Asianet Suvarna News Asianet Suvarna News

‘ಗರ್ಭದಿಂದ ಗೋರಿವರೆಗೆ ಸಮಸ್ಯೆ ಎದುರಿಸುವ ಸ್ತ್ರೀ’

ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಬಾಲಭವನ ಸಮಿತಿ ಕಾರ್ಯದರ್ಶಿ ಎಂ.ಎಸ್‌.ಶ್ರೀಧರ್‌ ತಿಳಿಸಿದರು.

Women who face problems from womb to grave snr
Author
First Published Jan 25, 2023, 5:24 AM IST

 ತುಮಕೂರು : ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಬಾಲಭವನ ಸಮಿತಿ ಕಾರ್ಯದರ್ಶಿ ಎಂ.ಎಸ್‌.ಶ್ರೀಧರ್‌ ತಿಳಿಸಿದರು.

ತುಮಕೂರಿನ ಬಾಲಭವನದಲ್ಲಿ ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಂಡಿಗೆ ಸಿಗುವ ಎಲ್ಲಾ ಅವಕಾಶಗಳು ಹೆಣ್ಣು ಮಗುವಿಗೂ ದೊರೆಯುವಂತೆ ಮಾಡುವುದು ಈ ಕಾರ‍್ಯಕ್ರಮದ ಉದ್ದೇಶ. ಹೆಣ್ಣು ಮಗುವಿನ ಭ್ರೂಣ ಹತ್ಯೆಯಿಂದ ಉಂಟಾಗುತ್ತಿರುವ ಹೆಣ್ಣು ಗಂಡಿನ ಅನುಪಾತದಲ್ಲಿ ಕಂಡುಬರುವ ವ್ಯತ್ಯಾಸವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿಯವರು ಭೇಟಿ ಪಡಾವೋ, ಭೇಟಿ ಬಚಾವೋ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದರು ಎಂದರು.

ಹೆಣ್ಣಿಗೆ ಆರತಿ, ಕೀರ್ತಿ ತರುವ ಸಾಮರ್ಥ್ಯ:

ಹಿಂದೆ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎನ್ನುವ ನಾಣ್ನುಡಿ ಇತ್ತು. ಆದರೆ ಇಂದು ಹೆಣ್ಣು ಮಗುವಿಗೆ ಆರತಿ ಮತ್ತು ಕೀರ್ತಿ ಎರಡನ್ನು ತರುವ ಸಾಮರ್ಥ್ಯವಿದೆ. ಇಂದು ಶೇ.35ಕ್ಕಿಂತಲೂ ಹೆಚ್ಚು ಹೆಣ್ಣು ಮಕ್ಕಳು ಅಪೌಷ್ಟಿಕತೆಯನ್ನು ಅನುಭವಿಸುತ್ತಿದ್ದಾರೆ. ಪೋಷಣೆಯಲ್ಲಿ ಸಮಾನ ಅವಕಾಶಗಳು ಲಭಿಸಬೇಕು. ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಂತಹ ಪ್ರಕರಣಗಳು, ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟ ಸೇರಿದಂತೆ ಹಲವರು ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಇವುಗಳನ್ನು ತಡೆಯಲು ಅತ್ಯಂತ ಕಠಿಣ ಕಾನೂನು ಜಾರಿಗೆ ತರಬೇಕಿದೆ ಎಂದು ಸಹಾಯಕ ನಿರ್ದೇಶಕ ಶ್ರೀಧರ್‌ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪವಿತ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಜಿಲ್ಲಾ ಬಾಲಭವನ ಸಮಿತಿ ಸದಸ್ಯ ನರಸಿಂಹಮೂರ್ತಿ,ಸಂಪನ್ಯೂಲ ವ್ಯಕ್ತಿ ವಕೀಲರಾದ ಕವಿತಾ, ಜಿಲ್ಲೆಯ ಶಿಸು ಅಭಿವೃದ್ಧಿ ಅಧಿಕಾರಿಗಳಾದ ಅಂಬಿಕಾ, ಪ್ರಸನ್ನಕುಮಾರ್‌, ಮಂಜುನಾಥ್‌, ಅನುಷಾ, ದಿನೇಶ್‌, ಬಾಲಭವನ ವ್ಯವಸ್ಥಾಪಕ ಚೌಡಪ್ಪ, ಕಾರ್ಯಕ್ರಮ ಸಂಯೋಜಕರಾದ ಮಮತ.ಪಿ,ಜಿಲ್ಲೆಯ ಮೇಲ್ವಿಚಾರಕರು, ಶಾಲೆಗಳ ಮಕ್ಕಳು ಇದ್ದರು.

ಶೈಕ್ಷಣಿಕವಾಗಿಯೂ ಹೆಣ್ಣಿಗೆ ಅನ್ಯಾಯ: ಶ್ರೀಧರ್‌

ಹೆಣ್ಣು ಗರ್ಭದಿಂದ ಗೋರಿಯವರೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬುದನ್ನು ಹಲವಾರು ವರದಿಗಳು ಬಹಿರಂಗ ಪಡಿಸಿವೆ. ಇದರ ಭಾಗವಾಗಿಯೇ ಒಂದು ಸಾವಿರ ಗಂಡು ಮಕ್ಕಳಿಗೆ 986 ಆಸುಪಾಸಿನಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಇದರಿಂದ ಸಮಾಜದ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಶೈಕ್ಷಣಿಕವಾಗಿಯೂ ಹೆಣ್ಣಿಗೆ ಅನ್ಯಾಯ ನಡೆಯುತ್ತಿದೆ. ಗಂಡು ಮಕ್ಕಳ ಸಾಕ್ಷರ ಪ್ರಮಾಣ ಶೇ.85 ಇದ್ದರೆ, ಹೆಣ್ಣು ಮಗುವಿನ ಸಾಕ್ಷರ ಪ್ರಮಾಣ ಶೇ.64ರಷ್ಟಿದೆ. ಉನ್ನತ ಶಿಕ್ಷಣದಲ್ಲಿ ಇದರ ಪ್ರಮಾಣ ಮತ್ತಷ್ಟುಗಂಭೀರವಾಗಿದೆ. ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಶಿಕ್ಷಣ ಹೆಣ್ಣು ಮಗುವಿಗೂ ಸಮಾನವಾಗಿ ದೊರೆಯಬೇಕಿದೆ ಎಂದು ಶ್ರೀಧರ್‌ ತಿಳಿಸಿದರು.

ತಾರತಮ್ಯ ಮನೆಯಿಂದಲೇ ಆರಂಭ: ಡಾ.ರಜಿನಿ

ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜಿನಿ.ಎಂ. ಮಾತನಾಡಿ, ಒಂದು ಸಮುದಾಯದ ಕುರಿತಂತೆ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರೆ ಆ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ನಿಂತಿಲ್ಲ ಎಂದೇ ಅರ್ಥ ಎಂದರು. ಹೆಣ್ಣು ಮಗುವಿನ ಮೇಲೆ ನಡೆಯುವ ಎಲ್ಲಾ ತಾರತಮ್ಯಗಳು ಮನೆಯಿಂದಲೇ ಆರಂಭವಾಗುತ್ತವೆ. ನಮ್ಮ ಮಗಳು ಬೆಳ್ಳಗಾಗಬೇಕು. ಮುಖದಲ್ಲಿನ ಮೊಡವೆ ಹೋಗಬೇಕು. ಕೂದಲು ಬೆಳ್ಳಗಾಗುತ್ತಿವೆ. ಈ ರೀತಿ ಹೆಣ್ಣಿನ ಮೇಲ್ಮೈ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೋಷಕರು, ಆಕೆಯ ದೈಹಿಕ ಬೆಳವಣಿಗೆ, ಆಕೆಯ ಶಿಕ್ಷಣ, ಆಯ್ಕೆಯ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಎಂದಿಗೂ ಯೋಚಿಸುವುದಿಲ್ಲ. ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿ ಬಾಪುಲೆ ಮತ್ತು ಮಲಾಲಾರಂತಹವರು ಹೋರಾಡುತ್ತಿದ್ದರೂ ಸಹ ಹೆಣ್ಣು ಮಗುವಿಗೆ ಶಿಕ್ಷಣ ನೀಡುವ ಬಗ್ಗೆ ಪೋಷಕರಲ್ಲಿ ತಾರತಮ್ಯ ಮುಂದುವರೆದಿದೆ ಎಂದು ವಿಷಾದಿಸಿದರು. ನಿರ್ದೇಶಕ ಶ್ರೀಧರ್‌, ಡಾ. ರಜನಿ ಇತರರು ಪಾಲ್ಗೊಂಡಿದ್ದರು.

Follow Us:
Download App:
  • android
  • ios