ಸ್ವಾತಂತ್ರ್ಯೋತ್ಸವದ ಅಂಗವಾಗಿ ಉತ್ತರ ಕನ್ನಡದ ಮುಂಡಗೋಡದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಮತ್ತೊಂದು ಘಟನೆಯಲ್ಲಿ, ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ ಹಾರಿಸಿ ಅಗೌರವ ತೋರಲಾಗಿದ್ದು, ಈ ಎರಡೂ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

ಮುಂಡಗೋಡ(ಉತ್ತರ ಕನ್ನಡ): ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೊಸೈಟಿ ಗೋದಾಮು ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಇಂದೂರ ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಬಾಗದಲ್ಲಿ ಕಾಣಿಸಿಕೊಂಡಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಆದರೆ ಸೊಸೈಟಿ ಆಡಳಿತದ ನೇತೃತ್ವದಲ್ಲೇ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಹಾರಿಸದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯಪುರದಲ್ಲಿ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ

ವಿಜಯಪುರ:ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜ ಅರ್ಧ ಹಾರಿ, ಅಪಮಾನವಾದ ಘಟನೆ ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ನಡೆದಿದೆ. ಅಧಿಕಾರಿಗಳ ಯಡವಟ್ಟಿನಿಂದ ಈ ಅಚಾತುರ್ಯ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ನಗರದ ಕನಕದಾಸ ಬಡಾವಣೆಯ ಕೃಷಿ‌ ತಂತ್ರಜ್ಞರ ಕಚೇರಿಯಲ್ಲಿ ಅರ್ಧಕ್ಕೆ ಧ್ವಜ ಹಾರಿಸಲಾಗಿತ್ತು. ಅರ್ಧಮಟ್ಟಕ್ಕೆ ಧ್ವಜವನ್ನು ಅಧಿಕಾರಿಗಳು ಹಾರಿಸಿ ಹೋಗಿದ್ದಾರೆ. ಕೃಷಿ ತಂತ್ರಜ್ಞರ ಸಂಸ್ಥೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