ಲಿಂಗಸುಗೂರು: ಮುದ್ದಾದ ಮಗುವಿಗೆ ಜನ್ಮ ನೀಡಿದ ಕ್ವಾರಂಟೈನ್‌ನಲ್ಲಿದ್ದ ಮಹಿಳೆ
ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಮಗು ಹೆತ್ತ ಗರ್ಭಿಣಿ| ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಾಲಬಾವಿಯಲ್ಲಿ ನಡೆದ ಘಟನೆ| ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಮಹಿಳೆಯನ್ನು ತಾಲೂಕಿನ ರೋಡಲಬಂಡಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು| ಬಾಣಂತಿ, ಪತಿ ಹಾಗೂ ಇಬ್ಬರು ಮಕ್ಕಳ ಗಂಟಲು ಮತ್ತು ರಕ್ತದ ಮಾದರಿ ಪರೀಕ್ಷೆಗೆ ರವಾನೆ|
ರಾಯಚೂರು(ಮೇ.20): ಕ್ವಾರಂಟೈನ್ ಕೇಂದ್ರದಲ್ಲಿದ್ದ ಗರ್ಭಿಣಿಯೊಬ್ಬರು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಲಿಂಗಸುಗೂರು ತಾಲೂಕಿನ ಹಾಲಬಾವಿಯಲ್ಲಿ ಮಂಗಳವಾರ ನಡೆದಿದೆ.
ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಮಹಿಳೆಯನ್ನು ತಾಲೂಕಿನ ರೋಡಲಬಂಡಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೇಂದ್ರದ ಸಿಬ್ಬಂದಿ ಕಣ್ಣು ತಪ್ಪಿಸಿ ಖಾಸಗಿ ಆಸ್ಪತ್ರೆಗೆ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೊಪ್ಪದ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ರಿಮ್ಸ್ ಆಸ್ಪತ್ರೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಗರ್ಭಿಣಿ ಪತಿಯೊಂದಿಗೆ ಪರಾರಿಯಾಗಿ ತಮ್ಮ ಸ್ವಗ್ರಾಮಕ್ಕೆ ಹೋಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ರಾಯಚೂರು ಬಸ್ ನಿಲ್ದಾಣದಲ್ಲಿ ಜನವೋ ಜನ: ಮಕ್ಕಳ ಪ್ರಯಾಣಕ್ಕೆ ಅಧಿಕಾರಿಗಳ ತಡೆ
ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಟುಂಬವನ್ನು ಪತ್ತೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ರೋಡಲಬಂಡಾ ಪಿಎಚ್‌ಸಿ ಆವರಣದಲ್ಲಿ ಐಸೋಲೇಷನ್ ವಾರ್ಡ್ ನಿರ್ಮಿಸಿ ಬಾಣಂತಿ, ಪತಿ ಹಾಗೂ ಇಬ್ಬರು ಮಕ್ಕಳನ್ನು ಅಲ್ಲಿ ಇರಿಸಿ ಗಂಟಲು ಮತ್ತು ರಕ್ತದ ಮಾದರಿಯವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ತಾಯಿ-ಮಗು ಕ್ಷೇಮವಾಗಿದ್ದಾರೆ.