Mysuru : ಶೀಘ್ರ ಪೊಲೀಸ್ ಸಹಾಯ ಪಡೆಯಲು 112ಕ್ಕೆ ಕರೆ ಮಾಡಿ
- ಮೈಸೂರಿನ ಲಲಿತಾದ್ರಿಪುರದ ಬಳಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು
- ಈ ಘಟನೆ ನಡೆದ ನಂತರ ಮೈಸೂರು ಪೊಲೀಸರು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತ
ಮೈಸೂರು (ನ.12): ಮೈಸೂರಿನ (mysuru) ಲಲಿತಾದ್ರಿಪುರದ ಬಳಿ ವಿದ್ಯಾರ್ಥಿನಿಯೊಬ್ಬರ (student) ಮೇಲೆ ನಡೆದ ಗ್ಯಾಂಗ್ ರೇಪ್ (Gang rape) ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಈ ಘಟನೆ ನಡೆದ ನಂತರ ಪೊಲೀಸರು (Police) ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ...
ಮೈಸೂರಿನ (Mysuru) ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಹೆಚ್ಚಾಗಿ ಉದ್ಯಾನವನ ಮತ್ತು ನಿರ್ಜನ ಪ್ರದೇಶಗಳಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತದೆ ಎಂಬ ದೂರು ಎಲ್ಲೆಡೆಯಿಂದ ಹರಿದು ಬರುತ್ತಿತ್ತು. ಇದಕ್ಕೆಲ್ಲಾ ಪೊಲೀಸರ (police) ನಿಷ್ಕ್ರೀಯತೆಯೇ ಕಾರಣ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದ್ದವು.
ಇದಾದ ನಂತರ ನಮ್ಮ ಪೊಲೀಸರು ತೆಗೆದುಕೊಳ್ಳುತ್ತಿರುವ ಶಿಸ್ತಿನ ಕ್ರಮಗಳು ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷತೆಯ ಪರಿಯಿಂದಾಗಿ ನಾಗರಿಕರಲ್ಲಿ ಸ್ವಲ್ಪ ಭರವಸೆ ಮೂಡತೊಡಗಿದೆ.
ಈ ವಿಚಾರವಾಗಿ ಕುವೆಂಪು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಷಣ್ಮುಗ ವರ್ಮ ಅವರು ತಮ್ಮ ವ್ಯಾಪ್ತಿಯ ಬಹುತೇಕ ಉದ್ಯಾನಗಳಿಗೆ (Park) ತೆರಳಿ ಉದ್ಯಾನಗಳ ಸುತ್ತಮುತ್ತಲಿನ ನಾಗರಿಕರನ್ನು ಭೇಟಿ ಮಾಡಿ ಅಲ್ಲಿ ಜನಸ್ನೇಹಿ ಸಭೆಗಳನ್ನು ನಡೆಸಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಸಮಾಲೋಚನೆ ನಡೆಸಿದ್ದರು. ಬಹುತೇಕ ಉದ್ಯಾನದಲ್ಲಿ ಪ್ರತಿನಿತ್ಯ ನಡೆಯುವ ಅನೈತಿಕ ಚಟುವಟಿಕೆಗಳು, ಕಾಲೇಜು ವಿದ್ಯಾರ್ಥಿಗಳ (College students) ಅಸಭ್ಯ ವರ್ತನೆ, ಮುಜುಗರ ತರುವ ನಡವಳಿಕೆ, ಸೈಲೆನ್ಸರ್ ಮಾರ್ಪಾಟು ಮಾಡಿ ಗುಡುಗುವ ಬುಲೆಟ್ ವಾಹನದ ಆರ್ಭಟ, ಅಪ್ರಾಪ್ತ ವಯಸ್ಸಿನ ಬಾಲಕರ ಅಪಾಯಕಾರಿ ಬೈಕ್ ಸವಾರಿ, ಉದ್ಯಾನದಲ್ಲಿ ಆವರಿಸುವ ಕತ್ತಲು, ಕೆಟ್ಟು ಹೋಗಿರುವ ಸೌರ ವಿದ್ಯುದ್ದೀಪ, ಪುಂಡು-ಪೋಕರಿಗಳ ಹಾವಳಿಯ ಜೊತೆಗೆ ಪಾಲಿಕೆಯ ಅಸಹಕಾರ ಚಳವಳಿ ಇತ್ಯಾದಿ ಸಮಸ್ಯೆಗಳ ವಿಚಾರವಾಗಿ ನಾಗರಿಕರು ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಮನವರಿಕೆ ಮಾಡಿದ್ದರು.
ಜನರ ಮನವಿಯನ್ನು ಗೌರವದಿಂದ ಆಲಿಸಿ ಪ್ರತಿಕ್ರಿಯೆ ನೀಡಿದ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಷಣ್ಮುಗವರ್ಮ ಅವರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಯನ್ನೂ ನೀಡಿದರು. ಜೊತೆಗೆ ನಾಗರಿಕರೊಂದಿಗೆ ಗೌರವಯುತವಾಗಿ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಇನ್ಸ್‌ಪೆಕ್ಟರ್ ಷಣ್ಮುಗ ವರ್ಮ ಅವರು ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸ್ ಸಹಾಯವನ್ನು ಶೀಘ್ರವಾಗಿ ಪಡೆಯಬೇಕಾದ್ದಲ್ಲಿ ಟೋಲ್ ಫ್ರೀ (Toll free) ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದು ಮನವಿ ಮಾಡಿದ್ದರು.
ಇಲ್ಲಿಯವರೆಗೆ ಬಳಕೆಯಲ್ಲಿದ್ದ ಪ್ರತ್ಯೇಕ ತುರ್ತು ದೂರವಾಣಿ (Emergency Call) ಸಂಖ್ಯೆಗಳಾದ 100, 101 ಮುಂತಾದವುಗಳ ಬದಲಾಗಿ ಇನ್ನು ಮುಂದೆ ಸಾರ್ವಜನಿಕರು 112ಗೆ ಕರೆ ಮಾಡುವ ಮೂಲಕ ಶೀಘ್ರವಾಗಿ ಪೊಲೀಸ್ , ಅಗ್ನಿಶಾಮಕದಳ , ವಿಪತ್ತು ಇತ್ಯಾದಿ ತುರ್ತು ಸೇವೆಗಳ ನೆರವು ಪಡೆಯಬಹುದು ಎಂದೂ ತಿಳಿಸಿದ್ದರು. ಇಂತಹ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಅಡಿಯಲ್ಲಿ ಸಮರ್ಪಕವಾಗಿ ಕರೆಗಳನ್ನು ನಿಭಾಯಿಸಲು ಪೊಲೀಸ್ ಕಂಟ್ರೋಲ್ ರೂಂ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ದೇಶಾದ್ಯಂತ ಚಾಲನೆಯಲ್ಲಿರುತ್ತದೆ. ನೂತನ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ, ಸಂಪರ್ಕ ವ್ಯವಸ್ಥೆ, ಧ್ವನಿ, ಎಸ್‌ಎಂಎಸ್ (SMS), ಇ-ಮೇಲ್, 112 ಪೋರ್ಟಲ… ಮತ್ತು ಪ್ಯಾನಿಕ್ ಆ್ಯಪ್ (Panic App) ಮೂಲಕ ತುರ್ತು ವಿನಂತಿಯನ್ನು ಸಾರ್ವಜನಿಕರು ಕಳಿಸಬಹುದಾಗಿರುತ್ತದೆ.
ಮಾಹಿತಿ ನೀಡುವ ನಾಗರಿಕರ ಸ್ಥಳವನ್ನು ಸ್ಪಯಂಚಾಲಿತವಾಗಿ ಗುರುತಿಸುವ ವ್ಯವಸ್ಥೆ ಇರುವುದರಿಂದ ಪೊಲೀಸರು ಬಲು ಬೇಗನೆ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ.
ತುರ್ತುಸ್ಥಿತಿಯಲ್ಲಿ ನಾಗರಿಕರು 112 ಸಂಖ್ಯೆಗೆ ಕರೆ ಮಾಡಿದೊಡನೆ ಅತ್ಯಾಧುನಿಕ ತಂತ್ರಜ್ಞಾನ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪುಂಡು-ಪೋಕರಿಗಳ ವಿರುದ್ಧ ಕ್ರಮ ಜರುಗಿಸುವ ಜೊತೆಗೆ ಕರೆ ಮಾಡಿ ಮಾಹಿತಿ ನೀಡುವ ನಾಗರಿಕರ ಹೆಸರನ್ನು ಗೌಪ್ಯವಾಗಿಡುವುದಾಗಿ ತಿಳಿಸಿದ್ದರು.
ಈ ಜನಸ್ನೇಹಿ ಸಭೆಯ ಪರಿಣಾಮವಾಗಿ ನಾಗರಿಕರು ತಮ್ಮ ತಮ್ಮ ನಿವಾಸಗಳ ಬಳಿ ಅಥವಾ ಉದ್ಯಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪುಂಡಾಟ ನಡೆಸುವ ಪುಂಡು-ಪೋಕರಿಗಳ ವಿಚಾರವಾಗಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ.
