ವಾಯವ್ಯ ಸಾರಿಗೆಗೆ ಬಿಎಂಟಿಸಿ ಗುಜರಿ ಬಸ್ ಮಾರಾಟ: ಕನ್ನಡಪರ ಸಂಘಟನೆಗಳ ಆಕ್ರೋಶ
* 25 ಸಾವಿರ ಬಸ್ಗಳನ್ನ ಮಾರಾಟ ಮಾಡಲು ಮುಂದಾಗಿರೋ ಬಿಎಂಟಿಸಿ
* ಈಗಾಗಲೇ ಬಿಎಂಟಿಸಿ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಅಧಿಕಾರಿಗಳಿಂದ ಮಾತುಕತೆ
* ಗುಜರಿ ಬಸ್ ಖರೀದಿಸಿದ್ರೆ ಉಗ್ರ ಹೋರಾಟದ ಎಚ್ಚರಿಕೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜೂ.01): ರಾಜ್ಯದಲ್ಲಿ ಆಗಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಎಂಬ ಕೂಗು ಕೇಳುತ್ತಲೇ ಬರ್ತಿದೆ, ಆದ್ರೆ ಅದರ ಸಾಲಿಗೆ ಈಗ ಮತ್ತೊಂದು ವಿವಾದ ಶುರುವಾಗಿದೆ. ರಾಜ್ಯದಲ್ಲಿ ಬಿಎಂಟಿಸಿ ಗುಜರಿಗೆ ಹಾಕಲು ಮುಂದಾಗಿರೋ ಸರ್ಕಾರಿ ಬಸ್ಗಳನ್ನ ಇದೀಗ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಖರೀದಿಗೆ ಮುಂದಾಗಿದ್ದು, ಈ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬಸ್ಗಳು ಓಡಾಡುವ ಜಿಲ್ಲೆಗಳಲ್ಲಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಹೊಸ ಬಸ್ನಲ್ಲಿ ಕುಳಿತು ಸಂಭ್ರಮಿಸಬೇಕಾಗಿದ್ದ ಉತ್ತರ ಕರ್ನಾಟಕದ ಜನರು ಇನ್ನು ಮುಂದೆ ಗುಜರಿ ಅಂದರೆ ಮೋಡಕಾಕ್ಕೆ ಹೋಗುವ ಬಸ್ಸಿನಲ್ಲಿ ಕುಳಿತು ಸರ್ಕಾರಕ್ಕೆ ಹಿಡಿಶಾಪ ಹಾಕಬೇಕಾದ ಅನಿವಾರ್ಯತೆ ಪರಿಸ್ಥಿತಿ ಬಂದರೂ ಬರಬಹುದು. ಹೌದು. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಓಡಿಸುತ್ತಿದ್ದ ಅಂದಾಜು 25 ಸಾವಿರ ಬಸ್ಗಳನ್ನ ಗುಜರಿಗೆ ಹಾಕಲು ನಿರ್ಧರಿಸಿದೆಯಂತೆ. ಈ ಬಸ್ಗಳು ಬರೋಬ್ಬರಿ 8ರಿಂದ 9 ಲಕ್ಷ ಕಿಮೀ ಓಡಿದ್ದು, ಇವುಗಳನ್ನ ಬಿಎಂಟಿಸಿ ಗುಜರಿಗೆ ಹಾಕಲು ಮುಂದಾಗಿದ್ದರೆ ಇತ್ತ ವಾಯವ್ಯ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆ ಆ ಬಸ್ಗಳನ್ನ 50 ಸಾವಿರ ದಿಂದ ಅಂದಾಜು 1 ಲಕ್ಷ ರೂಪಾಯಿವರೆಗೆ ಖರೀದಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದ್ದು, ಈ ಸಂಬಂದ ಅಧಿಕಾರಿಗಳ ಮಟ್ಟದಲ್ಲೂ ಮೊದಲ ಹಂತದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ವಾಯವ್ಯ ಸಾರಿಗೆಗೆ ಬಿಎಂಟಿಸಿಯ ಗುಜರಿ ಬಸ್..!
ಅಚ್ಚರಿಯ ಸಂಗತಿ ಅಂದ್ರೆ ಉತ್ತಮ ರಸ್ತೆಗಳನ್ನ ಹೊಂದಿರೋ ಬೆಂಗಳೂರಿನಂತಹ ಮಹಾನಗರದಲ್ಲಿಯೇ ಸಂಚಾರಕ್ಕೆ ಯೋಗ್ಯವಲ್ಲದ ಬಸ್ಗಳನ್ನ ಇದೀಗ ಖರೀದಿಸಿ ಉತ್ತರ ಕರ್ನಾಟಕದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಯಾವ ರೀತಿ ಸಂಚಾರಕ್ಕೆ ಬಿಡುತ್ತೇ ಅನ್ನೋದೆ ಯಕ್ಷಪ್ರಶ್ನೆಯಾಗಿದೆ. ಆದ್ರೆ ಗುಜರಿ ಬಸ್ಗಳನ್ನ ಖರೀದಿಸಲು ಮುಂದಾಗಲು ಅಧಿಕಾರಿಗಳು ಮೊದಲ ಹಂತದಲ್ಲಿ ಮಾತುಕತೆ ನಡೆಸಿರೋದು ಈ ಭಾಗದ ಕನ್ನಡಪರ ಸಂಘಟನೆಗಳ ಹೋರಾಟಗಾರರಲ್ಲಿ ತೀವ್ರ ಆಕ್ರೋಶ ಜ್ವಾಲೆಯನ್ನ ಹುಟ್ಟಿಸುವಂತೆ ಮಾಡಿದೆ.
