ಶೃಂಗೇರಿ :  ಕಿಗ್ಗಾ ವಿಶೇಷವಾದ ಪುಣ್ಯಕ್ಷೇತ್ರ. ಇದು ದೇವತೆಗಳ, ಋುಷಿಮುನಿಗಳ ತಪೋಭೂಮಿ. ಇಲ್ಲಿ ಮಳೆಗಾಗಿ ಮೊರೆ ಹೋದರೆ ರಾಜ್ಯಕ್ಕೆ ಮಳೆಯಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ತಾಲೂಕಿನ ಕಿಗ್ಗಾ ಶ್ರೀ ಋುಷ್ಯಶೃಂಗೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯಜಪ, ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ ಮಳೆಯಿಲ್ಲದೇ ಬರ ಉಂಟಾಗಿ ನೀರಿಗಾಗಿ ಜನ ತತ್ತರಿಸಿದ್ದರು. ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ ವತಿಯಿಂದ ಎರಡು ಬಾರಿ ನಾನು ಮಳೆಗಾಗಿ ಪೂಜೆ, ಪರ್ಜನ್ಯ ಜಪ ಮಾಡಿಸಿದ್ದೆ. 

ಆ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯೂ ಆಗಿತ್ತು. ಈ ಬಾರಿಯೂ ಮಳೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಶ್ರಮವಿದ್ದಲ್ಲಿ ಫಲವಿದೆ. ಭಕ್ತಿಯಿದ್ದಲ್ಲಿ ಭಗವಂತನಿದ್ದಾನೆ. ಮನಸಿದ್ದಲ್ಲಿ ಮಾರ್ಗವಿದೆ. ಭವಂತನಲ್ಲಿ ಭಕ್ತಿ, ನಂಬಿಕೆಯಿಟ್ಟರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಸಚಿವ ಹೇಳಿದರು.