ಶಿವಮೊಗ್ಗ(ಜು.25): ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಂತ್ಯವಾಗಿ, ಹೊಸ ಸರ್ಕಾರವಾಗಿ ಬಿಜೆಪಿ ಅಧಿಕಾರಕ್ಕೆ ಏರುವುದು ಖಚಿತವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಯಾರಾರ‍ಯರು ಸಚಿವರಾಗಬಹುದು ಎಂಬ ಲೆಕ್ಕಾಚಾರಗಳೂ ಜೋರಾಗಿಯೇ ಆರಂಭಗೊಂಡಿವೆ.

ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಶಿಕಾರಿಪುರದಿಂದ ಯಡಿಯೂರಪ್ಪ, ಶಿವಮೊಗ್ಗದಿಂದ ಕೆ. ಎಸ್‌. ಈಶ್ವರಪ್ಪ, ಸೊರಬದಿಂದ ಕುಮಾರ್‌ ಬಂಗಾರಪ, ಸಾಗರದಿಂದ ಹರತಾಳು ಹಾಲಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರದಿಂದ ಕೆ. ಬಿ. ಅಶೋಕ್‌ ನಾಯ್ಕ್‌ ಆಯ್ಕೆಯಾಗಿದ್ದಾರೆ. ಇದಲ್ಲದೆ, ಎಸ್‌. ರುದ್ರೇಗೌಡರು ಮತ್ತು ಆಯನೂರು ಮಂಜುನಾಥ್‌ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸಿಎಂ ಸ್ಥಾನ ಹೊರತು ಪಡಿಸಿ ಎಷ್ಟು ಸಚಿವ ಸ್ಥಾನ:

ಮುಖ್ಯಮಂತ್ರಿ ಸ್ಥಾನ ಶಿವಮೊಗ್ಗಕ್ಕೆ ಸಿಗುವುದರಿಂದ ಉಳಿದಂತೆ ಎಷ್ಟುಸಚಿವ ಸ್ಥಾನ ಸಿಗಬಹುದು ಮತ್ತು ಯಾರಿಗೆ ಸಿಗಬಹುದು ಎಂಬುದು ಇದೀಗ ಕುತೂಹಲ ಮೂಡಿಸಿದೆ. ಯಡಿಯೂರಪ್ಪನವರ ನಂತರ ರಾಜ್ಯ ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡವರು ಕೆ. ಎಸ್‌. ಈಶ್ವರಪ್ಪ. ಪಕ್ಷದ ರಾಜ್ಯಾಧ್ಯಕ್ಷರಾಗಿ, ಸಚಿವರಾಗಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ಅನುಭವ ಗಳಿಸಿಕೊಂಡಿದ್ದಾರೆ. ಜೊತೆಗೆ ಶಾಸಕರಾಗಿ ಕೂಡ ಹಿರಿತನವಿದೆ. ಹೀಗಾಗಿ ಸಹಜವಾಗಿಯೇ ಇವರ ಹೆಸರು ಯಡಿಯೂರಪ್ಪ ಬಳಿಕ ಮುಂಚೂಣಿಗೆ ಬರುತ್ತದೆ.

ಪಕ್ಷ ನಿಷ್ಠೆ ಪ್ಲಸ್‌ ಪಾಯಿಂಟ್‌:

ಜೊತೆಗೆ ಪಕ್ಷ ನಿಷ್ಠೆ ಮತ್ತು ಸಂಘ ನಿಷ್ಠೆ ಇವರ ಇನ್ನೊಂದು ದೊಡ್ಡ ಪ್ಲಸ್‌ ಪಾಯಿಂಟ್‌. ರಾಷ್ಟ್ರೀಯ ಬಿಜೆಪಿಯಲ್ಲಿ ಅಮಿತ್‌ ಶಾ ನಂತರ ಇರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅವರಿಗೆ ಮತ್ತು ರಾಜ್ಯ ಉಸ್ತುವಾರಿ ಮುರುಳೀಧರರಾವ್‌ ಅವರಿಗೆ ಕೂಡ ಇವರು ಆಪ್ತರು. ಹಿಂದುಳಿದ ವರ್ಗದ ನಾಯಕರೂ ಎಂಬ ಹೆಸರೂ ಪಕ್ಷದಲ್ಲಿ ಇವರಿಗಿದೆ.

ಈಶ್ವರಪ್ಪ ನಂತರ ಮೂವರ ಹೆಸರು ಮುಂದೆ ಇದೆ:

ಈಶ್ವರಪ್ಪನವರ ಬಳಿಕ ಮುಖ್ಯವಾಗಿ ಮೂರು ಮಂದಿಯ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ. ಇದರಲ್ಲಿ ಹಿರಿತನ ಆರಗ ಜ್ಞಾನೇಂದ್ರ ಅವರಿಗಿದೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಇವರು ಗೆದ್ದಿದ್ದಾರೆ. ಹೀಗಾಗಿ ಇವರ ಹೆಸರು ಪರಿಗಣನೆಗೆ ಬರಬಹುದು.

ಸಿಎಂ ಬಿಎಸ್‌ವೈ; ಜಿಲ್ಲೆಯ ಅಭಿವೃದ್ಧಿಗೆ ಜೈ

ಈಡಿಗ ಸಮುದಾಯದ ನಾಯಕರು ಎಂದು ಗುರುತಿಸಿಕೊಂಡಿರುವ ಕುಮಾರ್‌ ಬಂಗಾರಪ್ಪ 1998 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಸಚಿವರೂ ಆಗಿದ್ದು, ಇವರಿಗೂ ಹಿರಿತನವಿದೆ. ಯಡಿಯೂರಪ್ಪನವರಿಗೆ ಆಪ್ತರು ಎನ್ನುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆದರೂ ಪಕ್ಷಕ್ಕೆ ಬಂದು ಬಹಳ ವರ್ಷವಾಗಿಲ್ಲ.

ಇಬ್ಬರಲ್ಲಿ ಒಬ್ಬರ ಆಯ್ಕೆ:

ಹರತಾಳು ಹಾಲಪ್ಪ ಯಡಿಯೂರಪ್ಪನವರಿಗೆ ಆಪ್ತರು ಎನ್ನುವುದು ಇವರ ದೊಡ್ಡ ಪ್ಲಸ್‌ ಪಾಯಿಂಟ್‌. ಹಿಂದೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಸಂಘ ಪರಿವಾರದ ಡಾರ್ಲಿಂಗ್‌ ಇವರಲ್ಲ. ಹರತಾಳು ಹಾಲಪ್ಪ ಮತ್ತು ಕುಮಾರ್‌ ಬಂಗಾರಪ್ಪ ಇಬ್ಬರೂ ಈಡಿಗ ಸಮಾಜಕ್ಕೆ ಸೇರಿದ ನಾಯಕರಾಗಿದ್ದು, ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಸಹಜವಾಗಿಯೇ ಏಳುತ್ತದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದರ ನಡುವೆ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಎಸ್‌. ರುದ್ರೇಗೌಡರು ಮತ್ತು ಆಯನೂರು ಮಂಜುನಾಥ್‌ ಇಬ್ಬರೂ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸುವುದು ಖಚಿತ. ಇವರಿಬ್ಬರೂ ಯಡಿಯೂರಪ್ಪನವರ ಅತ್ಯಾಪ್ತರು. ಲಿಂಗಾಯಿತ ಸಮುದಾಯಕ್ಕೆ ಸೇರಿದವರು.

ಜಿಲ್ಲೆಗೆ ಗರಿಷ್ಠ ಎರಡಕ್ಕಿಂತ ಹೆಚ್ಚು ಸ್ಥಾನ ಕೊಡುವ ಸಾಧ್ಯತೆ ಇಲ್ಲ:

ಈ ಎಲ್ಲ ಸಾಧ್ಯತೆಗಳು ಇದ್ದರೂ, ಅತೃಪ್ತರು, ಪಕ್ಷೇತರರು, ಬಿಎಸ್‌ಪಿ ಶಾಸಕ ಸೇರಿದಂತೆ ಸುಮಾರು 10 ಸ್ಥಾನ ಬಿಜೆಪಿಯೇತರರಿಗೆ ಹೋಗುವುದರಿಂದ ಬಿಜೆಪಿಗೆ ಉಳಿಯುವುದೇ 22 ಸಚಿವ ಸ್ಥಾನ. ಅದರಲ್ಲಿ 2-3 ಸ್ಥಾನ ಕಾದಿರಿಸಿಕೊಂಡರೆ 19 ಸಚಿವ ಸ್ಥಾನ ಉಳಿಯುತ್ತದೆ. ಹೀಗಾಗಿ ಒಂದೇ ಜಿಲ್ಲೆಗೆ ಗರಿಷ್ಠ ಎರಡಕ್ಕಿಂತ ಹೆಚ್ಚು ಸ್ಥಾನ ಕೊಡುವ ಸಾಧ್ಯತೆ ಇಲ್ಲ. ಇದರ ನಡುವೆ ಬೆಂಗಳೂರಿಗೆ ಅತಿ ಹೆಚ್ಚು ಸಚಿವ ಸ್ಥಾನ ಸಿಗುವುದರಿಂದ ಶಿವಮೊಗ್ಗ ಜಿಲ್ಲೆಗೆ ಯಡಿಯೂರಪ್ಪ ಹೊರತಾಗಿ ಒಂದೇ ಸಚಿವ ಸ್ಥಾನ ಸಿಗುವ ಸಾಧ್ಯತೆಯೇ ಹೆಚ್ಚು