ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮೃತರ ಸಹೋದರ ಗುರುನಾಥಗೌಡರ್ ನಿರ್ಧರಿಸಿದ್ದು, ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಧಾರವಾಡ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಈ ಮೂಲ ಅವರ ಜೀವಾವಧಿ ಶಿಕ್ಷೆ ರದ್ದಾಗಿ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಸಹೋದರ ಗುರುನಾಥಗೌಡರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿ, ತಮ್ಮ ಮುಂದಿನ ಕಾನೂನು ಹೋರಾಟದ ಕುರಿತು ಸ್ಪಷ್ಟಪಡಿಸಿದ್ದಾರೆ.

ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ: ಗುರುನಾಥಗೌಡರ್

ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಗುರುನಾಥಗೌಡರ್, "ನಮ್ಮ ವಕೀಲರು ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಷಯವನ್ನು ನಮಗೆ ಖಚಿತಪಡಿಸಿದ್ದಾರೆ. ಈ ದೇಶದಲ್ಲಿ ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿಂದಲೇ ನಾವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದೆವು, ನಮಗೆ ನ್ಯಾಯವೂ ಸಿಕ್ಕಿತ್ತು. ಈಗ ಅವರು ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರಕ್ಕೆ ಸಿದ್ಧತೆ

ನ್ಯಾಯಾಲಯ ಯಾವ ಕಾರಣಗಳಿಗಾಗಿ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ನಾವು ನಮ್ಮ ಮುಂದಿನ ನಡೆಯನ್ನು ಇಡಲಿದ್ದೇವೆ. ಈ ಕುರಿತು ಹಿರಿಯ ಹೋರಾಟಗಾರ ಬಸವರಾಜ್ ಕೊರವರ ಅವರ ಜೊತೆ ಸುದೀರ್ಘವಾಗಿ ಚರ್ಚಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ನಿರಂತರವಾಗಿ ಸಾಗಲಿದೆ ನ್ಯಾಯಕ್ಕಾಗಿ ಹೋರಾಟ

ಹೈಕೋರ್ಟ್ ಆದೇಶದಿಂದ ನಮಗೆ ಯಾವುದೇ ಹಿನ್ನಡೆಯಾಗಿಲ್ಲ. ನಮ್ಮ ಹೋರಾಟದ ಹಾದಿ ನಮಗೆ ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ನಾವು ಧೃತಿಗೆಡುವುದಿಲ್ಲ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದಿವಂಗತ ಸಹೋದರನಿಗೆ ನ್ಯಾಯ ಸಿಗುವವರೆಗೂ ನಮ್ಮ ಕಾನೂನಾತ್ಮಕ ಹೋರಾಟ ನಿರಂತರವಾಗಿ ನಡೆಯುತ್ತದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಖಚಿತ ಎಂದು ಗುರುನಾಥಗೌಡರ್ ನುಡಿದರು.