ಉಡುಪಿ/ಮಂಗಳೂರು (ಸೆ.16): ಕರಾವಳಿಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಹವಾಮಾನ ಇಲಾಖೆಗಳು ಮುನ್ನೆಚ್ಚರಿಕೆ ನೀಡಿವೆ. ಇಂದಿನಿಂದ 18ರ ವರೆಗೆ ಕರಾವಳಿಯಲ್ಲಿ ಸರಾಸರಿ 65 ಮಿ.ಮೀ.ಗಳಷ್ಟುಮಳೆಯಾಗುವ ಬಗ್ಗೆ ಮತ್ತು 18 ಮತ್ತು 29ರಂದು 115 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಮಂಗಳವಾರ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದರೂ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಮಂಗಳವಾರ ಮುಂಜಾನೆವರೆಗೆ ಜಿಲ್ಲೆಯಾದ್ಯಂತ ಸರಾಸರಿ 13 ಮಿ.ಮೀ. ಮಳೆಯಾಗಿದೆ.

ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ! ...

ದ.ಕ. ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ಸಾಧಾರಣ ಮಳೆಯಾಗಿದೆ. ಆದರೆ ಹಗಲು ಹೊತ್ತು ಅಷ್ಟಾಗಿ ಮಳೆ ಬಂದಿಲ್ಲ. ಮೋಡ ಮತ್ತು ಬಿಸಿಲು ಆಗಾಗ ಕಾಣಿಸಿದ್ದು, ಸಂಜೆ ವೇಳೆಗೆ ಮತ್ತೆ ಮಳೆಯ ವಾತಾವರಣ ಕಾಣಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನಸುಕಿನ ಜಾವ ಕಾಣಿಸಿದ ಮಳೆ ಬೆಳಗ್ಗಿನ ವರೆಗೆ ಇತ್ತು. ನಂತರ ಮಧ್ಯಾಹ್ನ ವರೆಗೆ ಮಳೆ ಅಷ್ಟಾಗಿ ಬಂದಿಲ್ಲ. ಆದರೆ ಅಪರಾಹ್ನ ಬಿಸಿಲು, ಮೋಡ ಮಧ್ಯೆ ಸಂಜೆಯಾಗುತ್ತಿದ್ದಂತೆ ತುಂತುರು ಮಳೆ ಕಾಣಸಿದೆ. ಇದು ರಾತ್ರಿಯೂ ಮುಂದುವರಿಯುವ ಲಕ್ಷಣ ಗೋಚರಿಸಿದೆ.

ಗೆಳೆಯ..ಓ..ಗೆಳೆಯ... ಮಳೆಯಲ್ಲಿ ತೇಲಿದ ಈ ಬೆಡಗಿಗೂ ಡ್ರಗ್ಸ್ ನಂಟು ! ...

ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಮಂಗಳೂರಿನಲ್ಲಿ ಗರಿಷ್ಠ 12.4 ಮಿಲಿ ಮೀಟರ್‌ ಮಳೆ ದಾಖಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗದ 3 ಜಿಲ್ಲೆಯಲ್ಲಿ ಮಳೆಯಬ್ಬರ

 ರಾಜ್ಯದ ಕರಾವಳಿಯಲ್ಲಿ ಸಂಪೂರ್ಣವಾಗಿ ಇಳಿಮುಖವಾಗಿರುವ ಮಳೆ ಮಂಗಳವಾರದಂದು ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಗುತ್ತಿದೆ. ಪರಿಣಾಮ ಕಲಬುರಗಿ ನಗರದಲ್ಲಿ ಅನೇಕ ಕಾಲನಿಗಳ ಮನೆಗಳಿಗೆ ನೀರು ನುಗ್ಗಿದೆ. ನಗರದ ಸಿದ್ಧೇಶ್ವರ ಕಾಲನಿಯಲ್ಲಿ ಮನೆಯೊಂದರ ಛಾವಣಿ ಕುಸಿದು ಐವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಇದೇವೇಳೆ ಕಮಲಾಪುರ ತಾಲೂಕಿನ ನಾಲ್ಕು ಗ್ರಾಮಗಳು ಜಲಾವೃತವಾಗಿದೆ. ಇಲ್ಲಿನ ಮನೆ, ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಸೋಯಾ, ತೊಗರಿ ಸೇರಿದಂತೆ ದವಸ ಧಾನ್ಯಗಳು ನಷ್ಟವಾಗಿವೆ. ಇದೇವೇಳೆ ಗುಂಡಗುರ್ತಿಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ.

ಕೊಪ್ಪಳ ಜಿಲ್ಲೆಯ ಹಲವು ಭಾಗಗಳಲ್ಲೂ ಮಂಗಳವಾರ ಸಂಜೆ ಭಾರಿ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬೀದರ್‌ನಲ್ಲೂ ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು ಮಂಗಳವಾರವೂ ಮುಂದುವರಿದಿದೆ. ಹೀಗಾಗಿ ಜಮೀನುಗಳು ನೀರಿನಿಂದ ಆವೃತವಾಗಿ ಬೆಳೆಗಳು ಕೊಳೆಯಲಾರಂಭವಾಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.