Asianet Suvarna News Asianet Suvarna News

ಸುಡುಬಿಸಿಲಿನಲ್ಲಿ ಶಿಗ್ಗಾವಿಯ ಸಿಎಂ ಮನೆವರೆಗೂ ಪಾದಯಾತ್ರೆ ಕೈಗೊಂಡ ಮಹಿಳೆಯರು

* ಪರಿಹಾರಕ್ಕಾಗಿ ಸುಡುಬಿಸಿಲಿನಲ್ಲಿ ಮಹಿಳೆಯರಿಂದ  ಶಿಗ್ಗಾವಿ ಚಲೋ ...!
 * ಶಿಗ್ಗಾವಿಯ ಸಿಎಂ ಮನೆವರೆಗೂ ಪಾದಯಾತ್ರೆ ಕೈಗೊಂಡ ಮಹಿಳೆಯರು
* ಸಿಎಂ ಮನೆವರೆಗೂ ನಡೆದುಕೊಂಡೇ ಹೋಗಿ ಮನವಿ 

Women Padayatra from ranebennur to CM Bommai House shiggaon for compensation rbj
Author
Bengaluru, First Published Apr 25, 2022, 8:24 PM IST

ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ, (ಏ.25):
ತಲೆ ಸಿಡಿಯುತ್ತೆ ಅನ್ನುವಷ್ಟು ಬಿಸಿಲು. ಒಂದು ಹೆಜ್ಜೆ ಮುಂದೆ ಇಡೋಕೂ ಕಷ್ಟ. ಮೈ ತುಂಬ ಬಿಸಿಲ ಧಗೆಗೆ ನೀರಿಳಿಯುತ್ತಿದೆ. ಆದರೂ ಆ ಬಡಪಾಯಿ ಜೀವಗಳು ನ್ಯಾಯಕ್ಕಾಗಿ , ಒಂದಿಷ್ಟು ಪರಿಹಾರಕ್ಕಾಗಿ ಪಾದಯಾತ್ರೆ ಮಾಡ್ತಾ ಇದ್ದವು. ಸಿಎಂ ಮನೆವರೆಗೂ ನಡೆದುಕೊಂಡೇ ಹೋಗಿ ಮನವಿ ನೀಡಿ ಬರ್ತೀವಿ ಅಂತ ಶಿಗ್ಗಾವಿ ವರೆಗೂ ಪಾದಯಾತ್ರೆ ನಡೆಸಿವೆ ಈ ಬಡಪಾಯಿ ಜೀವಗಳು. ಅಷ್ಟಕ್ಕೂ ಇವರ ಸಮಸ್ಯೆ ಏನು ನೋಡೋಣ  ಈ ಸ್ಟೋರಿಯಲ್ಲಿ...

ತಾಯಿ ಗರ್ಭ ಎಂದರೆ ಅದು ಸ್ವರ್ಗ, ತನ್ನ ಕರುಳ ಕುಡಿಗೆ ಜನ್ಮ ನೀಡುವ ತಾಯಿಯ ಪವಿತ್ರ ಸ್ಥಾನ ಗರ್ಭ. ಆದರೆ ಅದೇ ಗರ್ಭ ಕಳೆದುಕೊಂಡ ನೂರಾರು ಮಹಿಳೆಯರೀಗ ಸಹಾಯಕ್ಕಾಗಿ ಅಂಗಲಾಚುತ್ತಿವೆ. ಉರಿಬಿಸಿಲು ಸಹಿಸಿ , ಹಸಿವು ಬದಿಗೊತ್ತಿ, ನಿತ್ರಾಣ ಹೆಜ್ಜೆಗಳನ್ನಿಡುತ್ತಾ  ಪಾದಯಾತ್ರೆ ಮಾಡುತ್ತಿದ್ದಾರೆ. 

ಹಾವೇರಿ ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಕ್ಲೋಸ್: ಗರ್ಭಿಣಿಯರ ಕಷ್ಟ ಕೇಳೋರಿಲ್ಲ..!

ಹೌದು...ಪರಿಹಾರಕ್ಕಾಗಿ ಸುಡು ಬಿಸಿಲಿನಲ್ಲಿ ಮಹಿಳೆಯರಿಂದ ಶಿಗ್ಗಾವಿ ಚಲೋ  ಆರಂಭವಾಗಿದೆ‌. ರಾಣೆಬೆನ್ನೂರು ನಗರದಿಂದ ಶಿಗ್ಗಾವಿ ಪಟ್ಟಣದವರೆಗೂ ಬಿರು  ಬಿಸಿಲಿನಲ್ಲಿ ಮಹಿಳೆಯರು ಪಾದಯಾತ್ರೆ ಆರಂಭಿಸಿದ್ದಾರೆ. ಡಾ. ಶಾಂತ ಎಂಬುವರಿಂದ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸಂತ್ರಸ್ಥ ಮಹಿಳೆಯರು ಪಾದಯಾತ್ರೆ ಆರಂಭಿಸಿದ್ದಾರೆ. ಬಡ ಮಹಿಳೆಯರಿಗೆ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆ  ಮಾಡಿದ ಆರೋಪ ಡಾ. ಶಾಂತ ಮೇಲಿದೆ. 

ಹಲವು ವರ್ಷಗಳ ಹಿಂದೆ 1522 ಮಹಿಳೆಯರಿಗೆ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು ಎಂಬ ಆರೋಪವಿದೆ.ರಾಣೆಬೆನ್ನೂರಿನಲ್ಲಿ  ಜನರಲ್ ಸರ್ಜನ್ ಆಗಿದ್ದ  ಡಾ. ಶಾಂತ ಪಂದನ್ನಾರ್ 1,520 ಮಹಿಳೆಯರ   ಗರ್ಭಕೋಶಗಳನ್ನು ತೆಗೆದು ಹಾಕಿದ್ದಾರೆ. ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆಂಬ  ಪ್ರಮುಖ ಆರೋಪ ಕೇಳಿ ಬಂದಿತ್ತು. ಇದೇ ಆರೋಪದಿಂದ ಡಾ. ಶಾಂತ ಸಸ್ಪೆಂಡ್ ಆಗಿದ್ದರು‌.  ಈ ಬಗ್ಗೆ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ್  ಅವಧಿಯಲ್ಲಿ ಈ ಪ್ರಕರಣದ ತನಿಖೆ ಕೂಡಾ ಆಗಿತ್ತು.ಆದರೆ ತನಿಖೆ ಸಮರ್ಪಕವಾಗಿ ನಡೆದೇ ಇಲ್ಲ. ಈ ಪ್ರಕರಣ ಸಿ.ಬಿಐ ಗೆ ವಹಿಸಿ ಅನ್ನೋದು ಈ ಮಹಿಳೆಯರ ಮೊದಲ ಬೇಡಿಕೆ.

ಈಗ ಗರ್ಭಕೋಶ ತೆಗೆಸಿಕೊಂಡ ಮಹಿಳೆಯರು ಅತಂತ್ರರಾಗಿದ್ದಾರೆ. ದುಡಿಯೋಕೂ ಬಾರದೇ , ಇನ್ನಿತರ ಅನಾರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ.ಮಂಡಿನೋವು, ಸೊಂಟ ನೋವು, ಕಣ್ಣಿನ ದೃಷ್ಟಿ ಸಮಸ್ಯೆ  ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ನರಳುತ್ತಿದ್ದಾರೆ.ತಮಗೆ ಮಾಸಾಶನ, ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸಿಎಂ ಗಮನ ಸೆಳೆಯಲು ಪಾದಾಯಾತ್ರೆ ಕೂಡಾ ಆರಂಭಿಸಿದ್ದಾರೆ.

 ಸಿಎಂ ಕ್ಷೇತ್ರ ಶಿಗ್ಗಾವಿವರೆಗೂ ಪಾದಯಾತ್ರೆ ಹಮ್ಮಿಕೊಂಡಿರುವ ಮಹಿಳೆಯರು ಎಷ್ಟೇ ಕಷ್ಟ ಬಂದರೂ ಬಿಡಬಾರದು ಎಂದು ಬಿರು ಬಿಸಿಲಿನಲ್ಲೇ ಮುನ್ನುಗ್ಗುತ್ತಿದ್ದಾರೆ.  ತಪ್ಪಿತಸ್ಥ ಡಾ. ಶಾಂತಗೆ ಕಠೀಣ ಶಿಕ್ಷೆ ಆಗಬೇಕು. ದಯಾಳುಗಳಾದ ಬೊಮ್ಮಾಯಿ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಮಹಿಳೆಯರ ಹೋರಾಟದ ನೇತೃತ್ವ ವಹಿಸಿಕೊಂಡಿರೋ ಶಿವಪುತ್ರ ಮಲ್ಲಾಡದ ಹಾಗೂ ಜಗದೀಶ್ ಅವರ  ಆಗ್ರಹವಾಗಿದೆ.

ಸದ್ಯ ಪರಿಹಾರಕ್ಕಾಗಿ ಆಗ್ರಹಿಸಿ ಹೋರಾಟ, ಪಾದಯಾತ್ರೆ  ನಡೆಯುತ್ತಿದೆ. ಒಬ್ಬ ಜನಪ್ರತಿನಿಧಿಯಾದರೂ ಇವರ ಗೋಳು ಸಿಎಂಗೆ ತಲುಪಿಸಲಿ ಅನ್ನೋದು ಇವರ ಬೇಡಿಕೆ.

Follow Us:
Download App:
  • android
  • ios