Weather forecast: ನಿರಂತರ ಮಳೆಗೆ ಹೈರಾಣಾದ ಧಾರವಾಡ ಜನ
ತೀವ್ರ ಮಳೆ ಕೊರತೆ ಎದುರಿಸುತ್ತಿದ್ದ ಧಾರವಾಡ ಜಿಲ್ಲೆಯು ಇದೀಗ ಕಳೆದ ಎರಡ್ಮೂರು ದಿನಗಳ ಕಾಲ ಸುರಿದ ನಿರಂತರ ಮಳೆಯಿಂದ ಮತ್ತೇ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
ಧಾರವಾಡ (ಜು.21): ತೀವ್ರ ಮಳೆ ಕೊರತೆ ಎದುರಿಸುತ್ತಿದ್ದ ಧಾರವಾಡ ಜಿಲ್ಲೆಯು ಇದೀಗ ಕಳೆದ ಎರಡ್ಮೂರು ದಿನಗಳ ಕಾಲ ಸುರಿದ ನಿರಂತರ ಮಳೆಯಿಂದ ಮತ್ತೇ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
ಮಂಗಳವಾರ ಹಾಗೂ ಬುಧವಾರ ಸಾಧಾರಣ ಪ್ರಮಾಣದಲ್ಲಿ ಜಿಟಿ ಜಿಟಿಯಾಗಿದ್ದ ಮಳೆ ಗುರುವಾರ ನಸುಕಿನಿಂದ ರಾತ್ರಿ ವರೆಗೂ ಎಡಬಿಡದೇ ಸುರಿಯಿತು. ಮಳೆಯಿಂದಾಗಿ ತಾಲೂಕಿನ ಬೋಗೂರಿನ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಯಾಗಿಲ್ಲ. ಆದರೆ, ಗುರುವಾರದ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಬಹುತೇಕ ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 5.1 ಮಿ.ಮೀ ವಾಡಿಕೆ ಮಳೆ ಪೈಕಿ 13.1 ಮಳೆಯಾಗಿದೆ. ಕಳೆದ ಏಳು ದಿನಗಳ ಅವಧಿಯಲ್ಲಿ 36.4 ಮಿಮೀ ಪೈಕಿ 55.8 ರಷ್ಟಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಯಾರಾರ ನನ್ ಆಧಾರ ಕಾರ್ಡ್ ತಿದ್ದಿಸಿ ಕೊಡ್ರಿ; ತಿದ್ದುಪಡಿಗೆ ವೃದ್ಧೆ ಪರದಾಟ!
ರಸ್ತೆ ತುಂಬಿದ ನೀರು:
ಹು-ಧಾ ಮಧ್ಯದ ರಸ್ತೆಯಲ್ಲಂತೂ ಹೊಳೆಯಾಕಾರದಲ್ಲಿ ನೀರು ತುಂಬಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಇಲ್ಲಿಯ ಎನ್‌ಟಿಟಿಎಫ್, ಟೋಲ ನಾಕಾ, ಕೆಎಂಎಫ್ ಸೇರಿದಂತೆ ನವಲೂರು ವರೆಗೂ ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿತ್ತು. ಬೈಕ್ ಹಾಗೂ ಕಾರು ನೀರು ತುಂಬಿದ ರಸ್ತೆಯಲ್ಲಿಯೇ ಬಿಟ್ಟು ಹೋದ ಘಟನೆಗಳೂ ನಡೆದಿವು. ಸಾಧನಕೇರಿ ಕೆರೆಗೆ ಹೋಗುವ ನೀರಿನ ಚರಂಡಿ ತುಂಬಿದ್ದರಿಂದ ಪೊಲೀಸ್ ಹೆಡ್‌ಕ್ವಾರ್ಟಸ್ ರಸ್ತೆ ಕೆಲ ಹೊತ್ತು ಬಂದ್ ಆಗಿತ್ತು. ಇನ್ನು, ಬಹುತೇಕ ಗಟಾರು ತುಂಬಿ ರಸ್ತೆಯಲ್ಲಿಯೇ ನೀರು ಹರಿಯುವ ದೃಶ್ಯ ಸಾಮಾನ್ಯವಾಗಿತ್ತು.
ಈಗಾಗಲೇ ಎರಡು ದಿನಗಳಿಂದ ಧಾರವಾಡದ ಹಾಸ್ಮಿ ನಗರ, ಭಾವಿಕಟ್ಟಿಪ್ಲಾಟ್ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ಬಂದಿದೆ. ಗುರುವಾರದ ಮಳೆಗೆ ಇಲ್ಲಿಯ ಜನರು ಮತ್ತಷ್ಟುತೊಂದರೆ ಅನುಭವಿಸಬೇಕಾಯಿತು. ಪ್ಲಾಸ್ಟಿಕ್, ಕಸ ತುಂಬಿದ ನೀರು ಮನೆಗಳಿಗೆ ಹೊಕ್ಕು ಅವಾಂತರ ಸೃಷ್ಟಿಸಿದೆ. ನಿರಂತರವಾಗಿ ಮಳೆ ಹಾಗೂ ಗಾಳಿಯ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆಯೂ ಧಾರವಾಡದ ಜನತೆಗೆ ಉಂಟಾಯಿತು.
ಉಕ್ಕಿ ಹರಿದ ಹಳ್ಳ:
ಧಾರವಾಡದ ಪಶ್ಚಿಮ ಭಾಗದಲ್ಲಿ ತುಸು ಹೆಚ್ಚಿನ ಮಳೆಯಾಗಿದ್ದು,ಅಳ್ನಾವರ ತಾಲೂಕಿನ ಕಂಬಾರಗಣವಿ ಸಂಪರ್ಕಿಸುವ ರಸ್ತೆ ಹಳ್ಳ ಉಕ್ಕಿ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಬಂದ್ ಆಗಿದ್ದು, ಜನರು, ಶಾಲಾ ವಿದ್ಯಾರ್ಥಿಗಳು ಪರದಾಡಬೇಕಾಯಿತು. ಜನರನ್ನು ಹಾಗೂ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್, ಜೆಸಿಬಿಗಳ ಮೂಲಕ ಊರು ಸೇರುವ ದಂಡೆಗೆ ಮುಟ್ಟಿಸಬೇಕಾಯಿತು. ಹಾಗೆಯೇ, ಮಳೆಯಿಂದ ಖಾಲಿಯಾಗಿದ್ದ ಬಹುತೇಕ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಇದೇ ರೀತಿಯ ಮಳೆಯಾದರೆ ಕೆಲವೇ ದಿನಗಳಲ್ಲಿ ಕೆರೆಗಳು ತುಂಬಲಿವೆ ಎಂದು ಅಂದಾಜಿಸಲಾಗಿದೆ.
ಡಿಸಿ ಸೂಚನೆ:
ಇನ್ನು, ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ ಸೇರಿದಂತೆ ಎಲ್ಲ ಇಲಾಖೆಗಳ ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ತಕ್ಷಣ ಸ್ಪಂದಿಸಿ,ಅಗತ್ಯ ನೆರವು ನೀಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಇಂದು ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ತಾಲೂಕುಗಳ ತಹಸೀಲ್ದಾರರಿಗೆ ಹಾಗೂ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ನಿರಂತರ ಮಳೆಯಿಂದ ವಿವಿಧ ಗ್ರಾಮಗಳಲ್ಲಿನ ಕೆಲವು ಮನೆಗಳಿಗೆ ಭಾಗಶಃ ಹಾನಿಯಾದ ವರದಿಯಾಗಿದೆ. ಈ ಕುರಿತು ಆಯಾ ಗ್ರಾಮಗಳ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ವಿವರವಾದ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ತಿಳಿಸಿರುವ ಅವರು, ಗ್ರಾಮಗಳ ಪ್ರಮುಖ ಕೆರೆ, ಹೊಂಡ, ಹಳ್ಳಗಳ ಬಗ್ಗೆ ಗಮನ ಹರಿಸಿ, ಸುರಕ್ಷತೆ ಖಾತ್ರಿ ಮಾಡಿಕೊಳ್ಳಬೇಕು. ವಿಶೇಷವಾಗಿ ಅಳ್ನಾವರದ ಇಂದಿರಮ್ಮನ ಕೆರೆ, ತುಪರಿಹಳ್ಳ, ಬೆಣ್ಣೆಹಳ್ಳಗಳ ಪಕ್ಕದ ಜನರಿಗೆ ಸುರಕ್ಷತೆ ಕುರಿತು ಮಾಹಿತಿ ನೀಡಿ, ನೀರಿನ ಹರಿವಿನ ಬಗ್ಗೆ ನಿಗಾ ವಹಿಸಬೇಕೆಂದು ಸೂಚಿಸಿದರು.
ಮುಂಗಾರು ಮಳೆ ಅವಾಂತರ: ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಿಸಿದ ಗ್ರಾಮಸ್ಥರು
ಕಳೆದ 24 ಗಂಟೆಗಳಲ್ಲಿ ಧಾರವಾಡ ಜಿಲ್ಲೆಯ ಮಳೆ ಮಾಹಿತಿ (ಮಿ.ಮೀಗಳಲ್ಲಿ)
ತಾಲೂಕು ವಾಡಿಕೆ ವಾಸ್ತವ
- ಧಾರವಾಡ 4.8 12.9
- ಹುಬ್ಬಳ್ಳಿ 4.7 12.3
- ಕಲಘಟಗಿ 8.5 24.3
- ಕುಂದಗೋಳ 2.4 13.5
- ನವಲಗುಂದ 2.7 4.6
- ಹುಬ್ಬಳ್ಳಿ ನಗರ 2.7 4.6
- ಅಳ್ನಾವರ 13.3 27.1
- ಅಣ್ಣಿಗೇರಿ 2.3 5.8