿ ಕೆಲವರಿಗೆ ಆ್ಯಂಡಿಮಾಂಡ್‌ ಪ್ರೋನೋಟ್‌ ಹಾಗೂ ಚೆಕ್‌ಗಳನ್ನು ನೀಡಿ ವಿಶ್ವಾಸ ಬರುವಂತೆ ಮಾಡಿದ್ದನು ಎನ್ನಲಾಗಿದೆ.

ಈ ಮಹಿಳೆಯರ ನಂಟಿನೊಂದಿಗೆ ಪ್ರತಿಷ್ಠಿತ ಮಹಿಳೆಯರ ಸಂಪರ್ಕ ಬೆಳೆಸಿಕೊಂಡ ಸೋಮಶೇಖರ್‌, ಫೆಡ್‌ ಬ್ಯಾಂಕ್‌ನಲ್ಲಿ 100 ಗ್ರಾಂ ಚಿನ್ನ ಇಟ್ಟರೆ ವಾರಕ್ಕೆ ಶೇ.10ರಷ್ಟುಬಡ್ಡಿ ಕೊಡಿಸುತ್ತೇನೆ. ಅಂದರೆ, ತಿಂಗಳಿಗೆ 10 ಸಾವಿರ ರು. ನಿಮ್ಮ ಕೈ ಸೇರಲಿದೆ ಎಂದು ಆಸೆ ಹುಟ್ಟಿಸಿದ್ದಾನೆ. ಹಣದ ಮೇಲಿನ ಆಸೆಯಿಂದ ಇದನ್ನು ನಂಬಿದ ಮಹಿಳೆಯರು ತಮಗೆ ಪರಿಚಯವಿರುವ ಸ್ನೇಹಿತೆಯರು, ನೆಂಟರಿಷ್ಟರಿಂದಲೂ ಚಿನ್ನ ಪಡೆದು ಈತನಿಗೆ ಕೊಟ್ಟಿದ್ದಾರೆ. ಇವರು ಅವನಿಗೆ ಕೊಟ್ಟಚಿನ್ನಕ್ಕೆ ಯಾವುದೇ ದಾಖಲೆಯನ್ನೂ ಪಡೆದಿರಲಿಲ್ಲ.

ಪಬ್‌ಜಿ ಫ್ರೆಂಡ್ಸ್ ಮಾಡಿದ ಪುಂಡಾಟ; ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಗರ್ಭಿಣಿ ...

ಸೋಮಶೇಖರ್‌ ಫೆಡ್‌ಬ್ಯಾಂಕ್‌ ಎಕ್ಸಿಕ್ಯುಟೀವ್‌ ಆಗಿದ್ದರಿಂದ ಚಿನ್ನವನ್ನು ಮನೆಯಲ್ಲಿ ಇಡುವ ಬದಲು ಬ್ಯಾಂಕ್‌ನಲ್ಲಿ ಇಡುವಂತೆ ಪ್ರೇರೇಪಿಸಲು ಕೆಲ ಮಹಿಳೆಯರನ್ನು ಏಜೆಂಟ್‌ಗಳನ್ನಾಗಿ ಮಾಡಿಕೊಂಡು ಅವರಿಗೆ ಕಮಿಷನ್‌ ನೀಡುತ್ತಿದ್ದನು. ಅಲ್ಲದೇ, ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ ಚಿನ್ನವನ್ನೂ ಇಟ್ಟಿರುವುದಾಗಿ ಮಹಿಳೆಯರನ್ನು ನಂಬಿಸಿದ್ದನು. ಆರಂಭದ ಒಂದೆರಡು ತಿಂಗಳು ಸೋಮಶೇಖರ್‌ ಚಿನ್ನ ಅಡವಿಟ್ಟಮಹಿಳೆಯರಿಗೆ ಹೇಳಿದಷ್ಟುಹಣ ಕೊಟ್ಟಿದ್ದನು. ಇದರಿಂದ ಖುಷಿಗೊಂಡ ಮತ್ತಷ್ಟುಮಹಿಳೆಯರು ಸೇರಿ ಈತನಿಗೆ ತಮ್ಮಲ್ಲಿದ್ದ ಚಿನ್ನವನ್ನೆಲ್ಲಾ ನೀಡಿದ್ದರು.

ಹೀಗೆ ಪ್ರತಿಷ್ಠಿತ ಮನೆಗಳ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದ ಸೋಮಶೇಖರ್‌ ಅವರಿಂದ ಕೆಜಿಗಟ್ಟಲೆ ಚಿನ್ನ ಪಡೆದು ವಂಚಿಸಿ ಕಳೆದೊಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದನು. ಮಂಗಳಮುಖಿಯೊಬ್ಬರು ನೀಡಿದ ದೂರಿನಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ನಾಪತ್ತೆಯಾಗಿದ್ದ ಸೋಮಶೇಖರ್‌ ಹಾಗೂ ಆತನ ಗೆಳತಿ ಪೂಜಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಮೋಜು-ಮಸ್ತಿ ನಡೆಸುವ ಉದ್ದೇಶದಿಂದ ಮಹಿಳೆಯರಿಂದ ಚಿನ್ನ ಪಡೆದು ವಂಚಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ, ನಿಖರವಾಗಿ ಎಷ್ಟುಮಹಿಳೆಯರಿಂದ ಎಷ್ಟುಮೊತ್ತದ ಚಿನ್ನವನ್ನು ಪಡೆದಿದ್ದಾನೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.