'ವೃಕ್ಷಮಾತೆ' ಖ್ಯಾತಿಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕನವರು 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಕ್ಕಳಿಲ್ಲದ ದುಃಖ ಮರೆಯಲು ರಸ್ತೆ ಬದಿ ಸಸಿಗಳನ್ನು ನೆಟ್ಟು ಬೆಳೆಸಿದ್ದ ಅವರಿಗೆ ಯಕ್ಷಗಾನದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಗಿದೆ.

ವೃಕ್ಷಮಾತೆ, ಸಾಲು ಮರದ ತಿಮ್ಮಕ್ಕನವರ ಬಗ್ಗೆ ಹೇಳುತ್ತಾ ಹೋದರೆ ಒಂದಿಷ್ಟು ದಿನಗಳು ಸಾಕಾಗದೇ ಹೋಗಬಹುದೇನೋ. ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿರೋ ತಿಮ್ಮಕ್ಕನವರು ಇಂದು ಉಸಿರು ಚೆಲ್ಲಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬೆಂಗಳೂರಿನಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರೋ ಸಾಲುಮರದ ತಿಮ್ಮಕ್ಕನವರಿಗೆ ಹಲವು ಗಣ್ಯರು ಅವರದ್ದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಗಿಡ-ಮರಗಳನ್ನೇ ಮಕ್ಕಳೆಂದು ಪೋಷಿಸಿದ್ದ ಸಾಲುಮರದ ತಿಮ್ಮಕ್ಕನವರು ಮಕ್ಕಳ ದಿನಾಚರಣೆಯಂದೇ ಇಹಲೋಕ ತ್ಯಜಿಸಿರುವುದು ಕಾಕತಾಳೀಯವೇ ಸರಿ. 

ಯಕ್ಷಗಾನದ ಮೂಲಕ ನಮನ

ಇದೀಗ ಯಕ್ಷಗಾನದ ಮೂಲಕ ತಿಮ್ಮಕ್ಕನವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಯಕ್ಷಸುಮತಿ ತಂಡವು ಕಳೆದ ವರ್ಷ ಮಂಗಳೂರಿನಲ್ಲಿ ನಡೆಸಿದ್ದ ಕಾರ್ಯಕ್ರಮ ಇದಾಗಿದೆ. ಸಾಲು ಮರದ ತಿಮ್ಮಕ್ಕನವರು ಮಾಡಿರುವ ಎಲ್ಲಾ ಕಾರ್ಯಗಳನ್ನು ಯಕ್ಷಗಾನದ ಗಾಯನದ ಮೂಲಕವೇ ಪ್ರದರ್ಶನ ನೀಡುವ ಮೂಲಕ ಪ್ರಸ್ತುತಿ ಪಡಿಸಲಾಗಿದೆ. (ಇದರ ವಿಡಿಯೋ ಸುದ್ದಿಯ ಕೊನೆಯಲ್ಲಿ ಇದೆ.)

ತಿಮ್ಮಕ್ಕನ ಕುರಿತು

ಇನ್ನು ತಿಮ್ಮಕ್ಕನವರ ಕುರಿತು ಹೇಳುವುದಾದರೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್‌ 30ರಂದು ಜನಿಸಿದ್ದ ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ನಂತರ ಮಾಗಡಿ ತಾಲೂಕಿನ ಚಿಕ್ಕಯ್ಯ ಎಂಬುವವರನ್ನು ವಿವಾಹವಾದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು.

ಹಲವು ಪ್ರಶಸ್ತಿಗಳು

ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಮರ, ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದರು. ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.