ಬಾಗಲಕೋಟೆ: ಕುಡಿವ ನೀರಿನ ಮೂಲಕ್ಕೆ ವೆಟ್‌ವೆಲ್‌ ಕೊಳೆ?

*  ಜವಾಬ್ದಾರಿ ಮರೆತ ನಗರ ಅಭಿವೃದ್ಧಿ ಪ್ರಾ​ಧಿಕಾರದ ವಿರುದ್ಧ ಜನರ ಆಕ್ರೋಶ
*  ಜನತೆಯ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ 
*  ಹಳೆ ನಗರದ ಕುಡಿಯುವ ನೀರಿನ ಮೂಲಕ್ಕೆ ವೆಟ್‌ವೆಲ್‌ ಹೋಗುತ್ತಿದೆಯೇ?

Wetwell dirt to Drinking Water Storage in Bagalkot grg

ಈಶ್ವರ ಶೆಟ್ಟರ

ಬಾಗಲಕೋಟೆ(ಜೂ.01): ಬಾಗಲಕೋಟೆ ನವನಗರದ ಮುಖ್ಯ ಸಾರ್ವಜನಿಕ ಚರಂಡಿಗೆ (ರಾಜಕಾಲುವೆ) ವೆಟ್‌ವೆಲ್‌ ಅನ್ನು ಬಿಡುವ ಮೂಲಕ ಇಡೀ ನವನಗರದ ನೈರ್ಮಲ್ಯವನ್ನೇ ಕಲುಷಿತಗೊಳಿಸುವ ಜೊತೆಗೆ ಹಳೆ ಬಾಗಲಕೋಟೆ ಜನತೆಗೆ ಕುಡಿಯುವ ನೀರು ಒದಗಿಸುವ ಕ್ವಾರಿ ನೀರಿನ ಸಂಗ್ರಹಕ್ಕೆ ವೆಟ್‌ವೆಲ್‌ (ಡ್ರೈನೇಜ್‌ ಕೊಳೆ ತುಂಬಿದ ಮಾನವನಿರ್ಮಿತ ಟ್ಯಾಂಕ್‌) ಕೊಳೆ ಸೇರುವ ಅಪಾಯ ಎದುರಾಗಿದೆ. ಇದರಿಂದ ನಗರದ ಜನತೆಯ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾ​ಧಿಕಾರದ ಅ​ಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂಬಂಧಿ​ಸಿದ ಸಿಬ್ಬಂದಿಯ ಬೇಜವಾಬ್ದಾರಿ ಪರಿಣಾಮದಿಂದ ನವನಗರದ ಯೂನಿಟ್‌ 1ರ ವೆಟ್‌ವೆಲ್‌ನ ಕೊಳೆಯನ್ನು ಮುಖ್ಯ ಸಾರ್ವಜನಿಕ ಚರಂಡಿಗೆ ಬಿಡುತ್ತಿರುವ ಪ್ರಾ​ಧಿಕಾರದ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನತೆಯ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಪ್ರಾ​ಧಿಕಾರದ ವರ್ತನೆಗೆ ಸಹಜವಾಗಿ ಬೇಸರಮೂಡಿಸಿದೆ.

ವಾಯವ್ಯ ಸಾರಿಗೆಗೆ ಬಿಎಂಟಿಸಿ ಗುಜರಿ ಬಸ್‌ ಮಾರಾಟ: ಕನ್ನಡಪರ ಸಂಘಟನೆಗಳ ಆಕ್ರೋಶ

ಪರಿಸರವೇ ಕಲುಷಿತ:

ನವನಗರದ ಯಮನೂರಪ್ಪನ ದರ್ಗಾಕ್ಕೆ ಹೊಂದಿಕೊಂಡಿರುವ ವಿದ್ಯಾಗಿರಿಯ ಸಂಪರ್ಕದ ಮಾರ್ಗದಲ್ಲಿ ಪ್ರಾ​ಧಿಕಾರ ನಿರ್ಮಿಸಿರುವ ವೆಟ್‌ವೆಲ್‌ ನಿರ್ವಹಣಾ ಘಟಕದಿಂದ ಮುಖ್ಯ ಚರಂಡಿಗೆ ಯುನಿಟ್‌-1ರ ಎಲ್ಲ ತ್ಯಾಜ್ಯವನ್ನು ಬಿಟ್ಟಿರುವುದರಿಂದ ನವನಗರ ಹಾಗೂ ವಿದ್ಯಾಗಿರಿಯ ಬಹುತೇಕ ಪ್ರದೇಶಗಳಲ್ಲಿ ದುರ್ವಾಸನೆ ಹರಡಿದೆ. ಹೀಗಾಗಿ ಸಾರ್ವಜನಿಕರು ಹೊರಗೆ ಓಡಾಡುವುದೇ ಕಷ್ಟಸಾಧ್ಯವಾಗಿದೆ. ಪ್ರಾ​ಧಿಕಾರದ ನಿರ್ಲಕ್ಷ್ಯದ ಪರಿಣಾಮ ನಗರ ಹಾಗೂ ನವನಗರದ ಜನತೆಗೆ ಕಲುಷಿತ ಪರಿಸರದಲ್ಲಿ ಬದುಕಬೇಕಾದ ಅನಿವಾರ್ಯತೆ ಒಂದಡೆಯಾದರೆ ಮುಖ್ಯ ಚರಂಡಿಯ ಮಾರ್ಗದುದ್ದಕ್ಕೂ ಸಂಚಾರ ಕಷ್ಟಕರವಾಗಿದ್ದು ಅಸಹನೀಯವಾಗಿ ಬದುಕಬೇಕಾಗಿದೆ.

ನಿರ್ಲಕ್ಷ್ಯವೇ ಮುಖ್ಯ ಕಾರಣ:

ಯುನಿಟ್‌-1ರ ವೆಟ್‌ವೆಲ್‌ ನಿರ್ವಹಣೆಗೆ ನಾಲ್ಕು ಅತ್ಯಾಧುನಿಕ ಪಂಪ್‌ಗಳು (ಮೋಟರ್‌) ಬೇಕು. ಆದರೆ, ನಾಲ್ಕು ಪಂಪ್‌ಗಳು ಏಕಕಾಲಕ್ಕೆ ದುರಸ್ತಿಗೆ ಬಂದಿವೆ ಎಂಬ ಮಾತುಗಳು ಅ​ಧಿಕಾರಿ ವಲಯದಿಂದ ಕೇಳಿಬರುತ್ತಿದೆ. ಆದರೆ, ಒಂದು ಲಕ್ಷ ಜನ ವಸತಿ ನಗರದ ಜನರ ತ್ಯಾಜ್ಯವನ್ನು ನಿರ್ವಹಿಸಬೇಕಾದ ಪ್ರಾ​ಧಿಕಾರಕ್ಕೆ ಸೂಕ್ತ ಮುನ್ನೆಚ್ಚರಿಕೆ ಹಾಗೂ ಅಗತ್ಯವಾಗಿರುವ ಸಾಮಗ್ರಿಗಳನ್ನು ತಂದಿಟ್ಟುಕೊಂಡು ವೆಟ್‌ವೆಲ್‌ ನಿರ್ವಹಣೆ ಮಾಡಲು ಏಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಪ್ರಾ​ಧಿಕಾರವೇ ಉತ್ತರಿಸಬೇಕಿದೆ.

ಹಳೆ ನಗರದ ಕುಡಿಯುವ ನೀರಿನ ಮೂಲಕ್ಕೆ ವೆಟ್‌ವೆಲ್‌ ಹೋಗುತ್ತಿದೆಯೇ?