ಗುಜರಿ ಬಸ್ ಖರೀದಿ ನಿರ್ಧಾರಕ್ಕೆ ಕನ್ನಡಪರ ಸಂಘಟನೆಗಳ ವಿರೋಧ
ಇನ್ನು ಗುಜರಿ ಬಸ್ಗಳನ್ನ ಖರೀದಿಸಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂತಹ ಬಸ್ಗಳನ್ನ ಓಡಾಟಕ್ಕೆ ಬಿಡಲು ಮುಂದಾಗಿರೋದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಈಗಾಗಲೇ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಗುಜರಿ ಬಸ್ಗಳನ್ನ ಖರೀದಿಸದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಕನ್ನಡಪರ ಸಂಘಟನೆಗಳು ಸಭೆ ಸೇರಿ ಸಾರಿಗೆ ಸಂಸ್ಥೆಗಳ ಅಧಿಕಾರಿಗಳ ನಿಲುವನ್ನು ಖಂಡಿಸಿದ್ದಾರೆ ಅಲ್ಲದೆ ಮುಖ್ಯಮಂತ್ರಿಗಳಿಗೂ ಸಹ ಈ ಸಂಭಂದ ಮನವಿ ಸಲ್ಲಿಸುತ್ತೇವೆ, ಒಂದೊಮ್ಮೆ ಇದಕ್ಕೆ ಸ್ಪಂದನೆ ಸಿಗದೇ ಹೋದರೆ ಪ್ರತಿಭಟನಾ ಹೋರಾಟ ನಡೆಸುತ್ತೇವೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
NWKRTC: ವಾಯವ್ಯ ಸಾರಿಗೆ ಒಂದೇ ದಿನ 6 ಕೋಟಿ ಆದಾಯ
ಬೊಮ್ಮಾಯಿ ಬೇಕಿದ್ದರೆ ಗುಜರಿ ಬಸ್ಸಲ್ಲಿ ಓಡಾಡಲಿ
ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಗುಜರಿ ಬಸ್ ಖರೀದಿಗೆ ಮುಂದಾಗಿರೋ ಕ್ರಮಕ್ಕೆ ಉತ್ತರ ಕರ್ನಾಟಕದ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಇವುಗಳ ಮಧ್ಯೆ ಸ್ವತ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಗಳು ಸಹ ಈ ಗುಜರಿ ಬಸ್ಗಳ ಓಡಾಟದ ವ್ಯಾಪ್ತಿಗೆ ಸೇರಬೇಕಾಗುತ್ತದೆ, ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಾರಿಗೆ ಸಚಿವರು ಗುಜರಿ ಬಸ್ನಲ್ಲಿಯೇ ಕುಳಿತು ಮೊದಲು ಓಡಾಡಲಿ ಆನಂತರ ಯೋಗ್ಯವೆನಿಸಿದರೆ ಜನರ ಸಂಚಾರಕ್ಕೆ ಬಿಡಲಿ, ಒಂದೊಮ್ಮೆ ಗುಜರಿ ಬಸ್ಗಳನ್ನ ಖರೀದಿಸಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಓಡಾಡಲು ಬಿಟ್ಟಲ್ಲಿ, ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇನ್ನೂ ಸಹ ಅಧಿಕಾರಿಗಳ ಮಾತುಕತೆ ಹಂತದಲ್ಲಿರೋ ಬಿಎಂಟಿಸಿ ಗುಜರಿ ಬಸ್ಗಳ ಖರೀದಿ ವಿಚಾರವನ್ನು ಸರ್ಕಾರ ಕೈಬಿಡಬೇಕಿದೆ, ಇದು ಆಗದೇ ಹೋದಲ್ಲಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮಾತ್ರ ತಪ್ಪಿದ್ದಲ್ಲ. ಇಷ್ಟಕ್ಕೂ ತಮ್ಮ ತವರೂರಿನಲ್ಲಿಯೇ ಗುಜರಿಯಂತಹ ಬಸ್ಗಳನ್ನ ಓಡಿಸಿ ಸಿಎಂ ಬೊಮ್ಮಾಯಿ ಕಂಠಕವಾಗ್ತಾರಾ ಅಥವಾ ಹೊಸ ಬಸ್ಗಳ ಖರೀದಿಗೆ ಅನುಮತಿ ನೀಡಿ ವಿವಾದಕ್ಕೆ ತೆರೆ ಎಳೆಯುತ್ತಾರಾ ಅಂತ ಕಾದು ನೋಡಬೇಕಿದೆ.