Asianet Suvarna News Asianet Suvarna News

ಬೆಂಗಳೂರು: ಡಿ.9 ರಿಂದ ಆರ್ಟ್ ಆಫ್ ಲೀವಿಂಗ್‌ನಲ್ಲಿ ವಿಶ್ವ ಸಿರಿಧಾನ್ಯ ಮೇಳ, ಡಾ.ಸುರೇಶ್

ನೈಸರ್ಗಿಕ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಈ ಮೇಳ ಆಯೋಜಿಸುತ್ತಿದ್ದು, ಸಿರಿಧಾನ್ಯಗಳನ್ನು ತಮ್ಮ ಆಹಾರದ ಒಂದು ಭಾಗವಾಗಿ ಮಾಡುವ ಜೊತೆಗೆ ಆರೋಗ್ಯ-ಪ್ರಜ್ಞೆ ಮತ್ತು ಭೂ-ಸ್ನೇಹಿ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ: ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸುರೇಶ್ 
 

World Cereal Fair at Art of Living from December 9th in Bengaluru Says Dr Suresh grg
Author
First Published Dec 7, 2023, 3:29 PM IST

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಡಿ.07):  ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಅವರಣದಲ್ಲಿ ಡಿ. 9 ರಿಂದ 11 ರ ವರೆಗೆ ಜಾಗತಿಕ ಮಟ್ಟದ ಸಿರಿಧಾನ್ಯ ಮೇಳ ಆಯೋಜಿಸುತ್ತಿದ್ದು ಆರ್ಟ್ ಆಫ್ ಲೀವಿಂಗ್ ಆವರಣದಲ್ಲಿ ಬೆಂಗಳೂರು ಕೃಷಿ ವಿ.ವಿ. ಸಹಯೋಗದಲ್ಲಿ ಡಿ 9 ರಿಂದ ಮೂರು ದಿನಗಳ ಜಾಗತಿಕ ಮಟ್ಟದ “ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ” ಆಯೋಜನೆ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಸಾನಿಧ್ಯದಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸುರೇಶ್ ತಿಳಿಸಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಕೆವಿಕೆ ಕುಲಪತಿ ಡಾ.ಸುರೇಶ್ ಅವರು, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆ ಮತ್ತು ಸುರಕ್ಷಿತ, ಸುಸ್ಥಿರ ಮತ್ತು ಆರೋಗ್ಯಕರ ಭವಿಷ್ಯದ ಕಡೆಗೆ ಜನಾಂದೋಲನವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಅವರಣದಲ್ಲಿ ಡಿ.9 ರಿಂದ 11 ರವರೆಗೆ ಜಾಗತಿಕ ಮಟ್ಟದ “ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ” ಆಯೋಜಿಸುತ್ತಿದ್ದು, ಶ್ರೀ ಶ್ರೀ ಗುರುದೇವ ಶ್ರೀ ರವಿಶಂಕರ್ ಗುರೂಜಿಯವರ ಸಾನಿಧ್ಯದಲ್ಲಿ ಸಿರಿಧಾನ್ಯಗಳ ಚಿಂತನ, ಮಂಥನಕ್ಕೆ ಅಗತ್ಯ ಸಿದ್ಧತೆ ನಡೆಯುತ್ತಿದೆ. ದೇಶ, ವಿದೇಶಗಳ ಸಿರಿಧಾನ್ಯ ಪರಿಣಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

ಬೆಂಗಳೂರು ಕೃಷಿ ಮೇಳದಲ್ಲಿ ಗಿಣಿ ಮೂಗಿನ ಕೋಳಿಮರಿಗೆ ಭಾರಿ ಬೇಡಿಕೆ

ನೈಸರ್ಗಿಕ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಈ ಮೇಳ ಆಯೋಜಿಸುತ್ತಿದ್ದು, ಸಿರಿಧಾನ್ಯಗಳನ್ನು ತಮ್ಮ ಆಹಾರದ ಒಂದು ಭಾಗವಾಗಿ ಮಾಡುವ ಜೊತೆಗೆ ಆರೋಗ್ಯ-ಪ್ರಜ್ಞೆ ಮತ್ತು ಭೂ-ಸ್ನೇಹಿ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಸಿರಿಧಾನ್ಯಗಳು ಸಣ್ಣ ಉದ್ದಿಮೆಗಳು, ರೈತರು ಮತ್ತು ಸಮುದಾಯಗಳನ್ನು ಒಳಗೊಳ್ಳುವ ಮೂಲಕ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ವಾಣಿಜ್ಯ ದೃಷ್ಟಿಯಿಂದ ಮಾರಾಟಗಾರರು ಮತ್ತು ಖರೀದಿದಾರರಿಗೆ ಇದು ಸೂಕ್ತ ವೇದಿಕೆಯಾಗಲಿದೆ ಎಂದರು. ಈ ಮೇಳದಲ್ಲಿ 180ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಏರ್ಪಡಿಸಲಾಗಿದೆ. ಸಿರಿ ಧಾನ್ಯಗಳ ಸಂಸ್ಕರಣೆ ಮಾಡುವ ಆಧುನಿಕ ಯಂತ್ರೋಪಕರಣ ತಂತ್ರಜ್ಞಾನವನ್ನು ಪ್ರದರ್ಶಿಸುತ್ತಿದ್ದು, ಸಿರಿಧಾನ್ಯಗಳ ಚಿಲ್ಲರೆ, ಸಗಟು ಮಾರಾಟಗಾರರು, ವ್ಯಾಪಾರಿಗಳು, ಆಹಾರ ಉತ್ಪಾದಕರಿಗೆ ಇದು ಉಜ್ವಲ ಅವಕಾಶವಾಗಿದೆ ಎಂದು ಹೇಳಿದ್ದಾರೆ. 

