Kalaburagi: ವೈದ್ಯರ ಯಡವಟ್ಟಿಗೆ ಮಹಿಳೆ ಬಲಿ: ಹೊಟ್ಟೆ ನೋವೆಂದು ಬಂದು ಹೆಣವಾದಳು

*  ಇಟಗಾ ಗ್ರಾಮದ ನಾಗಮ್ಮ ಬಾಗೋಡಿ ಪ್ರಾಣಕ್ಕೆ ಮುಳುವಾಯ್ತೆ ಶಸ್ತ್ರ ಚಿಕಿತ್ಸೆ?
*  ಹೊಟ್ಟೆ ನೋವೆಂದು ಬಂದ ಮಹಿಳೆಗೆ ಗರ್ಭಾಶಯ ಆಪರೇಷನ್‌
*  ಮನೆಗೆ ಆಧಾರ ಸ್ಥಂಭವಾಗಿದ್ದ ಮಹಿಳೆ 
 

Woman Killed Due to Doctors Negligence in Kalaburagi grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಡಿ.27): ಹೊಟ್ಟೆ ನೋವೆಂದು ವೈದ್ಯರ(Doctors) ಬಳಿ ಬಂದು ಆಪರೇಶನ್‌ಗೆ(Surgery) ಒಳಗಾಗಿ ಏಕಾಏಕಿ ದೇಹಸ್ಥಿತಿ ವಿಷಮಿಸಿ ಸಾವನ್ನಪ್ಪಿರುವ ಇಟಗಿಯ ನಾಗಮ್ಮ ಬಾಗೋಡಿ (45) ಸಾವು ಆಕೆಯ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ.

ವೈದ್ಯರ ಆಪರೇಷನ್‌ ಯಶಸ್ವಿಯಾಗಿಲ್ಲ, ಚಿಕಿತ್ಸೆಯಲ್ಲಿನ(Treatment) ಯಡವಟ್ಟುಗಳಿಂದಲೇ ನಾಗಮ್ಮ ಸಾವನ್ನಪ್ಪಿದ್ದಾಳೆ(Death), ವೈದ್ಯರ ಆಪರೇಷನ್‌ ನಾಗಮ್ಮಳ ಸಂಸಾರವನ್ನೇ ಪರೇಶಾನ್‌ ಮಾಡಿದೆ ಎಂದು ಸಹೋದರರು, ಬಂಧುಗಳು ಹಲಬುತ್ತಿದ್ದಾರೆ. ಐವರು ಮಕ್ಕಳ ದೊಡ್ಡ ಸಂಸಾರ, ಪತಿರಾಯ ವ್ಯಸನಿ. ಸಂಸಾರದ ಭಾರ ನಾಗಮ್ಮಳೇ ಹೊತ್ತಿದ್ದಳು. ಆದರೆ ನಾಗಮ್ಮಳ ಸಾವಿನ ಪ್ರಸಂಗ ಆಕೆಯ ಸಂಸಾರದ ಮೇಲೆ ಬರ ಸಿಡಿಲ ರೂಪದಲ್ಲಿ ಬಂದೆರಗಿದೆ.
ವೈದ್ಯರ ಅಲಕ್ಷತನದಿಂದ ತನ್ನ ತಂಗಿಯ ಸಾವಾಯ್ತು ಎಂದು ಸಹೋದರ ಮಹಾಂತೇಶ ಅಳುತ್ತಿದ್ದರೆ, ಗರ್ಭಾಶಯದ ತೊಂದರೆ ಇದ್ದಾಗ ದೊಡ್ಡವರಿಗೆ ವಿಷಯ ತಿಳಿಸದೆ ವೈದ್ಯರು ಆಪರೇಷನ್‌ಗೆ ಮುಂದಾಗಿದ್ದಾರೆ. ಪ್ರಕರಣ ಸುತ್ತಲಿನ ಪ್ರಶ್ನೆಗಳಿಗೆ ವೈದ್ಯ ಡಾ. ಜಂಪಾ ಉತ್ತರಿಸಬೇಕೆಂದು ಬಂಧು ರೇವಣಸಿದ್ದಪ್ಪ ಕಣ್ಣೀರಿಡುತ್ತಿದ್ದಾರೆ.

Belagavi Violence: ಮಹಾರಾಷ್ಟ್ರಕ್ಕೆ KKRTC ಬಸ್‌ ಸಂಚಾರ ಸ್ಥಗಿತ

ಹೊಟ್ಟೆ ನೋವೆಂದು ಬಂದು ಹೆಣವಾದಳು:

ಇಟಗಿಯ ನಾಗಮ್ಮ ಡಿ.23ರಂದು ಹೊಟ್ಟೆ ನೋವೆಂದು ತನ್ನ ಪುತ್ರನೊಂದಿಗೆ ಸಂಜನಾ ಸರ್ಜಿಕಲ್‌ ಕ್ಲಿನಿಕ್‌ಗೆ ಆಗಮಿಸಿದಾಗ ಆಕೆಯ ಆರೋಗ್ಯ ತಪಾಸಣೆ ಮಾಡಿ ತಕ್ಷಣ ಶಸ್ತ್ರಕ್ರಿಯೆಗೊಳಗಾಗುವ ಸಲಹೆ ನೀಡಿದ್ದಾರೆ ಡಾ.ಜಂಪಾ. ಆಸ್ಪತ್ರೆಗೆ ಬಂದ ದಿನವೇ ಶಸ್ತ್ರ ಚಿಕಿತ್ಸೆಯೂ ನಡೆದಿದೆ. ಆದರೆ ಶಸ್ತ್ರ ಚಿಕಿತ್ಸೆ ನಡೆದ ದಿನ ರಾತ್ರಿಯೇ ನಾಗಮ್ಮಳ ದೇಹಸ್ಥಿತಿ ವಿಷಮಿಸಿದೆ. ಮೂತ್ರ ವಿಸರ್ಜನೆ ಬಂದ್‌ ಆಗಿ, ಹಿಮೋಗ್ಲೋಬಿನ್‌(Hemoglobin) ಅಂಶ ಕುಸಿದಿದೆ.

ಪರಿಸ್ಥಿತಿ ಮುಚ್ಚಿಟ್ಟ ವೈದ್ಯ:

ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಆಪರೇಷನ್‌ ಥೇಟರ್‌ಗೆ ಒಯ್ದು ಚಿಕಿತ್ಸೆ ನೀಡಿದ್ದಾರಾದರೂ ಯಾವುದೇ ಪ್ರಗತಿ ಕಂಡಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ಎಲ್ಲ ಸರಿಹೋಗುತ್ತದೆಂದು ಡಾ.ಜಂಪಾ ನಾಗಮ್ಮಳನ್ನು ಹೆಚ್ಚಿನ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಾವು ಖಾಸಗಿ ಆಸ್ಪತ್ರೆ ವೈದ್ಯರಿಗೆ ಕೇಳಿದರೆ ತಂಗಿಯ ದೇಹಸ್ಥಿತಿ ಬಿಗಡಾಯಿಸಿರುವ ಸಂಗತಿ ಗೊತ್ತಾಯು. ಡಾ.ಜಂಪಾ ತಮ್ಮಿಂದ ಅನೇಕ ಸಂಗತಿಗಳನ್ನು ಬಚ್ಚಿಟ್ಟು ಇಡೀ ಪ್ರಕರಣದಲ್ಲಿ ತಮ್ಮ ತಪ್ಪು ಯಾರಿಗೂ ಗೊತ್ತಾಗದಂತೆ ಬಚ್ಚಿಡುವ ಯತ್ನ ಮಾಡಿದ್ದಾರೆ. ದೇವರಲ್ಲಿ ಮೊರೆ ಇಟ್ಟು ಕುಳಿತವರಿಗೆ ಶುಕ್ರವಾರ ಮಧ್ಯರಾತ್ರಿ ನಾಗಮ್ಮ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು ಎಂದು ಮಹಾಂತೇಶ ಪಾಟೀಲ್‌ ಕಣ್ಣೀರು ಹಾಕುತ್ತಿದ್ದಾರೆ.

ನಾನಾ ಪ್ರಶ್ನೆಗಳು:

ಆಪರೇಷನ್‌ ನಂತರ ನಾಗಮ್ಮಳ ರಕ್ತದೊತ್ತಡ(Blood Pressure), ಹಿಮೋಗ್ಲೋಬೀನ್‌ ಅಂಶದಲ್ಲಿ ತೀವ್ರ ಕುಸಿತ ಪತ್ತೆ ಹಚ್ಚಲು ಸೂಕ್ತ ಫಾಲೋ ಅಪ್‌ ಮಾಡುವಲ್ಲಿ ಅಲಕ್ಷತನವಾಯ್ತೆ?, ಆಪರೇಷನ್‌ ನಂತರ ಆಕೆಗೆ ಮೂತ್ರ ವಿಸರ್ಜನೆ ತೊಂದರೆ ಕಾಡಿದ್ದೇಕೆ? ನಾಗಮ್ಮಳ ದೇಹಸ್ಥಿತಿ ವಿಷಮಿಸಿದ್ದರೂ ಮತ್ತೊಮ್ಮೆ ಆಪರೇಷನ್‌ಗೆ ಒಳಪಡಿಸಿದ್ದೇಕೆ?, ಆಕೆಯ ದೇಹಸ್ಥಿತಿ ವಿಷಮಿಸಿದೆ ಎಂದರಿತರೂ ಕಾಲಹರಣ ಮಾಡಿದ್ದೇಕೆ? ಎಂದು ನಾಗಮ್ಮ ಪ್ರಕರಣದಲ್ಲಿ ಬಂಧುಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಚಿಕಿತ್ಸೆ ನೀಡಿರುವ ವೈದ್ಯ ಡಾ. ಜಂಪಾ ಅವರೇ ಉತ್ತರಿಸಬೇಕಿದೆ.

Belagavi Assembly Session: ತೌಡು ಕುಟ್ಟುತ್ತಿದ್ದಾರೆ ಕಲಬುರಗಿ ಜನನಾಯಕರು..!

ಮನೆಗೆ ಆಧಾರ ಸ್ಥಂಭವಾಗಿದ್ದಳು:

ವ್ಯಸನಿ ಪತಿರಾಯ, ಐವರು ಮಕ್ಕಳೊಂದಿಗೆ ನಾಗಮ್ಮ ಟೇಲರಿಂಗ್‌ ಕೆಲಸ ಮಾಡುತ್ತಿದ್ದಳು. ಕೇವಲ 2 ಎಕರೆ ಹೊಲ ಇತ್ತೇ ಹೊರತು ಊರಲ್ಲಿ ಯಾವುದೇ ಆಸ್ತಿಪಾಸ್ತಿ ಇಲ್ಲ. ಐವರು ಮಕ್ಕಳಲ್ಲಿ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು. ಇವರಲ್ಲಿ ಇಬ್ಬರ ಮದುವೆಯಾಗಿದೆ. ಇನ್ನೊಬ್ಬಳು ಮಗಳು ಮದುವೆಗೆ ಬಂದಿದ್ದು, ಇಬ್ಬರು ಗಂಡು ಮಕ್ಕಳು ಇನ್ನೂ ಓದುತ್ತಿದ್ದಾರೆ. ಈಕೆಯ ಪತಿರಾಯ ವ್ಯಸನಿ, ಹೀಗಾಗಿ ಮನೆ ಕಡೆ ಲಕ್ಷ ನೀಡಿದವನೇ ಅಲ್ಲ. ನಾಗಮ್ಮಳೇ ನಿತ್ಯ ಬಟ್ಟೆಹೊಲಿದು ಬಂದ ಆದಾಯದಲ್ಲೇ ತನ್ನ ಬದುಕಿನ ಬಂಡಿ ಎಳೆಯುತ್ತಿದ್ದಳು. ಹೊಟ್ಟೆ ನೋವು ಆಗಾಗ ಕಾಡಲಾರಂಭಿಸಿದಾಗ ಚಿಕಿತ್ಸೆ ಬಯಸಿ ಬಂದಿದ್ದೇ ಆಕೆಯ ಪ್ರಾಣಕ್ಕೇ ಮುಳುವಾಗಿದೆ.

ಡಿ.23ರಂದು ಆಕೆಗೆ ಆಪರೇಶನ್‌ ಮಾಡಿದ್ವಿ. ಎಲ್ಲಾ ನಾರ್ಮಲ್‌ ಇತ್ತು. ರಾತ್ರಿ ಬಿಪಿ(BP) ಲೋ ಆಗಿದೆ ಅಂತ ಬೆಳಗ್ಗೆ 6 ಗಂಟೆಗೆ ಗೊತ್ತಾಯ್ತು. ರಕ್ತ ಪರೀಕ್ಷೆ ಮಾಡಿದ್ವಿ, ಬಿಪಿ ತುಂಬ ಲೋ ಇದ್ದದ್ದು ಗಮನಕ್ಕೆ ಬಂದಾಗ ಪುನಃ ಆಪರೇಶನ್‌ ಮಾಡಿ ರಕ್ತಸ್ರಾವವನ್ನೆಲ್ಲ ನಿಲ್ಲಿಸಿದೆವು. ಇದಾದ ನಂತ್ರ ಮೂತ್ರ ವಿಸರ್ಜನೆ ಬರಲಿಲ್ಲ. ಏನೋ ಸಮಸ್ಯೆ ಆಗಿದೆ ಅಂತ ಅರಿವಿಗೆ ಬಂತು. ಕಿಡ್ನಿ ಡಾಕ್ಟರ್‌ ಇರ್ತಾರ, ಅಲ್ಲಿಗೆ ಹೋಗ್ರೀಂತ ಹೇಳ್ದೆ, ಹೀಂಗಾಗಿದೆ. ಸಾವಿರಾರು ಆಪರೇಷನ್‌ ಮಾಡಿದಾಗ ಒಂದೋ, ಎರಡೋ ಪ್ರಕರಣದಲ್ಲಿ ಹೀಂಗಾಗಿರ್ತಾರವ, ಒಳಗ ಎಲ್ಲೋ ಏನೋ ಇರ್ತಾವ, ಎಲ್ಲಾನು ಡಿಟೆಕ್ಟ್ ಮಾಡಲಾಗಲ್ಲ. ಹೀಂಗಾಗಿ ಹೀಂಗ್ಯಾಗಿದೆ. ದೊಡ್ಡ ದವಾಖ್ಯಾನ್ಯಾಗ ವೆಂಟಿಲೇಟರ್‌ ಇರ್ತಾವ. ಅದ್ಕೇ ಅಲ್ಲೀಗೆ ಕಳುಹಿಸಿದ್ದೆ ಅಂತ ಕಲಬುರಗಿ ಸಂಜನಾ ಸರ್ಜಿಕಲ್‌ ಆಸ್ಪತ್ರೆಯ ಡಾ. ಎಪಿ ಜಂಪಾ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios