Asianet Suvarna News Asianet Suvarna News

10 ಜಿಲ್ಲೆಗಳಿಗೆ ವರುಣಾಘಾತ : 2 ದಿನ ಭಾರೀ ಮಳೆ!

  •   ರಾಜ್ಯದಲ್ಲಿ ಉತ್ತರಾ ಮಳೆಯ ಆರ್ಭಟ ಮುಂದುವರಿದಿದ್ದು, 10 ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆ
  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆಯವರೆಗಿನ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿಹೆಚ್ಚು 18 ಸೆಂ.ಮೀ. ಮಳೆ 
Widespread rain in 10 Districts of karnataka snr
Author
Bengaluru, First Published Oct 13, 2021, 11:11 AM IST

 ಬೆಂಗಳೂರು (ಅ.13) :  ರಾಜ್ಯದಲ್ಲಿ ಉತ್ತರಾ ಮಳೆಯ (Rain) ಆರ್ಭಟ ಮುಂದುವರಿದಿದ್ದು, 10 ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಬೆಂಗಳೂರು (Bengaluru) ವಿಮಾನ ನಿಲ್ದಾಣದಲ್ಲಿ (Airport) ಮಂಗಳವಾರ ಬೆಳಗ್ಗೆಯವರೆಗಿನ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿಹೆಚ್ಚು 18 ಸೆಂ.ಮೀ. ಮಳೆ ಸುರಿದಿದೆ. ಇದರಿಂದಾಗಿ ಸುಮಾರು 20 ವಿಮಾನಗಳ ಹಾರಾಟ ವ್ಯತ್ಯಯವಾಗಿದೆ.

ಇನ್ನು ಮಂಡ್ಯ (Mandya), ದಕ್ಷಿಣ ಕನ್ನಡ (Dakshina kannada), ಉಡುಪಿ (Udupi), ಚಿಕ್ಕಮಗಳೂರು (Chikkamagaluru) ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿದಿದೆ. ಬಳ್ಳಾರಿ (Bellary) ಜಿಲ್ಲೆಯ ಹಲವೆಡೆ, ಮೈಸೂರಿನಲ್ಲಿ (Mysuru) ಮನೆ ಗೋಡೆ ಕುಸಿದಿದೆ. ದಾವಣಗೆರೆಯಲ್ಲಿ (Davanagere) ಭರ್ಜರಿ ಮಳೆಗೆ ಏಷ್ಯಾದ 2ನೇ ಅತಿದೊಡ್ಡ ಕೆರೆ ಕೋಡಿ ಬಿದ್ದಿದೆ. ಗ್ರಾಮವೊಂದರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಚಿತ್ರದುರ್ಗದಲ್ಲೂ ಕೆರೆ ಕುಂಟೆ, ಹಳ್ಳಕೊಳ್ಳಗಳು ತುಂಬಿದ್ದು, ಬೋರ್‌ವೆಲ್‌ಗಳಲ್ಲಿ ನೀರು ಚಿಮ್ಮುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಗುಡಿಬಂಡೆಯಲ್ಲಿ ಕೆರೆ ತುಂಬಿ ರಸ್ತೆಯಲ್ಲಿ ಹರಿದಿದೆ.

ವಿಮಾನ ಸಂಚಾರಕ್ಕೆ ಅಡಚಣೆ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ 20 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸಂಜೆ 5.30ರಿಂದ ರಾತ್ರಿ 12ರ ವರೆಗೆ ರನ್‌ ವೇ ಸ್ಪಷ್ಟವಾಗಿ ಕಾಣದ್ದರಿಂದ ವಿಮಾನಗಳ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ಗೆ ತೊಡಕಾಯಿತು.

ಬೆಂಗಳೂರಿಗರಿಗೆ ಆತಂಕದ ಸುದ್ದಿ : ಇನ್ನೂ ಎರಡು ದಿನ ಭಾರೀ ಮಳೆ

ಇನ್ನು ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಬೆಂಗಳೂರಿನ ಕಾಲುವೆಗಳು, ಚರಂಡಿಗಳು ತುಂಬಿ ನೀರು ತಗ್ಗು ಪ್ರದೇಶದ ನೂರಾರು ಮನೆಗಳಿಗೆ ನುಗ್ಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಂಗಳವಾರವೂ ಸಹ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಬೆಳೆದಿದ್ದ ರಾಗಿ, ಭತ್ತ, ಮುಸುಕಿನ ಜೋಳ, ಬಾಳೆ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಟಿ.ಎಮ್ಮಿಗನೂರು ಕೆರೆ, ಕುಡೀನಿರಕಟ್ಟೆಕೆರೆ, ಗುಂಜಿಗನೂರು ಕೆರೆ, ಮಾಳೇನಹಳ್ಳಿ ಕೆರೆ, ಹೊನ್ನೆಕೆರೆಗಳು ಕೋಡಿ ಬಿದ್ದಿವೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತೊಡರನಾಳ್‌ ಗ್ರಾಮದ ಬೋರ್‌ವೆಲ್‌ನಲ್ಲಿ ನೀರು ಚಿಮ್ಮಿತ್ತಿದೆ. ಚಳ್ಳಕೆರೆ ಪಟ್ಟಣದ ಅಂಬೇಡ್ಕರ್‌ ನಗರ, ರಹೀಂ ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ. ಜಿಲ್ಲಾ ಉಸ್ತುವಾರಿ ಬಿ.ಶ್ರೀರಾಮುಲು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹೊಸದುರ್ಗ ತಾಲೂಕಿನ ನರಸೀಪುರ ಬಳಿ ಹಿರೇಹಳ್ಳ ತುಂಬಿ ಹರಿದಿದೆ.

2 ದಿನ ರಾಜ್ಯದಲ್ಲಿ ಮಳೆ : ಯಲ್ಲೋ ಅಲರ್ಟ್‌

ದಾವಣಗೆರೆ ಜಿಲ್ಲಾದ್ಯಂತ ಭಾರಿ ಮಳೆಯಿಂದಾಗಿ ನೂರಾರು ಎಕರೆ ಗದ್ದೆ ಜಲಾವೃತವಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹರಿಹರ ತಾಲೂಕಿನ ಯಲವಟ್ಟಿಗ್ರಾಮಸ್ಥರನ್ನು ರಾತ್ರೋರಾತ್ರಿ ಗ್ರಾಮದ ದೇವಸ್ಥಾನ, ಶಾಲೆಗಳು, ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಯಿತು. ಸೂಳೆಕೆರೆಯು ಕೋಡಿ ಬಿದ್ದಿದೆ.

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ-1, ಮಾನ್ಯರ ಮಸಲವಾಡ-2 ಮನೆಗಳು ಭಾಗಶಃ ಕುಸಿದು ಬಿದ್ದು ಹಾನಿಯಾಗಿದೆ. ಮೆಕ್ಕೆ, ಹೈಬ್ರೀಡ್‌ ಜೋಳ ಕಟಾವು ಮಾಡಲು ತೀವ್ರ ತೊಂದರೆಯಾಗಿದೆ. ಸಂಡೂರು ತಾಲೂಕಿನ ತೋರಣಗಲ್‌ ಹೋಬಳಿಯ ಜೋಗದಲ್ಲಿ 18 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಭತ್ತ ಕೊಯ್ಲಿಗೆ ಸಮಸ್ಯೆಯಾಗಿದೆ. ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಅಮಾನಿಬೈರಸಾಗರ ಕೆರೆ ಮತ್ತೊಮ್ಮೆ ಕೋಡಿಬಿದ್ದು, ಲಕ್ಕೇನಹಳ್ಳಿ, ರಸ್ತೆಯಲ್ಲಿ 2 ಅಡಿಗೂ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು. ತಮಕೂರು ಜಿಲ್ಲೆಯ ಪ್ರವಾಸಿ ಕೇಂದ್ರ ದೇವರಾಯನದುರ್ಗದ ಬೆಟ್ಟದ ಮೇಲಿನ ಚೆಕ್‌ಪೋಸ್ಟ್‌ ಬಳಿ, ಬಂಡೆಯೊಂದು ಕುಸಿದು ದಾರಿಗೆ ಅಡ್ಡಲಾಗಿ ಬಿದ್ದಿದೆ. ಮೈಸೂರಿನ ಇಟ್ಟಿಗೆಗೂಡಿನ ಹಳೆಯ ಮನೆಯೊಂದರ ಅರ್ಧಭಾಗ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು, ನಾಳೆ ಇನ್ನಷ್ಟು ಮಳೆ!

ಬುಧವಾರ ಹಾಗೂ ಗುರುವಾರ ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯ ಸಾಧ್ಯತೆ ಕಾರಣ ‘ಆರೆಂಜ್‌ ಅಲರ್ಟ್‌’ ಹಾಗೂ ಕರಾವಳಿ ಜಿಲ್ಲೆ ಮತ್ತು ಉತ್ತರ ಒಳನಾಡಿನ ಹೆಚ್ಚಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

Follow Us:
Download App:
  • android
  • ios