ಹುಮನಾಬಾದ್: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಸಾವು
* ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರ ಚಿಂಚೊಳಿ ಗ್ರಾಮದಲ್ಲಿ ಘಟನೆ
* 5 ಲಕ್ಷ ರು. ಪರಿಹಾರ ಮಂಜೂರು
* ಸತತ ಮಳೆ ಕುಸಿದು ಬಿದ್ದಿರುವ 10 ಕ್ಕೂ ಹೆಚ್ಚು ಮನೆಗಳು
ಹುಮನಾಬಾದ್(ಜು.22): ಮಳೆಯ ಆರ್ಭಟಕ್ಕೆ ಮನೆಯ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮನೆಯಲ್ಲಿ ಮಂಗಳವಾರ ಸಂಜೆ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಾಗ ಗೋಡೆ ಕುಸಿದಿದೆ. ಪಾರ್ವತಿ ಸ್ಥಳದಲ್ಲೇ ಮೃತಪಟ್ಟರೆ, ಪತಿ ವೈಜಿನಾಥ ಕಸಾಲೆ, ಪುತ್ರಿಯರಾದ ಅಕ್ಷರಾ (7) ಹಾಗೂ ಅರ್ಚನಾ (4) ತೀವ್ರವಾಗಿ ಗಾಯಗೊಂಡಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೀದರ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನದಿಯಲ್ಲಿ ಕಾಲು ಜಾರಿ ಬಿದ್ದು ಗಂಡ-ಹೆಂಡತಿ ಸಾವು
ತಾಲೂಕಿನಾದ್ಯಂತ ಮಂಗಳವಾರ ಸಂಜೆಯಿಂದ ಸತತ ಮಳೆ ಬೀಳುತ್ತಿದ್ದು 10 ಮನೆಗಳು ಕುಸಿದು ಬಿದ್ದಿರುವ ಘಟನೆ ಸಂಭವಿಸಿದೆ. ಜಿಟಿಜಿಟಿ ಮಳೆಯಾಗಿರುವುದರಿಂದ ಹೆಚ್ಚಿನ ನೀರಿನ ರಭಸ ಇಲ್ಲದೆ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಸ್ಥಳಕ್ಕೆ ತಹಸೀಲ್ದಾರ ನಾಗಯ್ಯ ಹಿರೇಮಠ, ತಾಪಂ ಇಒ ಡಾ.ಗೋವಿಂದ ಸೇರಿದಂತೆ ತಾಲೂಕು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪಟ್ಟಣದ ಆಸ್ಪತ್ರೆಗೆ ಶಾಸಕ ರಾಜಶೇಖರ ಪಾಟೀಲ್ ಅವರ ಪುತ್ರ ಅಭಿಷೇಕ್ ಪಾಟೀಲ್ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ಸಹಕರಿಸಿ ಬೀದರ್‌ಗೆ ರೋಗಿಗಳನ್ನು ದಾಖಲಿಸಲು ಕ್ರಮ ಕೈಗೊಂಡರು.
5 ಲಕ್ಷ ರು. ಪರಿಹಾರ ಮಂಜೂರು
ಮಳೆಯಿಂದ ಮನೆ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಪ್ರಕೃತಿ ವಿಕೋಪ ಪರಿಹಾರದಡಿ 4 ಲಕ್ಷ ರು. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರು. ಸೇರಿ ಒಟ್ಟು 5 ಲಕ್ಷ ರು. ಪರಿಹಾರ ಧನ ಮಂಜೂರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.