ಬೆಂಗ್ಳೂರು ಮೆಟ್ರೋ ಸುರಂಗ ಕೊರೆಯುವ ವೇಳೆ ಬಾವಿ ಕುಸಿತ
* ಬಾವಿ ಮುಚ್ಚಿ ಮನೆ ನಿರ್ಮಾಣ
* ಮನೆಯಡಿ ಸುರಂಗ ಕೊರೆಯುವಾಗ ಕುಸಿದ ಮಣ್ಣು
* ಮನೆಯಲ್ಲಿದ್ದ ಕುಟುಂಬ ಬೇರೆಡೆಗೆ ಸ್ಥಳಾಂತರ
ಬೆಂಗಳೂರು(ಅ.01): ಬೆಂಗಳೂರು ಮೆಟ್ರೋ(Namma Metro) ನಿಗಮದ ಎರಡನೇ ಹಂತದಲ್ಲಿ ಬರುವ ವೆಂಕಟೇಶಪುರ-ಟ್ಯಾನರಿ ರಸ್ತೆ ಮಾರ್ಗದ ಸುರಂಗ ಕೊರೆಯುವ ವೇಳೆ ಮುಚ್ಚಿದ್ದ ಬಾವಿಯೊಂದು ಕುಸಿದ ಘಟನೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮುಚ್ಚಿದ ಬಾವಿಯ ಮೇಲಿದ್ದ ಕಟ್ಟಡದಲ್ಲಿ ವಾಸವಿದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ವೆಂಕಟೇಶಪುರದಿಂದ ಟ್ಯಾನರಿ ರಸ್ತೆ ಕಡೆಗಿನ ಸುಮಾರು ನೂರು ಮೀಟರ್ ದೂರದಲ್ಲಿ ಟನೆಲ್(Tunnel) ಬೋರಿಂಗ್ ಮಷಿನ್ (ಟಿಬಿಎಂ) ‘ಭದ್ರ’ ಸುರಂಗ ಕೊರೆಯುತ್ತಿದೆ. ಸುರಂಗ ಕಾಮಗಾರಿ ನಡೆಯುವಾಗ ದಿಢೀರ್ ಆಗಿ ಬಾವಿ ಕುಸಿಯಲು ಪ್ರಾರಂಭಿಸಿದೆ.
ಈ ಬಾವಿಯನ್ನು ಮುಚ್ಚಿ ಅದರ ಮೇಲೆ ಕಟ್ಟಡ ಕಟ್ಟಲಾಗಿತ್ತು. ಈ ಕಟ್ಟಡದ ನೆಲ ಮಹಡಿಯಲ್ಲಿ ಕೋಳಿ ಫಾರಂ ಮತ್ತು ಮೇಲಿನ ಮಹಡಿಯಲ್ಲಿ ಐವರು ಸದಸ್ಯರ ಕುಟುಂಬ ವಾಸಿಸುತ್ತಿತ್ತು. ಈ ರೀತಿ ಮಣ್ಣು ಕುಸಿಯಲು ಮೆಟ್ರೋ ಕಾಮಗಾರಿ ಕಾರಣ. ಅಲ್ಲಿ ದೊಡ್ಡ ಹಳ್ಳ ಆಗಿದ್ದು, ಇನ್ನು ಅಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಮೆಟ್ರೋದವರೇ ಈ ಜಾಗ ಖರೀದಿ ಮಾಡಿ ಪರಿಹಾರ ನೀಡಲಿ ಎಂದು ಈ ಕಟ್ಟಡದ ಮಾಲೀಕ ಮುಬೀನ್ ಆಗ್ರಹಿಸಿದ್ದಾರೆ.
ಕಂಟೋನ್ಮೆಂಟ್- ಶಿವಾಜಿನಗರ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರ ಬಂದ ಊರ್ಜಾ
ಬಾವಿ ಹದಿನೈದು ಅಡಿ ಆಳವಿದೆ. ಒಂದು ತಿಂಗಳ ಹಿಂದೆ ಬಂದ ಮೆಟ್ರೋ ಅಧಿಕಾರಿಗಳು ಬಾವಿಯ ಕೆಳಗಡೆಯಿಂದ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಯಾವುದೇ ಬಾವಿ, ಕೊಳವೆ ಬಾವಿ ಇರಬಾರದು. ನಿಮಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿ ಬಾವಿ ಮುಚ್ಚಿದ್ದರು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಂಪನದ ಅನುಭವ ಆಗುತ್ತಿತ್ತು. ಈಗ ಬಾವಿ ಕುಸಿದಿದೆ. ಕಾಂಕ್ರೀಟ್ ಹಾಕಿ ಮುಚ್ಚಿ ಕೊಡುತ್ತೇವೆ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ಮತ್ತೆ ಕುಸಿಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಮುಬೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗಷ್ಟೇ ಇದೆ ಪರಿಸರದಲ್ಲಿ ಸುರಂಗ ಕೊರೆಯುವ ಕೆಲಸ ಮುಗಿಸಿ ಊರ್ಜಾ ಯಂತ್ರ ಹೊರ ಬಂದಿತ್ತು.
ಮನೆಯವರಿಗೆ ಬದಲಿ ವ್ಯವಸ್ಥೆ
ಕೋಳಿ ಫಾರಂ ಅನ್ನು ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲಾಗಿದೆ. ಕಟ್ಟಡದಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನಾಗವಾರದ ಬಳಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಳೆಯ ಬಾವಿಯಲ್ಲಿ ಮರಳು ಮತ್ತು ಕಾಂಕ್ರೀಟ್ ತುಂಬುವ ಕೆಲಸ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಮೇಲೆ ಕಟ್ಟಡವನ್ನು ಭದ್ರಪಡಿಸಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಮುಂದುವರಿಯಲಿದೆ. ಅಷ್ಟೇ ಅಲ್ಲ, ಕಟ್ಟಡದ ಕೆಳಗೆ ಸುರಂಗ ಮಾರ್ಗ ಪೂರ್ಣಗೊಂಡ ನಂತರ ಆ ಕಟ್ಟಡದ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಕುಟುಂಬವನ್ನು ಮರು ಸ್ಥಳಾಂತರಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಿಸಿದೆ. ಬಾವಿ ಮುಚ್ಚುವ ಕೆಲಸ ಇನ್ನು ಒಂದೆರಡು ದಿನ ನಡೆಯುವ ಸಾಧ್ಯತೆಯಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.