ಬೆಂಗಳೂರು (ಆ.17):  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ (ಆ.19ರವರೆಗೆ) ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ...

ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಈಗಾಗಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ಅದರ ಪ್ರಭಾವದಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕರಾವಳಿ ಜಿಲ್ಲೆಗಳ ಜೊತೆಗೆ ಉತ್ತರ ಒಳನಾಡಿನಾದ್ಯಂತ ಭಾರಿ ಮಳೆ ಬೀಳುವ ಸಂಭವವಿದೆ. ಎಲ್ಲ ಕಡೆಗಳಲ್ಲೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದ್ದರಿಂದ 16 ರಂದು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತೆ ರಾಜ್ಯದಲ್ಲಿ ಭಾರಿ ಮಳೆ : ಎಷ್ಟು ದಿನ ಅಲರ್ಟ್ ?...

ಕರಾವಳಿ ಭಾಗದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 50 ಕಿ.ಮೀ. ಇರುವುದರಿಂದ ಮೀನುಗಾರರು ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಮಂಗಳೂರು ಮತ್ತು ಕಾರವಾರದ ಸಮುದ್ರದಲ್ಲಿ 3.3 ಮೀ. ಎತ್ತರದ ಅಲೆಗಳು ಕಂಡು ಬರಲಿವೆ.

ಬೆಳಗಾವಿಯಲ್ಲಿ 8 ಸೆಂಮೀ ಮಳೆ:

ಆ. 16ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬೆಳಗಾವಿ 8 ಸೆಂ.ಮೀ, ಬಳ್ಳಾರಿ ಜಿಲ್ಲೆಯ ಕಂಪ್ಲಿ 7, ಉಡುಪಿ ಜಿಲ್ಲೆಯ ಕೊಲ್ಲೂರು, ಬೆಳಗಾವಿ ವಿಮಾನ ನಿಲ್ದಾಣ, ರಾಯಚೂರಿನ ಗಬ್ಬೂರು, ಆಗುಂಬೆ ತಲಾ 6, ಉತ್ತರ ಕನ್ನಡದ ಹಳಿಯಾಳ, ಕದ್ರಾ, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ, ಲಿಂಗನಮಕ್ಕಿ, ಹೊಸನಗರ ತಲಾ 5, ಉತ್ತರ ಕನ್ನಡದ ಸಿದ್ದಾಪುರ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಬಾಗಲಕೋಟೆಯ ಲೋಕಾಪುರ, ಧಾರವಾಡದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.