Asianet Suvarna News Asianet Suvarna News

ಉಡುಪಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚು ಹರಿಸಿದ ಕರಾವಳಿಯ ಯಕ್ಷಗಾನ

ಭೂಪಾಲ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಡುಪಿಯ ಕೀರ್ತಿ ಹೆಚ್ಚಿಸಿದ ಉಡುಪಿಯ ಯಕ್ಷ ಸಂಜೀವ ಟ್ರಸ್ಟ್‌

Yaksha Sanjeev Trust Preform Yakshagana at International Forum in Bhopal  grg
Author
First Published Oct 25, 2022, 12:47 PM IST

ಉಡುಪಿ(ಅ.25):  ಕರಾವಳಿಯ ಕಲೆಗಳನ್ನು ಗಡಿಗಳ ಹಂಗಿಲ್ಲದೆ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ದೈವ ಸಂಸ್ಕೃತಿಯ ಕತೆ ಹೇಳುವ ಕಾಂತಾರ ಸಿನಿಮಾದ ಸಕ್ಸಸ್ ಅದಕ್ಕೆ ಸಾಕ್ಷಿಯಾಗಿದೆ. ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ಗಡಿಮೀರಿ ವಿದೇಶಗಳಲ್ಲೂ ಸದ್ದು ಮಾಡುತ್ತಾ ಬಂದಿದೆ. ಇದೀಗ ಉಡುಪಿಯ ಯಕ್ಷ ಸಂಜೀವ ಟ್ರಸ್ಟ್‌ನವರು ದೂರದ ಭೂಪಾಲ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಉಡುಪಿಯ ಕೀರ್ತಿ ಹೆಚ್ಚಿಸಿದ್ದಾರೆ.

ಯಕ್ಷಗಾನ ಎಂಬುದು ಇಂದಿನ ದಿನಗಳಲ್ಲಿ ಜಿಲ್ಲೆ ಅಥವಾ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದ ಕಲೆಯಲ್ಲ. ಆದ್ದರಿಂದಲೇ ಇಂದು ಕರಾವಳಿಯಲ್ಲಿ ಹುಟ್ಟಿದ ಕಲೆಯೊಂದು ಕರಾವಳಿಯಿಂದಾಚೆಗಿನ ಜನರ ಮನ ಗೆಲ್ಲುತ್ತಿದೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದ "ಅಂತಾರಾಷ್ಟ್ರೀಯ ರಾಮ್ ಲೀಲಾ ಉತ್ಸವ" ದಲ್ಲಿ ಭಾಗವಹಿಸಿದ ಉಡುಪಿಯ ಗುರು ಸಂಜೀವ ಸುವರ್ಣ ನೇತೃತ್ವದ ತಂಡ ಅದ್ಭುತ ಪ್ರದರ್ಶನ ನೀಡಿದೆ. ಈ ಉತ್ಸವಕ್ಕೆ ಒಟ್ಟು 7 ರಾಷ್ಟ್ರಗಳ ತಂಡ ಆಗಮಿಸಿದ್ದವು. 
ವಿಯೇಟ್ನಾಮ್, ಥೈಲ್ಯಾಂಡ್, ಫಿಜೀ, ಯುಎಸ್‌ಎ, ಶ್ರೀಲಂಕಾ, ಮಲೇಷಿಯಾ, ಭಾರತದ ತಂಡಗಳು ಅಲ್ಲಿಯ ಕಲೆಯನ್ನು ಪ್ರಸ್ತುತ ಪಡಿಸಿದ್ದವು. ಅದರಂತೆ ಭಾರತದಿಂದ ಆಯ್ಕೆಗೊಂಡ ನಾಲ್ಕು ರಾಜ್ಯಗಳಾದ ಅಸ್ಸಾಂ, ಒಡಿಸ್ಸಾ, ಕರ್ನಾಟಕ ರಾಜ್ಯಗಳ ರಾಮಾಯಣದ ಆಯ್ದ ಕೆಲವು ಭಾಗಗಳನ್ನು ಪ್ರದರ್ಶಿಸಿದ್ದವು. ಹಾಗೆಯೇ ನಮ್ಮ ಕರ್ನಾಟಕದ ಉಡುಪಿಯ ತಂಡ ನಡೆಸಿಕೊಟ್ಟ ಯಕ್ಷಗಾನ ಬ್ಯಾಲೆ ಪ್ರದರ್ಶನದಲ್ಲಿ ವನಾಗಮನ, ಸೀತಾಪಹರಣ, ಜಟಾಯು ಪ್ರಸಂಗವನ್ನು ಪ್ರಸ್ತುತ ಪಡಿಸಿ ಪ್ರಶಂಸೆಗೆ ಪಾತ್ರವಾಗಿದೆ. 

ಯಕ್ಷಗಾನದಲ್ಲಿ ಕಾಲಮಿತಿ ಪ್ರದರ್ಶನ ಅನಿವಾರ್ಯವೇ?

ಯಕ್ಷಗಾನದ ವೇಷ ಭೂಷಣಕ್ಕೆ ಮನಸೋತ ಅಲ್ಲಿನ ಜನರು ಪ್ರಸಂಗದ ಪೂರ್ವ ಭಾಗದಿಂದ ಹಿಡಿದು ಪ್ರಸಂಗದ ಮಂಗಳ ಪದ್ಯದವರೆಗೂ ಕುಳಿತು ವೀಕ್ಷಿಸಿದರು. ಈ ಪ್ರದರ್ಶನವನ್ನು ಯಕ್ಷ ಸಂಜೀವ ಕೇಂದ್ರದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು ನಿರ್ದೇಶಿಸಿದ್ದರು.ಪಾತ್ರವರ್ಗದಲ್ಲಿ ಅವರ ಶಿಷ್ಯ ವರ್ಗವು ಸಹಕರಿಸಿತ್ತು. ಈ ಪ್ರದರ್ಶನ ಒಟ್ಟು ಎರಡು ಗಂಟೆಯದಾಗಿದ್ದು, ಮೊದಲ ಭಾಗದಲ್ಲಿ ಸಾಂಪ್ರದಾಯಿಕವಾಗಿ ಪೂರ್ವರಂಗದ ಕೆಲವು ಭಾಗವನ್ನು ತೋರಿಸಲಾಗಿತ್ತು. ನಂತರ ರಾಮ ಸೀತೆ ಹಾಗೂ ಲಕ್ಷ್ಮಣರು ವನವಾಸಕ್ಕೆ ಹೋಗುವುದು, ಅಲ್ಲಿ ಶೂರ್ಪನಖಿ ಮಾಯಾರೂಪಿನಲ್ಲಿ ಬಂದು ರಾಮ ಲಕ್ಷ್ಮಣರಿಂದ ಅವಮಾನಕ್ಕೆ ಗುರಿಯಾಗಿ ರಾವಣನಿಗೆ ದೂರನ್ನು ಕೊಟ್ಟು, ಆತನಿಂದ ಸೀತೆಯನ್ನು ಅಪಹರಿಸುವಂತೆ ಮಾಡುವ ಚಿತ್ರಣ ನೀಡಲಾಗಿದೆ. ಕೊನೆಗೆ ರಾವಣನ ಆಯುಧಕ್ಕೆ ಸಿಲುಕಿ ಪ್ರಾಣ ಬಿಟ್ಟ ಜಟಾಯುವಿಗೆ ರಾಮ ಲಕ್ಷ್ಮಣರು ಮೋಕ್ಷವನ್ನು ಕರುಣಿಸುವ ಭಾಗದೊಂದಿಗೆ ಪ್ರದರ್ಶನ ಮುಕ್ತಾಯಗೊಂಡಿತು.

ಎದ್ದು ನಿಂತು ಚಪ್ಪಾಳೆ

ಪ್ರದರ್ಶನವು ಪೂರ್ಣವಾಗಿ ಮುಗಿದ ಬಳಿಕ ಅಲ್ಲಿನ ಜನರು ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಕಲಾವಿದರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಐದು ದಿನದ ಪ್ರದರ್ಶನದಲ್ಲಿ ಹಿತ ಮಿತವಾಗಿ ಪ್ರದರ್ಶನದ ಸಂತೋಷ ಅನುಭವಿಸಿತ್ತಿದ್ದ ಪ್ರೇಕ್ಷಕರು ಕರ್ನಾಟಕದ ಯಕ್ಷಗಾನವನ್ನು ಸಂಪೂರ್ಣವಾಗಿ 2 ಗಂಟೆಗಳ ಕಾಲ ನೋಡಿದ್ದರು. ವನಾಗಮನ, ಸೀತಾಪಹಾರಣ, ಜಟಾಯು ಪ್ರಸಂಗವನ್ನು ನೋಡಿ ಆನಂದಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಪ್ರದರ್ಶನ

ಇತ್ತೀಚಿಗೆ ಉಡುಪಿಯ ಯಕ್ಷಗಾನ ಕೇಂದ್ರದಿಂದ ನಿವೃತ್ತರಾಗಿ ಹೊರ ಬಂದ ಬನ್ನಂಜೆ ಸಂಜೀವ ಸುವರ್ಣರು ಶಿಷ್ಯ ವರ್ಗದಿಂದ ಪ್ರೇರಣೆಗೊಂಡು ಅವರ ಮನೆಯಲ್ಲೇ ಹೊಸ ಕೇಂದ್ರವೊಂದನ್ನು ಆರಂಭಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣರ ಯಕ್ಷ ತಂಡಕ್ಕೆ ಮೊದಲ ಪ್ರದರ್ಶನವೇ ಅಂತರಾಷ್ಟ್ರೀಯ ವೇದಿಕೆಯಲ್ಲಿ ಒದಗಿ ಬಂದಿದೆ. ಇದು ಯಕ್ಷ ಸಂಜೀವ ತಂಡಕ್ಕೆ ಹೊಸ ಹುರುಪು ತುಂಬಿದಂತಾಗಿದೆ.
 

Follow Us:
Download App:
  • android
  • ios