ಡಿ.9 ರಂದು ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಅವರು ಬೃಹತ್ ಮೇಳದ ಉದ್ಘಾಟನೆ ಮಾಡಲಿದ್ದಾರೆ. ಡಿ.10 ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಿರಿಧಾನ್ಯ ಸಾವಯವ ಮತ್ತು ನೈಸರ್ಗಿಕ ಕೃಷಿ ಕುರಿತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತಿದ್ದಾರೆ. ವಿಶ್ವ ಇವತ್ತು ಜಾಗತಿಕ ಹವಾಮಾನ ಬದಲಾವಣೆ ಹಾಗೂ ಭೂಮಿ ಫಲವತ್ತತೆ ನಾಶವಾಗುವ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಿರಿಧಾನ್ಯಗಳು ಭರವಸೆಯ ದೀಪವಾಗಿ ಹೊರಹೊಮ್ಮುತ್ತಿವೆ. ವೈವಿಧ್ಯಮಯ ಕೃಷಿ ಹವಾಮಾನ ಪರಿಸ್ಥಿತಿಗಳಲ್ಲಿ ಅಸಾಧಾರಣ ಪೌಷ್ಠಿಕಾಂಶದ ಅಂಶವನ್ನು ಇವು ಹೊಂದಿವೆ. ಶಿಕ್ಷಣ ತಜ್ಞರು, ವಿದ್ವಾಂಸರು, ಸಂಶೋಧಕರು, ಆಹಾರ ಮತ್ತು ಕೃಷಿ ಕ್ಷೇತ್ರದ ವೃತ್ತಿಪರರು, ವೈಜ್ಞಾನಿಕ ಸಂಸ್ಥೆಗಳು, ಪೌಷ್ಟಿಕ ತಜ್ಞರು, ನೀತಿ ನಿರೂಪಕರು, ಉದ್ಯಮಶೀಲ ನಾವೀನ್ಯಕಾರರು, ಶಿಕ್ಷಣ ಕೃಷಿ, ಬಳಕೆ ಮತ್ತು ಪ್ರಚಾರದಲ್ಲಿ ತೊಡಗಿರುವ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. 

ವಿಶ್ವದಾದ್ಯಂತ 70 ಕ್ಕೂ ಅಧಿಕ ರಾಷ್ಟ್ರಗಳು ಸಿರಿಧಾನ್ಯ ವರ್ಷಾಚರಣೆಗೆ ಬೆಂಬಲ ಸೂಚಿಸಿವೆ. ಸುಸ್ಥಿರ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವದ ಪಾತ್ರ ಮತ್ತು ಸ್ಮಾರ್ಟ್ ಸೂಪರ್ ಫುಡ್ ಆಗಿ ಅದರ ಪ್ರಯೋಜನಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಇದು ಸಹಾಯ ಮಾಡುತ್ತದೆ. ಭಾರತ 170 ಲಕ್ಷ ಟನ್ ಗಳಿಗಿಂತಲೂ ಅಧಿಕ ಉತ್ಪಾದನೆಯೊಂದಿಗೆ ಸಿರಿಧಾನ್ಯಗಳ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ, ಇದು ಏಷ್ಯಾದಲ್ಲಿ ಉತ್ಪಾದಿಸಲಾಗುವ ಸಿರಿಧಾನ್ಯಗಳ ಶೇ.80ಕ್ಕೂ ಹೆಚ್ಚು ಭಾಗವಾಗಿದೆ. ಭಾರತಕ್ಕೆ ಸಿರಿಧಾನ್ಯಗಳ ಬಳಕೆಯ ಭವ್ಯ ಪರಂಪರೆ ಸಂಪ್ರದಾಯ ಇತಿಹಾಸವಿದೆ ಎಂದು ಹೇಳಿದರು. ಶ್ರೀ ನೈಸರ್ಗಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಂಗನಾಥ್ ಪ್ರಸಾದ್ ಮಾತನಾಡಿ, ನಮ್ಮ ಆಹಾರ ಪದ್ಧತಿಗಳಲ್ಲಿ ಸಿರಿಧಾನ್ಯಗಳ ಬಳಕೆ ಹಾಸುಹೊಕ್ಕಾಗಿರುವುದನ್ನು ನಮ್ಮ ಸಾಹಿತ್ಯ, ದಾಖಲೆಗಳು ಸಾರುತ್ತವೆ. ಕಾಳಿದಾಸನ "ಅಭಿಜ್ಞಾನ ಶಾಕುಂತಲಂ"ದಲ್ಲಿ ಕಣ್ವ ಮಹರ್ಷಿಗಳು ಶಾಕುಂತಲೆಯನ್ನು ದುಷ್ಯಂತನ ಆಸ್ಥಾನಕ್ಕೆ ಬೀಳ್ಕೊಡುವಾಗ ನವಣೆ ಸುರಿದರೆಂಬ ಉಲ್ಲೇಖವಿದೆ. ಯಜುರ್ವೇದದಲ್ಲಿ ಉರುಟು ಧಾನ್ಯಗಳ ಪ್ರಸ್ತಾಪವಿದೆ. ಸುಶ್ರುತ ವರ್ಗೀಕರಿಸಿದ ಧಾನ್ಯವರ್ಗದಲ್ಲಿ ಒರಟು ಧಾನ್ಯಗಳು ಬರುತ್ತವೆ. ಕನ್ನಡದ ಸುಪ್ರಸಿದ್ಧ ರಚನೆ, ಪುರಂದರದಾಸರ ‘ರಾಗಿ ತಂದೀರಾ ನಿತ್ಯಕೆ’ ಕೃತಿಯಲ್ಲಿ ರಾಗಿಗೆ ಇದ್ದ ಮಹತ್ವವನ್ನು ತಿಳಿಸುತ್ತದೆ.