ಸದ್ಯ ನವನಗರದ ವೆಟ್‌ವೆಲ್‌ ಯುನಿಟ್‌-1ರ ಮುಖ್ಯ ಚರಂಡಿಯಿಂದ ಪ್ರಾ​ಧಿಕಾರ ಹೊರಬಿಡಲಾಗುತ್ತಿರುವ ವೆಟ್‌ವೆಲ್‌ ಕೊಳೆ ನೇರವಾಗಿ ಹಳೆ ನಗರದ ಕುಡಿಯುವ ನೀರಿನ ಮೂಲವಾದ ಸಿಮೆಂಟ್‌ ಫ್ಯಾಕ್ಟರಿ ಹತ್ತಿರದ ಸಂಗ್ರಹಗೊಂಡ ಕುಡಿವ ನೀರಿನ ಕ್ವಾರಿಗೆ ಸೇರುವ ಅಪಾಯವಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಾ​ಧಿಕಾರದ ಅ​ಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ. ಹಾಗೆನಾದರೂ ಆದರೆ ಹಳೆ ಬಾಗಲಕೋಟೆ ನಗರದ ಕುಡಿವ ನೀರಿನ ಮೂಲವೇ ಕಲುಷಿತವಾಗುವುದು ನಿಶ್ಚಿತವಾಗಿದೆ. ವಾಸ್ತವಿಕವಾಗಿ ವೆಟ್‌ವೆಲ್‌ ಕೊಳೆಯನ್ನು ಪಂಪ್‌ಗಳ ಮೂಲಕ ಒಳಚರಂಡಿ ಮೂಲಕವೇ ನಿಗದಿಪಡಿಸಿದ ಸ್ಥಳಕ್ಕೆ ಬಿಡುವ ವೈಜ್ಞಾನಿಕ ಪದ್ಧತಿ ಇದ್ದು, ಪಂಪ್‌ಗಳ ದುರಸ್ತಿ ನೆಪವೊಡ್ಡಿ ಅಪಾಯಕಾರಿ ಕೊಳೆಯನ್ನು ಸಾರ್ವಜನಿಕ ಚರಂಡಿಗೆ ಬಿಡುವ ಮೂಲಕ ಪ್ರಾ​ಧಿಕಾರ ತನ್ನ ಕರ್ತವ್ಯವನ್ನು ಮರೆತಿದೆ.

ರಾಜ್ಯದಲ್ಲಿ ಅತಿಹೆಚ್ಚು ಸೈಕ್ಲಿಸ್ಟ್​​ಗಳು ಸಾಧನೆ ಮಾಡ್ತಿರೋ ಬಾಗಲಕೋಟೆ ಜಿಲ್ಲೆಗೆ ಬೇಕಿದೆ ವೆಲ್​ಡ್ರೋಮ್

ನವನಗರದ ವೆಟ್‌ವೆಲ್‌ ಯುನಿಟ್‌-1 ಅನ್ನು ನಿರ್ವಹಿಸುವ ಪಂಪ್‌ಗಳು ದುರಸ್ತಿಗೆ ಬಂದಿದ್ದರಿಂದ ಅನಿವಾರ್ಯವಾಗಿ ಮುಖ್ಯಚರಂಡಿಗೆ ವೆಟ್‌ವೆಲ್‌ ಕೊಳೆಯನ್ನು ಬಿಡಬೇಕಾಗಿದೆ. ಒಂದೆರಡು ದಿನಗಳಲ್ಲಿ ಪಂಪ್‌ಗಳು ದುರಸ್ತಿಗೊಳ್ಳಲಿದ್ದು ನಂತರ ಎಲ್ಲವೂ ಸರಿಯಾಗಲಿದೆ ಅಂತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾ​ಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಡಿ.ಜಿ.ಕಲ್ಲೂರಮಠ ಹೇಳಿದ್ದಾರೆ.  

ಪ್ರಾ​ಧಿಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ವೆಟ್‌ವೆಲ್‌ನ ಕಲುಷಿತ ತ್ಯಾಜ್ಯ ಹಳೆ ನಗರದ ಕುಡಿಯುವ ನೀರಿನ ಮೂಲ ಸೇರಿದ್ದೇ ಆದರೆ ನಿಶ್ಚಿತವಾಗಿ ನಗರದ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಂಥ ನೀರನ್ನು ಕುಡಿಯುವುದರಿಂದ ಟೈಫೈಡ್‌, ಕರುಳಬೇನೆ, ವಾಂತಿ-ಭೇದಿ ಮತ್ತಿತರ ಅಪಾಯಕಾರಿ ರೋಗಗಳು ಜನರಿಗೆ ತಗುಲುವುದು ನಿಶ್ಚಿತವಾಗಿದೆ ಅಂತ ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತ ಘನಶ್ಯಾಂ ಭಾಂಡಗೆ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios