ಬೆಂಗಳೂರು(ಅ.16): ಕರ್ನಾಟಕ ಗೃಹ ಮಂಡಳಿಯಲ್ಲಿ (ಕೆಎಚ್‌ಬಿ) ಕಡಿಮೆ ಬೆಲೆಗೆ ಮೂರು ನಿವೇಶನಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 38.23 ಲಕ್ಷ ಹಣ ಪಡೆದು ಕಿಡಿಗೇಡಿ ವಂಚಿಸಿರುವ ಘಟನೆ ನಡೆದಿದೆ.

ಹೊಸೂರು ರಸ್ತೆಯ ಕೃಷ್ಣನಗರದ ಶ್ರೀನಿವಾಸ್‌ ನಾಯ್ಡು ಎಂಬುವರೇ ಮೋಸ ಹೋಗಿದ್ದು, ಕೆಎಚ್‌ಬಿ ಅಧಿಕಾರಿಗಳ ಸ್ನೇಹದ ಸೋಗಿನಲ್ಲಿ ಅವರಿಗೆ ಆರೋಪಿ ಬಿ.ವಿ.ಹರಿಪ್ರಸಾದ್‌ ಎಂಬಾತ ವಂಚಿಸಿದ್ದಾನೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೋನಾ ಎಫೆಕ್ಟ್‌: ಕೆಲಸವಿಲ್ಲದೆ ಡ್ರಗ್ಸ್‌ ಪೆಡ್ಲರ್‌ ಆದ ಹೋಟೆಲ್‌ ನೌಕರ

ನಗರದಲ್ಲಿ ನಿವೇಶನ ಖರೀದಿಗೆ ಉದ್ಯಮಿ ಶ್ರೀನಿವಾಸ್‌ನಾಯ್ಡು ಹುಡುಕಾಟ ನಡೆಸಿದ್ದರು. ಆಗ ಅವರಿಗೆ ಪರಿಚಿತನಾದ ಹರಿಪ್ರಸಾದ್‌, ಕೆಲ ದಿನಗಳ ಹಿಂದೆ ಶ್ರೀನಿವಾಸ್‌ ನಾಯ್ಡು ಮೊಬೈಲ್‌ಗೆ ಕರೆ ಮಾಡಿ ತನಗೆ ಕೆಎಚ್‌ಬಿಯಲ್ಲಿ ಅಧಿಕಾರಿಗಳು ಪರಿಚಯಸ್ಥರಿದ್ದಾರೆ. ನೀವು ಬಯಸಿದ ನಿವೇಶನವನ್ನು ಮಂಜೂರು ಮಾಡಿಸುತ್ತೇನೆ ಎಂದಿದ್ದಾನೆ. ಈ ಮಾತು ನಂಬಿದ ಅವರು, ಸೆ.7ರಂದು ವಿಧಾನಸೌಧದ ಪೂರ್ವ ಗೇಟ್‌ ಸಮೀಪ ಹರಿಪ್ರಸಾದ್‌ ಆಪ್ತನನ್ನು ಭೇಟಿಯಾಗಿ ಮುಂಗಡವಾಗಿ ತಲಾ ಒಂದು ನಿವೇಶನಕ್ಕೆ 1.01 ನಂತೆ 3 ಸೈಟ್‌ಗಳಿಗೆ 3.04 ಲಕ್ಷ ಕೊಟ್ಟಿದ್ದರು. ನಂತರ ಹರಿಪ್ರಸಾದ್‌ ನೀಡಿದ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಖಾತೆಗೆ 35.19 ಲಕ್ಷವನ್ನು ಜಮೆ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಹೀಗೆ ಹಣ ಪಡೆದ ಹರಿಪ್ರಸಾದ್‌, ಕೆಲ ದಿನಗಳ ಬಳಿಕ ಶ್ರೀನಿವಾಸ್‌ ಅವರಿಗೆ ಕೆಎಚ್‌ಬಿ ನಿವೇಶನಗಳು ಹಂಚಿಕೆಯಾಗಿವೆ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದ್ದ.