ಸಿಲಿಕಾನ್‌ ಸಿಟಿಯಲ್ಲಿ 'ಕೃಷಿ ಲೋಕ'ದ ಅನಾವರಣ: ಜಿಕೆವಿಕೆಯಲ್ಲಿ ನೂರಾರು ಕೃಷಿ ಸಾಧಕರಿಗೆ ಸನ್ಮಾನ

ಅಂತೆಯೇ ಕನಕದಾಸರು ರಾಮದಾನ ಚರಿತ್ರೆಯಲ್ಲಿ ರಾಗಿಯ ಪ್ರಸ್ತಾವ ಮಾಡಿರುವುದನ್ನು ನಾವು ಕಾಣುತ್ತೇವೆ ಎಂದರು. ಇದು ಪರಿಸರ ಸ್ನೇಹಿ, ಕೃಷಿ, ಜಲದಕ್ಷತೆಯ ಬೆಳೆ, ಪೌಷ್ಟಿಕಾಂಶ ದೃಷ್ಟಿಗಳಿಂದಲೂ, ಸಿರಿಧಾನ್ಯಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಅನೇಕ ಅಂಶಗಳಿಗೆ ಪೂರಕವಾಗಿವೆ. ರೈತರ ವರಮಾನ ಹೆಚ್ಚಿಸುವ, ಜೀವನೋಪಾಯ ಕಲ್ಪಿಸುವ, ಸರ್ವರಿಗೂ ಆಹಾರ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಸಿರಿಧಾನ್ಯಗಳಿಗಿದೆ. 
ಸಿಂಧೂ ನಾಗರಿಕತೆಯಲ್ಲಿ ಈ ಧಾನ್ಯಗಳ ಆರಂಭಿಕ ಪುರಾವೆಗಳು ದೊರೆತಿವೆ. ಭಾರತೀಯ ಸಿರಿಧಾನ್ಯಗಳು, ಪಾಕವಿಧಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಜನಾಂದೋಲನವನ್ನಾಗಿ ಮಾಡಲು ಸರ್ಕಾರದ ಜೊತೆ ನಾವು ಕೈಜೋಡಿಸಿದ್ದೇವೆ. ಸಿರಿಧಾನ್ಯಗಳಿಗೆ ಸಂಬಂಧಿಸಿದ ಜಾಗತಿಕ ಆಂದೋಲನ ಆಹಾರ ಭದ್ರತೆಯ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಕೃಷಿ ಏಕಸಂಸ್ಕೃತಿಯಾದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಿರಿಧಾನ್ಯಗಳು ಕೃಷಿ ಮತ್ತು ಆಹಾರ ವೈವಿಧ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ನಮ್ಮ ಜೀವನ ಶೈಲಿ, ಆಹಾರ ಪದ್ದತಿ ಬದಲಿಸಲು ಇದು ಸಕಾಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಕೆವಿಕೆಯ ಸಾವಯವ ಕೃಷಿ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಬೋರಯ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಅಖಿಲ ಭಾರತೀಯ ಸುಸಂಘಟಿತ ಸಂಶೋಧನಾ ಪ್ರಾಯೋಜನ (ಸಿರಿ ಧಾನ್ಯಗಳು) ಡಾ. ನಾಗರಾಜ ಟಿ. ಈ. ಮತ್ತು , ಶ್ರೀ ಶ್ರೀ ನೈಸರ್ಗಿಕ್ ಸಂಸ್ಥೆಯ ಸಿರಿಧಾನ್ಯ ಮತ್ತು ತೈಲ ಬೀಜ ಪರಿಣಿತರಾದ ಉದಯ ಕುಮಾರ ಕೊಳ್ಳಿಮಠ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios