ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಗಂಡ ಸತ್ತರೆ ಸಾಲ ಮನ್ನಾ ಆಗುತ್ತದೆ ಹಾಗೂ ವಿಮೆ ಹಣ ಬರುತ್ತದೆ ಎಂದು ನಂಬಿದ ಪತ್ನಿ ಉಮಾ, ತನ್ನ ಪತಿ ರಾಘವೇಂದ್ರನನ್ನು ಕೊಲ್ಲಲು ಸುಪಾರಿ ನೀಡಿದ್ದಳು. ತನ್ನ ಸಂಬಂಧಿ ಶಿವಾಜಿ ಮತ್ತು ಆತನ ಸ್ನೇಹಿತ ಖಲೀಲ್ ಜೊತೆ ಸೇರಿ ಕೊಲೆ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಕೊಪ್ಪಳ: ಗಂಡ ಸತ್ತರೆ ಸಾಲ ಮನ್ನಾ ಆಗುತ್ತೆ ಎಂದು ನಂಬಿದ ಪತ್ನಿ ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಮುಸ್ಟೂರು ಕ್ಯಾಂಪ್ ನಲ್ಲಿ ನಡೆದಿದೆ. ಪ್ರಕರಣದಲ್ಲಿ ಪತ್ನಿ ಸೇರಿ ಮೂವರ ಬಂಧನ ಮಾಡಲಾಗಿದೆ. ಮೃತ ವ್ಯಕ್ತಿಯನ್ನು 38 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಸಾಲ ತೀರಿಸಲು ಸಾಧ್ಯವಾಗದೆ ಪ್ರತಿನಿತ್ಯ ದಂಪತಿ ನಡುವೆ ಜಗಳ
ಪತ್ನಿ ಉಮಾ, ಕೃತ್ಯದ ಸಂಬಂಧ ತಾಲೂಕು ಪೋಲೀಸ್ ಹಾಗೂ ಹಿರಿಯೂರು ಪೋಲೀಸರು ಬಂಧಿಸಿದ್ದಾರೆ. ರಾಘವೇಂದ್ರ ಪತ್ನಿ ಉಮಾನಿಂದ ಕೊಲೆಗೆ ಸುಪಾರಿ ನೀಡಿ ಕೃತ್ಯ ಎಸಗಿದ ಆರೋಪ ಕೇಳಿ ಬಂದಿದ್ದು, ಉಮಾ ಸಂಬಂಧಿ ಶಿವಾಜಿ ಗೆ ಸುಪಾರಿ ನೀಡಿ ರಾಘವೇಂದ್ರನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗೃಹ ನಿರ್ಮಾಣಕ್ಕಾಗಿ ವಿವಿಧ ಕಡೆಗಳಲ್ಲಿ ರಾಘವೇಂದ್ರ-ಉಮಾ ದಂಪತಿ 18 ಲಕ್ಷ ಸಾಲ ಮಾಡಿಕೊಂಡಿದ್ದರಂತೆ. ಸಾಲ ತೀರಿಸಲು ಸಾಧ್ಯವಾಗದೆ ಪ್ರತಿನಿತ್ಯ ದಂಪತಿ ನಡುವೆ ಜಗಳ ಆಗುತ್ತಿತಂತೆ. ಗಂಡ ಸತ್ತರೆ ಸಾಲ ಮನ್ನಾ ಆಗುತ್ತೆ, ವಿಮೆ ಹಣ ಬರುತ್ತೆ ಎಂಬ ಮಾಹಿತಿಯನ್ನು ಪತ್ನಿ ಉಮಾ ನಂಬಿದ್ದಳಂತೆ. ಈ ಹಿನ್ನಲೆಯಲ್ಲಿ ಪತಿ ರಾಘವೇಂದ್ರ ನನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದಳಂತೆ. ಇದಕ್ಕೆ ಮೊದಲು ಊಟದಲ್ಲಿ ನಿದ್ರಾಜನಕ ಮಾತ್ರೆ ಬೆರೆಸಿ ಪತಿಗೆ ನೀಡಿದ್ದಳಂತೆ. ಆದರೆ ಪತಿ ರಾಘವೇಂದ್ರ ಸಾವನ್ನಪ್ಪದ ಹಿನ್ನಲೆಯಲ್ಲಿ ಕೊಲೆಗೆ ತನ್ನ ಸಂಬಂಧಿ ಶಿವಾಜಿ ಎನ್ನುವನಿಗೆ ಸುಪಾರಿ ನೀಡಿದ್ದಳಂತೆ.
ಕಣ್ಣೀರಿಟ್ಟು ಪತ್ನಿ ಉಮಾ ನಾಟಕ
ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಉಮಾ ಭರವಸೆ ನೀಡಿದ್ದಳಂತೆ. ಉಮಾ ಮಾತು ನಂಬಿ ರಾಘವೇಂದ್ರನನ್ನು ತನ್ನ ಸ್ನೇಹಿತ ಖಲೀಲ್ ಜೊತೆಗೆ ಸೇರಿ ಶಿವಾಜಿ ಕೊಲೆ ಮಾಡಿದ್ದರಂತೆ. ಮೊದಲು ರಾಘವೇಂದ್ರನ ಮೇಲೆ ಹಲ್ಲೆ ನಡೆಸಿ, ಬಳಿಕ ವಿಷ ಕುಡಿಸಿ, ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿದ್ದರಂತೆ. ಆ ಬಳಿಕ ಗಂಡನಿಗೆ ಯಾರೋ ಅಪಘಾತ ಮಾಡಿರಬಹುದು ಎಂದು ಕಣ್ಣೀರಿಟ್ಟು ಉಮಾ ನಾಟಕ ಮಾಡಿದ್ದರಂತೆ. ಘಟನೆ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಕೊಲೆಗೆ ಸುಪಾರಿ ನೀಡಿದ್ದ ಅಂಶ ಬೆಳಕಿಗೆ ಬಂದಿತ್ತಂತೆ. ಆ ಬಳಿಕ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ.
ಕೊಲೆ ರಹಸ್ಯ ಬೆಳಕಿಗೆ ಬಂದಿದ್ದು ಹೇಗೆ?
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರು ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಭಾಗ್ಲಾ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಷ್ಟೂರ ಕ್ಯಾಂಪ್ ನಲ್ಲಿ ಘಟನೆ ನಡೆದಿತ್ತು. ರಾಘವೇಂದ್ರ ಅನ್ನೋರ ಶವ ಪತ್ತೆಯಾಗಿತ್ತು. ಇದು ಮೊದಲು ಅನುಮಾನಸ್ಪದವಾಗಿ ಕಂಡು ಬಂದಿತ್ತು. ಹೀಗಾಗಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಾಲದ ವಿಚಾರವಾಗಿ ಹೆಂಡತಿಯಿಂದ ಗಂಡನ ಕೊಲೆ ಆಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳಾದ ಉಮಾಶ್ರೀ, ಖಲೀಲ್ ಹಾಗೂ ಶಿವಾಜಿ ಬಂಧನ ಮಾಡಲಾಗಿದೆ.
ತನಿಕೆ ಸಂದರ್ಭದಲ್ಲಿ ಅನುಮಾನ ಬಂದು ವಿಚಾರ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ಶವ ದೂರ ತಗೆದುಕೊಂಡು ಹೋಗಿದ್ದರು. ಇನ್ಸುರೆನ್ಸ್ ಹಣದ ವಿಚಾರವಾಗಿ ಕೊಲೆ ಅನ್ನೋದರ ಬಗ್ಗೆ ತನಿಖೆ ನಡೀತಿದೆ. ಮನೆ ಕಟ್ಟೋ ವಿಚಾರಕ್ಕೆ ಸುಮಾರು 18 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರಾಘವೇಂದ್ರ, ಸತ್ತರೆ ಸಾಲ ಮನ್ನಾ ಆಗುತ್ತೆ ಎಂದು ಹಿಂದಿನ ದಿನ ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದಾರೆಂದು ಎಸ್ ಪಿ ವಿವರಿಸಿದ್ದಾರೆ.


