ಬಿಗ್‌ಬಾಸ್ ಖ್ಯಾತಿಯ ಜಾಹ್ನವಿ ಅವರನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದಲೂ ಆಫರ್ ಬಂದಿದ್ದರೂ, ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಯೋಜನೆಗಳಿಂದ ಪ್ರೇರಿತರಾಗಿ ಅವರು ಜೆಡಿಎಸ್ ಸೇರಿದ್ದಾರೆ. ಜಯಲಲಿತಾ ಅವರನ್ನು ಮಾದರಿಯಾಗಿಟ್ಟುಕೊಂಡಿರುವ ಇವರು, ಜಾತಿ ಮತ್ತು ಹಣಕ್ಕಿಂತ ನಾಯಕತ್ವಕ್ಕೆ ಮಣೆಹಾಕಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕಿಯಾಗಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಬಿಗ್‌ಬಾಸ್ ಜಾಹ್ನವಿ (Bigg Boss Jahnavi) ಅವರಿಗೆ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಜಾಹ್ನವಿ ಅವರನ್ನು ಜೆಡಿಎಸ್ ಪಕ್ಷದ 'ರಾಜ್ಯ ಪ್ರಧಾನ ಕಾರ್ಯದರ್ಶಿ'ಯಾಗಿ ನೇಮಕ ಮಾಡಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈಚೆಗಷ್ಟೇ ಆದೇಶ ಹೊರಡಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರನ್ನೇ ಮಾದರಿಯಾಗಿಟ್ಟುಕೊಂಡು, ಮುಂದೊಂದು ದಿನ ಅವರಂತೆಯೇ ಬೆಳೆಯಬೇಕು ಎಂದು ಕನಸು ಕಂಡಿದ್ದ ಜಾಹ್ನವಿ ಅವರಿಗೆ, ತಾನಾಗಿಯೇ ರಾಜಕೀಯ ಒಲಿದು ಬಂದಿದಂತೆ. ಮ್ಯಾನಿಫೆಸ್ಟೇಷನ್​ ಮಾಡಿದ್ದು ನನಸಾಗುವಂತೆ ಒಂದೇ ಸಲಕ್ಕೆ ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ಎಲ್ಲೆಡೆಯಿಂದಲೂ ಆಫರ್​ ಬಂದಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಹಾಗಿದ್ದರೆ ಜಾಹ್ನವಿ ಬಿಜೆಪಿ, ಕಾಂಗ್ರೆಸ್​ ಬಿಟ್ಟು ಜೆಡಿಎಸ್​ ಸೇರಿದ್ಯಾಕೆ? ಈ ಪ್ರಶ್ನೆಗೆ ಅವರು ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. sabhewithsaba ಎನ್ನುವ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಜಾಹ್ನವಿ ಇದನ್ನು ರಿವೀಲ್​ ಮಾಡಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಒಮ್ಮೆ ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ಬಿಜೆಪಿಯವರೊಬ್ಬರು, ನೀವು ನಮ್ಮ ಪಕ್ಷಕ್ಕೆ ಬನ್ನಿ. ಮೋಹನ್​ ಭಾಗವತ್​ ಅವರನ್ನು ಭೇಟಿ ಮಾಡಿಸುತ್ತೇನೆ ಎಂದರು. ಆಗ ನನಗೆ ಭಯ ಆಗಿ ಹೋಯ್ತು. ಏಕೆಂದರೆ, ಆ್ಯಂಕರಿಂಗ್​ ಮಾಡುವ ಸಮಯದಲ್ಲಿ ನಟನೆಗೆ ಹೋದಾಗ, ಆ್ಯಂಕರಿಂಗ್​ ಮಾಡಲ್ವೇನೋ ಎಂದು ನನಗೆ ಆಫರ್​ ಬಂದಿರಲಿಲ್ಲ. ಈಗ ಏಕಾಏಕಿ ರಾಜಕೀಯಕ್ಕೆ ಹೋದರೆ ನಟನೆಗೂ ಕರೆಯದಿದ್ದರೆ ಏನು ಮಾಡೋದು, ದುಡ್ಡು ಬೇಕಲ್ವಾ, ಅದಕ್ಕೇ ಬಿಜೆಪಿ ಸೇರೋ ಆಸೆಯಾದ್ರೂ ನೋಡ್ತೇನೆ ನೋಡ್ತೇನೆ ಎಂದು ಕಾಲ ತಳ್ಳಿದೆ ಎಂದು ಜಾಹ್ನವಿ ಹೇಳಿದ್ದಾರೆ.

ಜಾಹ್ನವಿ ಹೇಳಿದ್ದೇನು?

