ಮುಖ್ಯಮಂತ್ರಿಯಾಗಬೇಕೆಂಬ ಪ್ರಾರ್ಥನೆ ಈಡೇರಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಕ್ತಿ ಮಂದಿರಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ನೊಣವಿನಕೆರೆ ಶ್ರೀಗಳು ಪೂಜೆ ನಡೆಸಿ, 2028ರ ನಂತರವೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಗದಗ: ಸಿಎಂ ಡಿಕೆ ಶಿವಕುಮಾರ್ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದ ಲಿಂಗೈಕ್ಯ ವೀರಗಂಗಾಧರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮುಕ್ತಿ ಮಂದಿರದಲ್ಲಿ ಡಿಕೆಶಿ: ಶ್ರೀಗಳು ನುಡಿದ ಆ ಸ್ಪೋಟಕ ಭವಿಷ್ಯವೇನು?
ಪೂಜೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ, ಗದಗ ಜಿಲ್ಲೆಗೆ ಬರಗಾಲದ ಪ್ರವಾಸಕ್ಕೆ ಬಂದಿದ್ದೆ. ರಾಜ್ಯಾದ್ಯಂತ ಮಳೆ ಬೆಳೆ ಆಗಬೇಕು. ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಬರ ಇದೆ, ಹೀಗಾಗಿ ಇಲ್ಲೇ ಬರಬೇಕು ಅಂತ ಬಂದಿದ್ದೀನಿ. ಹತ್ತಿ, ಮೆಣಸಿನಕಾಯಿ ,ಕಡಲೆ ಕಾಯಿ, ಯಾವ ಬೆಳೆಗಳೂ ರೈತರ ಕೈಗೆ ಸಿಗ್ತಾ ಇಲ್ಲ. ಬರುವಾಗ ಹೆಲಿಕಾಪ್ಟರ್ ನಲ್ಲಿ ನೋಡ್ತಾ ಬಂದೆ, ಎಲ್ಲಾ ಹೊಲ ಖಾಲಿ ಇದೆ. ಭೀಕರ ಬರಗಾಲ ಇದೆ. ಆಲಮಟ್ಟಿ ಬಿಟ್ಟರೆ ಎಲ್ಲೂ ನೀರಿಲ್ಲ. ನನಗೆ ಮುಕ್ತಿ ಮಂದಿರ ಹೃದಯಕ್ಕೆ ಹತ್ತಿರದವಾದ ಸ್ಥಳ, ವೀರ ಗಂಗಾದರ ಅಜ್ಜನವರ ಐಕ್ಯ ಸ್ಥಳ. ನಮ್ಮದು ಸಂಕಲ್ಪ ಅಲ್ಲ ಪ್ರಾರ್ಥನೆ ಮಾಡಿದ್ದೆ, ಪ್ರಾರ್ಥನೆ ಏನಾಯ್ತು ನಿಮಗೆಲ್ಲಾ ಗೊತ್ತಿದೆ. ಹೀಗಾಗಿ ಬಂದು ಋಣ ತೀರಿಸಬೇಕಲ್ಲಾ? ಸೇವೆ ಮಾಡಬೇಕು, ಸ್ಮರಿಸಬೇಕು, ಇದೆಲ್ಲಾ ನಮ್ಮ ಧರ್ಮ. ಎಲ್ಲಾ ಧರ್ಮನೂ ಕಾಪಾಡಬೇಕು, ಅವರವರ ಧರ್ಮ ಅವರನ್ನ ಕಾಪಾಡಬೇಕು. ಬಹಳ ವಿಶೇಷವಾಗಿ ಕಾಡಸಿದ್ದೇಶ್ವರ ಮಠದ ಶ್ರೀಗಳು, ಶಾಸಕರು, ಸ್ಥಳೀಯ ಶಾಸಕರು ಎಲ್ಲ ಬಂದಿದ್ದರು. ಬಿಲ್ಪತ್ರೆ ಹಾಕಿ ಪ್ರಾರ್ಥನೆ ಮಾಡಿದೆವು. ರಾಜ್ಯಕ್ಕೆ ಒಳ್ಳೆಯ ಮಳೆ ಬೆಳೆ ಆಗಬೇಕು ಅಂತ ಪ್ರಾರ್ಥನೆ ಮಾಡಿದ್ದೀನಿ ಎಂದು ತಿಳಿಸಿದರು.
ರಾಜಾ ಪ್ರತ್ಯಕ್ಷ ದೇವತಾ!
ಸಿಎಂ ಡಿಕೆಶಿ ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೊಣವಿನಕೆರೆ ಶ್ರೀಗಳು, 2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತರಾ? ಎಂಬ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಇಂದು ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ. ಅಷ್ಟೋತ್ತರ ಪೂಜೆ, ಆರೋಗ್ಯ ಭಾಗ್ಯದ ಸಂಕಲ್ಪ, ರಾಜಾ ಪ್ರತ್ಯಕ್ಷ ದೇವತಾ ಎಂದು ಹೇಳಿದರು.
ಧರ್ಮದಂಡ ಕೊಟ್ಟು ಆರ್ಶೀವಾದ!
ಮುಂದಿನ 2028ರಿಂದಲೂ ಆಳ್ವಿಕೆಯಲ್ಲಿ ಡಿಕೆ ಶಿವಕುಮಾರ್ ಇರುವಂತೆ ಪೂಜೆ ನಡೆಸಲಾಗಿದೆ. ಇವತ್ತಿನ ಪ್ರಕೃತಿ ಧರ್ಮದಲ್ಲಿ ಮಳೆ, ಬೆಳೆ ಬರುವದು ನಿಧಾನವಿದೆ. ಸಮಯಕ್ಕೆ ತಕ್ಕಂತೆ ಮಳೆ ಆಗುತ್ತೆ. ಡಿಕೆ ಶಿವಕುಮಾರ್ ಅವರಿಗೆ ಹಲವಾರು ಅಡೆತಡೆಗಳಿವೆ. ಉತ್ತಮವಾದ ಆಳ್ವಿಕೆ ಎಂದ ಮೇಲೆ ಹಲವಾರು ಜನರ ನ್ಯೂನ್ಯತೆ ಇದ್ದೇ ಇರುತ್ತದೆ. ಆದರೂ ರಾಜಾ ಪ್ರತ್ಯಕ್ಷ ದೇವತಾ. ನಮ್ಮ ಗುರುಗಳು ಹೇಳಿದಂತೆ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದ್ದಾರೆ.
ಆ ಧರ್ಮದಂಡವನ್ನ ನಾವು ಅವರಿಗೆ ಕೊಟ್ಟು ಆರ್ಶೀವಾದ ಮಾಡಿದ್ದೇವೆ. ಹೀಗಾಗಿ ಅವರು ಎಂದಿಂದಿಗೂ ಜಯಶೀಲರಾಗ್ತಾರೆ. ಎಂತಹ ಸಮಸ್ಯೆ ಬಂದರೂ ಅವರ ಹಿಂದೆ ನಾವಿದ್ದೇವೆ, ನಮ್ಮ ಸ್ಮರಣೆ ಅವರಿಗಿದೆ. ರಕ್ಷಾಕವಚವಾಗಿ ಅವರನ್ನ ನಾವು ಕಾಪಾಡುತ್ತೇವೆ. 2028ರ ನಂತರವೂ ಅವರೇ ಸಿಎಂ ಆಗಿರ್ತಾರೆ. ಅವರ ಬದುಕನ್ನು ಅವರು ರೂಪಿಸಿಕೊಂಡು ಹೋಗ್ತಾರೆ ಎಂದು ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ನೊಣವಿನಕೆರೆ ಶ್ರೀ ಭವಿಷ್ಯ ನುಡಿದಿದ್ದಾರೆ.