ಪುಂಡು-ಪೋಕರಿಗಳ ಗುಂಪೊಂದು ಉದ್ಯಾನದ ಒಳಗೆ ಇರುವ ಮಂಟಪದಲ್ಲಿ ತಮ್ಮ ಬುಲೆಟ್ ಮೋಟಾರ್ ಬೈಕ್‌ನ್ನು ನಿಲ್ಲಿಸಿ ಪಟಾಕಿಗಳೊಡನೆ ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಪುಂಡಾಟ ನಡೆಸಲು ಆರಂಭಿಸುತ್ತಿದ್ದಂತೆಯೇ ಜವಾಬ್ದಾರಿಯುತ ನಾಗರಿಕರು 112 ಸಂಖ್ಯೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ಕೆಲವೇ ಕ್ಷಣದಲ್ಲಿ ಕುವೆಂಪು ನಗರದ ಪೊಲೀಸರು ಸ್ಥಳಕ್ಕೆ ತೆರಳಿ ಪುಂಡು-ಪೋಕರಿಗಳ ಜೊತೆಗೆ ಬುಲೆಟ್ ಬೈಕನ್ನೂ (Bullet bike) ಠಾಣೆಗೆ ತರಿಸಿ ಅವರ ಪೋಷಕರನ್ನು ಕರೆಸಿ ಅವರೆದುರೇ ಅವರ ಮಕ್ಕಳಿಗೆ ಬಿಸಿ ಮುಟ್ಟಿಸಿ ಬುದ್ದಿ ಹೇಳುವುದರ ಜೊತೆಗೆ ಪೋಷಕರಿಗೂ ತಮ್ಮ ಮಕ್ಕಳ ಪುಂಡಾಟಿಕೆಯ ದರ್ಶನ ಮಾಡಿಸಿದರು. ಜೊತೆಗೆ ಇಂತಹ ಪುಂಡು-ಪೋಕರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳದ ಬಗ್ಗೆಯೂ ಮನವರಿಕೆ ಮಾಡಿಸಿದರು.
ಉದ್ಯಾನವೂ ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿ ಪುಂಡಾಟಿಕೆ ತೋರುವ ಜೊತೆಗೆ ಸಮಾಜದ ಶಾಂತಿಗೆ ಭಂಗ ತರುವ ಇಂತಹ ಹಲವಾರು ಯುವಕರನ್ನು ಠಾಣೆಗೆ ಕರೆಸಿ, ಅವರ ಪೋಷಕರನ್ನೂ ಕರೆಸಿ ಮನವರಿಕೆ ಮಾಡಿಸುತ್ತಿರುವುದರಿಂದ ಠಾಣಾ ವ್ಯಾಪ್ತಿಯಲ್ಲಿ ನಾಗರಿಕರ ನೆಮ್ಮದಿಗೆ ಭಂಗ ಉಂಟು ಮಾಡಿಸುವ ಪುಂಡರ ಪುಂಡಾಟಿಕೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿವೆ.
ಇಂತಹ ಸಂದರ್ಭಗಳಲ್ಲಿ ಪುಂಡು-ಪೋಕರಿಗಳು ತಮ್ಮ ಪೋಷಕರಿಗೆ ವಿಷಯ ತಿಳಿಯದಂತೆ ಸ್ಥಳೀಯ ನಾಯಕರಿಂದ ಶಿಫಾರಸು ಮಾಡಿಸುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಾರೆ. ಇವೆಲ್ಲವನ್ನೂ ಮೆಟ್ಟಿನಿಂತು ಇಂತಹ ಯುವಕರಿಗೆ ತಮ್ಮ ತಪ್ಪಿನ ಅರಿವು ಮೂಡಿಸಿ ಅವರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಹಾಗಾಗಿ ಯಾವುದೇ ಭಾಗದಲ್ಲಿ ಪುಂಡು-ಪೋಕರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ನೀಡಿದರೆ, ಅತಿ ರೇಕವಾಗಿ ವರ್ತಿಸಿದರೆ, ಭೀತಿ ಮೂಡಿಸಿದರೆ ತಕ್ಷಣ ನಾಗರಿಕರು 112 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ನೀಡುವ ಮೂಲಕ ಜವಾಬ್ದಾರಿ ತೋರಬೇಕಾಗಿದೆ.
ತಮ್ಮ ಪ್ರೀತಿಪಾತ್ರರಾದ ಮಕ್ಕಳಿಗೆ ದುಬಾರಿ ಬೈಕ್ ಕೊಡಿಸುವ ಪೋಷಕರೂ ಕೂಡಾ ತಮ್ಮ ಮಕ್ಕಳ ನಡವಳಿಕೆಯನ್ನು ಗಮನಿಸದೇ ಹೋದಲ್ಲಿ ಠಾಣೆಯ ಮೆಟ್ಟಿಲು ಹತ್ತಬೇಕಾಗುತ್ತದೆಂಬ ಸತ್ಯವನ್ನು ಅರಿಯಬೇಕಾಗಿದೆ.
ಕುವೆಂಪುನಗರದ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಷಣ್ಮುಗ ವರ್ಮ ಅವರು ಇದೇ ರೀತಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಪುಂಡು-ಪೋಕರಿಗಳ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಕೆಲಸವನ್ನು ಮುಂದುವರಿಸಿದರೆ ಸಮಾಜದಲ್ಲಿ ಶಾಂತಿ ಮಾಡುವುದರಲ್ಲಿ ಸಂಶಯವಿಲ್ಲ. ಇದೇ ರೀತಿ ಪ್ರತಿಯೊಂದು ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದಂತಾಗುತ್ತದೆ.
-ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು.