ಕಾರವಾರ(ಆ.15): ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಕಡಲ್ಕೊರೆತ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಮನೆ, ಮೀನುಗಾರಿಕಾ ಸಲಕರಣೆಗಳು ಸಮುದ್ರ ಪಾಲಾಗುವ ಆತಂಕ ಕಾಡುತ್ತಿದೆ.

ಅಂಕೋಲಾ ತಾಲೂಕಿನ ಗಾಬಿತವಾಡ, ಗೋಕರ್ಣದ ಕಡಲ ತೀರ, ಕುಮಟಾ ತಾಲೂಕಿನ ಕರಿದೇವರ ದೇವಸ್ಥಾನದ ಬಳಿ, ಧಾರೇಶ್ವರ ಸಮುದ್ರ ತೀರ, ಹೊನ್ನಾವರ ತಾಲೂಕಿನ ತೊಪ್ಪಲಕೇರಿ, ಗೌಡಕುಳಿ, ಭಟ್ಕಳ ತಾಲೂಕಿನ ಜಾಲಿ, ಕಾರವಾರದ ಕೋಡಿಬಾಗ ಸಾಲು ಮರದ ತಿಮ್ಮಕ್ಕವನ, ದೇವಬಾಗ ಸಮುದ್ರ ತೀರ, ಬಾವಳ, ರವೀಂದ್ರನಾಥ ಟ್ಯಾಗೋರ ಕಡಲ ತೀರ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದೆ.

ಭಾರಿ ಮಳೆಯಿಂದಾಗಿ ಕರಾವಳಿಯಲ್ಲಿ 3202 ಮೀ.ಗಳಷ್ಟುಕಡಲ್ಕೊರೆತವಾಗಿದೆ. ಅದರಲ್ಲಿ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ 1170, ಕುಮಟಾ ವಿಧಾನ ಸಭಾ ಕ್ಷೇತ್ರದಲ್ಲಿ 1810, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 222 ಮೀ. ಕೊರೆತ ಉಂಟಾಗಿದೆ. ಅಲೆತಡೆಗೋಡೆ ಹಾಗೂ ಕಡಲ್ಕೊರೆತ ತಪ್ಪಿಸಲು ಅಗತ್ಯ ಕ್ರಮವಾಗಬೇಕಾದಲ್ಲಿ ಅಂದಾಜು 32.51 ಕೋಟಿ ರು. ಅನುದಾನ ಬೇಕು ಎಂದು ಬಂದರು ಇಲಾಖೆ ಅಂದಾಜಿಸಿದೆ.

ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ

ಅಂಕೋಲಾ ಗಾಬಿತವಾಡದಲ್ಲಾದ ಕೊರೆತದಿಂದ ಮೀನುಗಾರರ ಮನೆಗೆ ಹಾನಿಯಾಗುವ ಸಾಧ್ಯತೆಯಿದೆ. ಹೊನ್ನಾವರದ ಗೌಡಕುಳಿಯಲ್ಲಿ ಬೋಟ್‌ ಲಂಗರು ಸ್ಥಳ ಕೂಡಾ ಸಮುದ್ರದ ಅಲೆಗಳ ಅಬ್ಬರಕ್ಕೆ ಹಾನಿಯಾಗಿದೆ. ಹೀಗಾಗಿ ಬೋಟ್‌ ಲಂಗರು ಮಾಡಲು ಮೀನುಗಾರರು ಭಯಪಡುವಂತಾಗಿದೆ. ಹೊನ್ನಾವರದ ಇಕೋ ಬೀಚ್‌ಗೆ ಬ್ಲೂಫ್ಲ್ಯಾಗ್‌ ಬೀಚ್‌ ಎಂದು ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಕೆಲವು ದಿನಗಳ ಹಿಂದೆ ಇಲ್ಲಿಯೂ ಸಮುದ್ರ ಉಕ್ಕಿಹರಿದು ಅನಾಹುತವಾಗಿದೆ.
ಸಮುದ್ರದಲ್ಲಿ ತೂಫಾನ್‌ ಉಂಟಾದಾಗ, ಭಾರಿ ಮಳೆಯಿಂದ ನದಿಗಳ ನೀರು ಸಮುದ್ರ ಸೇರಿದಾಗಿ ಅಲೆಗಳ ಅಬ್ಬರ ಹೆಚ್ಚಿರುತ್ತದೆ. ಈ ವೇಳೆಯಲ್ಲಿ ಸಮುದ್ರದ ನೀರು ಉಕ್ಕಿಹರಿದು ಅವಾಂತರವಾಗುತ್ತಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಈ ವೇಳೆ ಅಲೆ ತಡೆಗೋಡೆ ನಿರ್ಮಾಣದ ಪ್ರಸ್ತಾಪ ಆಗುತ್ತದೆ. ಮಳೆಗಾಲ ಮುಗಿದು ಸಹಜ ಸಮುದ್ರ ಸ್ಥಿತಿಯತ್ತ ಬಂದಾಗ ಅಲೆ ತಡೆಗೋಡೆ ನಿರ್ಮಾಣ ಪ್ರಸ್ತಾವನೆ ಕೂಡಾ ದಾಖಲೆಯಲ್ಲೇ ಉಳಿದುಕೊಳ್ಳುತ್ತಿದೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಗಬೇಕಿದೆ.