ನನಗೆ ಸರ್ಕಾರ ನೀಡಿದ ಯಾವುದೇ ಉಚಿತ ಯೋಜನೆಗಳು ಬೇಡ. ಉಚಿತ ಯೋಜನೆಗಳಿಂದ ದೇಶಕ್ಕೆ ನಷ್ಟ ಉಂಟಾಗುತ್ತದೆ. ಇದೇ ಉಚಿತ ಯೋಜನೆಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದರೆ ರಾಜ್ಯ, ದೇಶ ಅಭಿವೃದ್ಧಿ ಆಗುತ್ತದೆ. ನಾನು ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಯ ಲಾಭ ಪಡೆಯುವುದಿಲ್ಲ: ಶಂಕ್ರಮ್ಮ ರಾಘವೇಂದ್ರ ಗೌಡರ 

ಅಮೀನಗಡ(ಜೂ.16):  ಕಾಂಗ್ರೆಸ್‌ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಯಂತೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅದರಂತೆ ರಾಜ್ಯಾದ್ಯಂತ ಮಹಿಳೆಯರು ಹುರುಪಿನಿಂದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ನನಗೆ ಉಚಿತ ಪ್ರಯಾಣ ಬೇಡ. ನಾನು ಹಣ ಕೊಟ್ಟು ಪ್ರಯಾಣ ಮಾಡುತ್ತೇನೆ ಎಂದು ಹೇಳಿ ಪ್ರಯಾಣ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯಲ್ಲಿ ಬುಧವಾರ ನಡೆದಿದೆ.

ಕಮತಗಿ ಪಪಂ ಮಾಜಿ ಉಪಾಧ್ಯಕ್ಷೆ, ಸದ್ಯ ಹೋಟೆಲ್‌ ನಡೆಸುತ್ತಿರುವ ಕಮತಗಿಯ ಶಂಕ್ರಮ್ಮ ರಾಘವೇಂದ್ರ ಗೌಡರ ಉಚಿತ ಪ್ರಯಾಣ ನಿರಾಕರಿಸಿದ ಮಹಿಳೆ. ಶಂಕ್ರಮ್ಮ ಅವರು ಅಮೀನಗಡದಿಂದ ಕಮತಗಿಗೆ ಹಣ ಕೊಟ್ಟು ಪ್ರಯಾಣ ಮಾಡಿದ್ದಾರೆ. 

ಮಹಿಳೆಯರಿಗೆ ಉಚಿತ ಪ್ರಯಾಣ: ರಶ್‌ ಆದ ಬಸ್‌ನಲ್ಲಿ ಅಜ್ಜಿಯ 30,000 ಹಣ ದೋಚಿದ ಕಳ್ಳರು

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ನನಗೆ ಸರ್ಕಾರ ನೀಡಿದ ಯಾವುದೇ ಉಚಿತ ಯೋಜನೆಗಳು ಬೇಡ. ಉಚಿತ ಯೋಜನೆಗಳಿಂದ ದೇಶಕ್ಕೆ ನಷ್ಟ ಉಂಟಾಗುತ್ತದೆ. ಇದೇ ಉಚಿತ ಯೋಜನೆಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದರೆ ರಾಜ್ಯ, ದೇಶ ಅಭಿವೃದ್ಧಿ ಆಗುತ್ತದೆ. ನಾನು ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಯ ಲಾಭ ಪಡೆಯುವುದಿಲ್ಲ ಎಂದಿದ್ದಾರೆ.