ಕೊನೆಗೆ ಅದೇ ಸ್ವಲ್ಪ ದಿನದ ಬಳಿಕ ಜೆಡಿಎಸ್​ ಪಕ್ಷದವರು ಒಬ್ಬರು ಕರೆದರು. ಟಿಕೆಟ್​ ಕೊಡಿಸುವುದಾಗಿಯೂ ಹೇಳಿದರು. ನನ್ನ ಸಮಾಜಸೇವೆ ಕಾರ್ಯವನ್ನೆಲ್ಲಾ ನೋಡಿ ಅವರು ಖುಷಿಪಟ್ಟಿದ್ದರು. ಆರಂಭದಲ್ಲಿ ನನಗೆ ಕಸಿವಿಸಿ ಆಯ್ತು. ಎಲೆಕ್ಷನ್​ ಎಲ್ಲಾ ಎಂದರೆ ತುಂಬಾ ದುಡ್ಡು ಬೇಕಾಗುತ್ತದೆ. ಅದೆಲ್ಲಾ ನನಗೆ ಕಷ್ಟವಾಗಬಹುದು ಎಂದು ಅದನ್ನೂ ಮುಂದೆ ಹಾಕಲು ನೋಡಿದೆ. ಕೊನೆಗೆ ಅವರು ಪದೇಪದೇ ಕರೆದಾಗ ಒಪ್ಪಿಕೊಳ್ಳುವಂತಾಯಿತು ಎಂದು ಜಾಹ್ನವಿ ರಿವೀಲ್​ ಮಾಡಿದ್ದಾರೆ. ದೇವರೇ ಹಾದಿ ಮಾಡಿಕೊಟ್ಟಿದ್ದಾರೆ ಎಂದು ಹೋದೆ. ಸೇರ್ಪಡೆಯಾಗಿಯೇ ಹೋಯ್ತು ಎಂದು ತಿಳಿಸಿದ್ದಾರೆ.

ಎಲ್ಲೆಡೆಯಿಂದ ಕಾಲ್​ ಬಂದಿತ್ತು

ನನಗೆ ಇಂಥದ್ದೇ ಪಕ್ಷ ಅಂತೇನೂ ಇರಲಿಲ್ಲ. ರಾಜಕೀಯ ಎಂದರೆ ಅದಲ್ಲಿ ಜಾತಿ ಲೆಕ್ಕಾಚಾರವೂ ನಡೆಯುತ್ತಿದೆ. ನಾನು ವೀರಶೈವ ಲಿಂಗಾಯತ. ಜಾತಿವಾದವನ್ನು ನೋಡುವುದಿದ್ದರೆ ಬಿಜೆಪಿಗೆ ಸೇರುತ್ತಿದ್ದೆ. ಸಡನ್​ ಆಗಿ ದುಡ್ಡು ಬೇಕು ಎಂದರೆ ಆಡಳಿತ ಪಕ್ಷ (ಕಾಂಗ್ರೆಸ್​) ಸೇರುತ್ತಿದ್ದೆ. ನಾನು ಜರ್ನಲಿಸ್ಟ್​ ಆಗಿರುವುದರಿಂದ ಎಲ್ಲಾ ಪರಿಚಯ ಇದೆ. ಕಾಂಗ್ರೆಸ್​ನವರೂ ನನ್ನನ್ನು ಕರೆದಿದ್ದರು. ಜಾತಿ, ಅಧಿಕಾರ, ದುಡ್ಡು ಎಲ್ಲಕ್ಕಿಂತಲೂ ಮುಖ್ಯವಾಗಿ ನನ್ನ ಯೋಚನೆ ಬೇರೆಯಾಯ್ತು. 20 ತಿಂಗಳು ಅಧಿಕಾರಾವಧಿಯಲ್ಲಿ ಒಬ್ಬ ನಾಯಕನನ್ನು ನೆನಪಿಸಿಕೊಳ್ತೇವೆ ಎಂದರೆ ಅದು ಕುಮಾರಣ್ಣ. ಯೋಜನೆಯನ್ನು ತಂದಾಗ ಮೊದಲಿಗೆ ನೆನಪಿಸಿಕೊಳ್ಳೋದು ಇವರೇ. ಕುಮಾರಣ್ಣ ಅವರನ್ನೇ ಎಲ್ಲರೂ ನೆನಪಿಸಿಕೊಳ್ತಾರೆ. ರೈತರ ಸಾಲಮನ್ನಾ, ಗ್ರಾಮ ವಾಸ್ತವ್ಯ ಎಲ್ಲವೂ ಈಗಲೂ ನೆನಪಿಸಿಕೊಳ್ತಾರೆ. ಸೋ ನಾನು ಅದನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ.