Asianet Suvarna News Asianet Suvarna News

ಮೈಸೂರು : 5 ದಿನ ಮಳೆಯ ಮುನ್ಸೂಚನೆ

  • ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಅ. 17 ರವರೆಗೆ ಸಾಧಾರಣ ಮಳೆ ಬರುವ ಸಾಧ್ಯತೆ 
  • ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರವಿಭಾಗ  ಮಾಹಿತಿ
  • ಮೈಸೂರಿನಲ್ಲಿ ದಸರಾ ಆಚರಣೆ ನಡೆಯುತ್ತಿದ್ದು- ಪ್ರವಾಸಿಗರಿಗೂ ಕೊಂಚ ಸಮಸ್ಯೆ ಎದುರಾಗುವ ಸಾಧ್ಯತೆ
weather Department alerts  5 Days normal rain To lash in mysore  snr
Author
Bengaluru, First Published Oct 13, 2021, 2:41 PM IST

ಮೈಸೂರು (ಅ.13):  ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಅ. 17 ರವರೆಗೆ ಸಾಧಾರಣ ಮಳೆ (Rain) ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ (Weather) ಕ್ಷೇತ್ರವಿಭಾಗ ತಿಳಿಸಿದೆ.

ಈಗಾಗಲೇ ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಕೃಷಿಕರಿಗೆ ಮಾಹಿತಿ :  ಭಾರತೀಯ ಹವಾಮಾನ ಇಲಾಖೆಯು (IMD) ಅ. 21 ರವರೆಗೆ ಸರಾಸರಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಈ ಅವಧಿಯಲ್ಲಿ ರಾಗಿ, ಮುಸುಕಿನಜೋಳ, ನವಣೆ, ಅಲಸಂದೆ, ಹುರುಳಿ, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಬಾಳೆ (Banana), ಅಡಿಕೆ (Arecanut), ಬೆಳ್ಳುಳ್ಳಿ, ಬಟಾಣಿ, ಕ್ಯಾರೇಟ್‌, ಟೊಮ್ಯಾಟೋ (Tomati), ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸಿಗೆ ರೋಗ ಕಾಡಲಿದ್ದು, ಸೂಕ್ತ ಆರೈಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ಭತ್ತಕ್ಕೆ ತಂಡ ಹೊಡೆಯುವಾಗ ಕಾಂಡಕೊರಕ, ರಸಹೀರುವ ಮತ್ತು ಗರಿಸುತ್ತುವ ಹುಳು ನಿವಾರಣೆಗೆ ಕ್ಲೋರೋಪೈರಿಪಾಸ್‌ (Chlorpyriphos) 2 ಮಿ.ಲಿ ಅಥವಾ ಎಕಲೆಕ್ಸ್‌ 2 ಮಿಲಿ ಒಂದು ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಸುಮಾರು 250 ರಿಂದ 300 ಲೀಟರ್‌ ಔಷಧಿಯ ದ್ರಾವಣ ಒಂದು ಎಕರೆಗೆ ಬೇಕಾಗುತ್ತದೆ. ಮೆಣಸಿನಕಾಯಿಗೆ ಹೂ ಬಿಡುವಾಗ ಥಿಫ್ಸ್‌ ಮತ್ತು ನುಸಿ ರೋಗ ಕಾಡಲಿದ್ದು ಇದರ ಹತೋಟಿಗೆ ರೋಗರ್‌ 1.7 ಮಿ.ಲೀ ಮತ್ತು ಡೈಕೋಪಾತ್‌ 2.5 ಮಿ.ಲೀ. ಔಷಧಿಯನ್ನು ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

10 ಜಿಲ್ಲೆಗಳಿಗೆ ವರುಣಾಘಾತ : 2 ದಿನ ಭಾರೀ ಮಳೆ!

ಕೋಳಿ ಮತ್ತು ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಗಳಲ್ಲಿ ಸರಿಯಾದ ಉಷ್ಣಾಂಶ ಕಾಪಾಡಿಕೊಳ್ಳಬೇಕು. ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಇಳಿತವಿರುವುದರಿಂದ ಜಾನುವಾರ, ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ವಿದ್ಯುತ್‌ ಬಲ್ಪ್‌ನ ಶಾಖದ (Electric Heat) ಸಹಾಯದಿಂದ ಕಾಪಾಡಿಕೊಳ್ಳಬೇಕು. ಜಾನುವಾರಗಳ ಜಂತುನಾಶಕ ಔಷಧಿಯನ್ನು ವೈದ್ಯರ ಮಾರ್ಗದರ್ಶನದಲ್ಲಿ ಕುಡಿಸಬೇಕು. ಹಾಲು ಕೊಡುವ ಪ್ರಾಣಿಗಳಿಗೆ ಕೊಡುವ ಹಾಲಿನ ಆಧಾರದ ಮೇಲೆ ಆಹಾರ ನೀಡಬೇಕು. ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಬೇಕು. ಹೆಚ್ಚಿನ ಮಾಹಿತಿಗೆ ರೈತರು ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌ ಮೊ. 94498 69914, ಸಹ ಸಂಶೋಧಕ ಎನ್‌. ನರೇಂದ್ರಬಾಬು ಅವರ ಮೊ. 93435 32154 ಸಂಪರ್ಕಿಸಬಹುದು.

ಬಾಳೆಯಲ್ಲಿ ಎಲೆಚುಕ್ಕೆ ರೋಗ ಮತ್ತು ಎಲೆ ಅಂಚು ಒಣಗುವುದು ಕಂಡುಬಂದಿದ್ದು, ಇದರ ಹತೋಟಿಗೆ 1 ಗ್ರಾಂ. ಕಾರ್ಬನ್‌ ಡೈಜಿನ್‌ (carbon digene)  ಔಷಧಿಯನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಹಾಗೂ ಗಾಳಿಯ ವೇಗ ಹೆಚ್ಚಾಗಿದ್ದು, ಗಿಡಗಳು ಬೀಳುವ ಸಾಧ್ಯತೆ ಇರುವುದರಿಂದ ಗಿಡಗಳು ಬೀಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶುಂಠಿ ಮತ್ತು ಅರಿಸಿನಕ್ಕೆ ರೋಗ ಕಂಡುಂಬದಲ್ಲಿ ತಾಕುಗಳಲ್ಲಿ ನೀರು ನಿಲ್ಲದಂತೆ ಮಾಡಿ 3 ಗ್ರಾಂ. ಕಾಪರ್‌ ಆಕ್ಸಿಕ್ಲೋರೇಡ್‌ ಅನ್ನು 1 ಲೀ. ನೀರಿನಲ್ಲಿ ಕರಗಿಸಿ ಬುಡಕ್ಕು ಸುರಿಯಬೇಕು. ಶುಂಠಿ ಮತ್ತು ಅರಿಸಿನದಲ್ಲಿ ಕಾಂಡ ಕೊರೆಯುವ ಹುಳಿವನ ಬಾಧೆ ಕಂಡುಬಂದಲ್ಲಿ, ಕ್ಲೋರೋಪೈರಿಪಾಸ್‌ ದ್ರಾವಣ ಸಿಂಪಡಿಸಬೇಕು.

ದಸರಾಗೆ ತೊಡಕು : ಮೈಸೂರಿನಲ್ಲಿ ದಸರಾ (Dasara) ನಡೆಯುತ್ತಿದ್ದು, ವಿವಿಧೆಡೆಯಿಂದ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಹಾಗೂ ಅ.15 (ಶುಕ್ರವಾರ) ನಡೆವ ಜಂಬೂ ಸವಾರಿಗೂ ವರುಣನಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. 

  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಅಲರ್ಟ್ ನೀಡಲಾಗಿದೆ.ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯ ಸಾಧ್ಯತೆ ಕಾರಣ ‘ಆರೆಂಜ್‌ ಅಲರ್ಟ್‌’ ಹಾಗೂ ಕರಾವಳಿ ಜಿಲ್ಲೆ ಮತ್ತು ಉತ್ತರ ಒಳನಾಡಿನ ಹೆಚ್ಚಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

Follow Us:
Download App:
  • android
  • ios