ಶಿವಮೊಗ್ಗ(25): ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಜನರ ಅಭಿವೃದ್ಧಿಯ ಕನಸು ಗರಿಗೆದರಿದೆ. ಕಳೆದ 9 ವರ್ಷಗಳಿಂದ ಅಭಿವೃದ್ಧಿ ಎಂಬುದು ಮರೀಚಿಕೆಯೇ ಆಗಿದ್ದ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಅಭಿವೃದ್ಧಿ ಪರ್ವ ಕಾಣಬಹುದು ಎಂಬ ನಿರೀಕ್ಷೆ ಹುಟ್ಟಿದೆ.

ಇದಕ್ಕೆ ಕಾರಣ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಗೆ ತಂದ ಅಭಿವೃದ್ಧಿಯ ಕಾಮಗಾರಿಗಳು. ಒಂದಲ್ಲ, ಹತ್ತಲ್ಲ, ನೂರಾರು ಯೋಜನೆಗಳು ಇವರ ಅವಧಿಯಲ್ಲಿ ಜಿಲ್ಲೆಗೆ ಬಂದಿವೆ.

ನಾಲ್ಕನೇ ಬಾರಿ ಮುಖ್ಯಮಂತ್ರಿ:

2006ರಲ್ಲಿ ಉಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಹಣಕಾಸು ಖಾತೆಯನ್ನೂ ಪಡೆದಿದ್ದರಿಂದ ಅಭಿವೃದ್ಧಿಗೆ ಬೇಕಾದಷ್ಟು ಹಣ ನೀಡಿದ್ದರು. 2007ರ ನ. 12 ರಂದು ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಗೆಲುವು ಸಾಧಿಸಿ ಮೇ 30 ರಂದು ಪುನಃ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದರು. ಈ ಅವಧಿಯಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದರು.

ಮೂರನೇ ಬಾರಿ 2018ರ ಮೇ 30 ರಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ವಿಶ್ವಾಸ ಸಾಬೀತುಪಡಿಸಲಾಗದೆ ಎರಡನೇ ದಿನದಲ್ಲಿ ರಾಜೀನಾಮೆ ನೀಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದೀಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದು, ಈ ಬಾರಿ ಉಳಿದ ವಿಧಾನಸಭಾ ಅವಧಿಯಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿಯೇ ಇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ವಿಮಾನ ನಿಲ್ದಾಣ:

ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲೊಂದು ವಿಮಾನ ನಿಲ್ದಾಣ ನಿರ್ಮಿಸಬೇಕು. ಆ ಮೂಲಕ ಉದ್ಯಮಿಗಳನ್ನು ಕರೆಸಿ ಇಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಈ ಯೋಜನೆ ಮಾತ್ರ ವಿವಿಧ ತಾಂತ್ರಿಕ ಕಾರಣಗಳಿಂದಾಗಿಯೇ ಟೇಕಾಫ್‌ ಆಗಲೇ ಇಲ್ಲ. ಇದೀಗ ಪುನಃ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿರುವುದರಿಂದ ಈ ಯೋಜನೆಯನ್ನು ಆದ್ಯತೆಯಾಗಿ ಪರಿಗಣಿಸುವ ಸಾಧ್ಯತೆ ಇದೆ. ಜೊತೆಗೆ ಕೇಂದ್ರದಲ್ಲಿ ಕೂಡ ಇವರದೇ ಸರ್ಕಾರ ಇರುವುದರಿಂದ ಯೋಜನೆ ಜಾರಿ ಸುಲಭವಾಗಬಹುದು.

ಯಡಿಯೂರಪ್ಪ ಸರ್ಕಾರ ಯಶಸ್ವಿಗಾಗಿ ವಿಶೇಷ ಪೂಜೆ

ವರ್ತುಲ ರಸ್ತೆ:

ನಗರದ ಎರಡನೇ ಹೊರ ವರ್ತುಲ ಕೂಡ ಇನ್ನೊಂದು ಕನಸು. ಇದಕ್ಕಾಗಿ ಸಿದ್ಧತೆ ನಡೆದಿತ್ತಾದರೂ ಅದು ಜಾರಿಯಾಗಲಿಲ್ಲ. ಇದು ಕೂಡ ಎರಡನೇ ಆದ್ಯತೆಯಾಗಿ ಜಾರಿಯಾಗಬಹುದು. ತುಂಗಾ ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣವಾಯಿತಾದರೂ, ಇಲ್ಲಿ ವಾಕಿಂಗ್‌ ಪಾಥ್‌ ಸೇರಿದಂತೆ ಇನ್ನೊಂದಿಷ್ಟುಅಭಿವೃದ್ಧಿಯ ಕಾಮಗಾರಿಗಳ ಕನಸು ಇತ್ತು. ಇದು ಮುಂದುವರೆಯುವ ಸಾಧ್ಯತೆ ಇದೆ.

ಎಂಪಿಎಂ ಅಭಿವೃದ್ಧಿ:

ಎಲ್ಲದಕ್ಕಿಂತ ಮುಖ್ಯವಾಗಿ ಭದ್ರಾವತಿಯ ಎಂಪಿಎಂ ಕಾರ್ಖಾನೆ ಮತ್ತು ವಿಐಎಸ್‌ಎಲ್‌ ಕಾರ್ಖಾನೆಯ ಉಳಿವಿಗೆ ವಿಶೇಷ ಪ್ರಯತ್ನ ಪಡಬೇಕಿದೆ. ಅದರಲ್ಲಿಯೂ ಮುಖ್ಯವಾಗಿ ಎಂಪಿಎಂ ಕಾರ್ಖಾನೆಯ ಉಳಿವಿಗೆ ವಿಶೇಷ ಅನುದಾನ ಒದಗಿಸುತ್ತಾರೆ ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.