ಮೈಸೂರು (ಡಿ.18):  ವಿಧಾನ ಪರಿಷತ್ತು ಸದಸ್ಯ ಎಚ್‌. ವಿಶ್ವನಾಥ್‌ ಅವರಿಗೆ ಬಿಜೆಪಿ ಬಾಂಬೆಯಲ್ಲಿ ಯಾವ ಮಿಠಾಯಿ ತಿನ್ನಿಸಿತು ಎಂದು ಜೆಡಿಎಸ್‌ ರಾಜ್ಯ ವಕ್ತಾರ ರವಿಚಂದ್ರೇಗೌಡ ಪ್ರಶ್ನಿಸಿದರು.

ಜೆಡಿಎಸ್‌ ಮಿಠಾಯಿ ಕೊಟ್ಟಕಡೆ ಹೋಗುತ್ತದೆ ಎಂದು ಎಚ್‌. ವಿಶ್ವನಾಥ್‌ ಆರೋಪಿಸಿದ್ದಾರೆ. ಅವರನ್ನು ಬಿಜೆಪಿ ಬಾಂಬೆಗೆ ಕರೆದು ಕೊಂಡು ಹೋದಾಗ ಬಾಂಬೆಯಲ್ಲಿ ಯಾವ ಮಿಠಾಯಿಯನ್ನು ತಿನ್ನಿಸಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೇಳಿದರು.

'ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್, ಬಿಜೆಪಿಯ ಮಗು, ಮಿಠಾಯಿ ತೋರಿಸಿದವರತ್ತ ಹೋಗುತ್ತೆ'

ವಿಶ್ವನಾಥ್‌ ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ ಪಕ್ಷವನ್ನು ತಾಯಿ ಎಂದಿದ್ದರು. ನಂತರ ಜೆಡಿಎಸ್‌ಗೆ ಬಂದಾಗ ದೇವೇಗೌಡ ಅವರು ತಂದೆ ಸಮಾನ ಎಂದು ಹೇಳಿದ್ದರು. ಈಗ ಬಿಜೆಪಿಗೆ ಹಾರಿರುವ ಅವರು ಪ್ರಧಾನಿ ಮೋದಿ ಏನಾಗಬೇಕು? ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರು ಪಕ್ಷಗಳಿಗೂ ಹೋಗಿರುವ ವಿಶ್ವನಾಥ್‌ ಯಾರ ಮಗ ಎಂಬುದನ್ನು ರಾಜ್ಯದ ಜನತೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ಎಚ್‌. ವಿಶ್ವನಾಥ್‌ ವಿಧಾನ ಪರಿಷತ್ತು ಸದಸ್ಯರಾಗಲು ಅನರ್ಹರಾಗಿದ್ದು, ಸ್ವಾಭಿಮಾನವಿದ್ದರೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 

ಅನರ್ಹಗೊಂಡಿದ್ದರು ನ್ಯಾಯಾಲದ ಆದೇಶವನ್ನು ಮೀರಿ ನಾಮ ನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಪ್ರಶ್ನೆ ಮಾಡಿದ್ದೇವೆ. ಒಂದೆರಡು ತಿಂಗಳ ಒಳಗೆ ವಿಶ್ವನಾಥ್‌ ಅವರು ತಮ್ಮ ಸ್ಥಾನ ರಾಜೀನಾಮೆ ನೀಡದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಅವರು ಎಚ್ಚರಿಸಿದರು.