ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಹೊಸ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದ್ದು, ಅಸಭ್ಯ ಉಡುಪುಗಳನ್ನು ನಿಷೇಧಿಸಿದೆ. ಇದರೊಂದಿಗೆ, ನೌಕರರ ಹಾಜರಾತಿ ಮತ್ತು ಚಲನವಲನಗಳನ್ನು ಪತ್ತೆಹಚ್ಚಲು ಚಲನವಲನ ರಿಜಿಸ್ಟರ್ ಮತ್ತು ನಗದು ಘೋಷಣೆ ರಿಜಿಸ್ಟರ್ ಅನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.
ಕಚೇರಿಗಳಿಗೆ ಬರುವಾಗ ಸ್ಲೀವ್ಲೆಸ್ ಡ್ರೆಸ್ ಹಾಕುವುದು, ಹರಿದ ಜೀನ್ಸ್ ಹಾಕುವುದು ಸೇರಿದಂತೆ ಅಸಭ್ಯ ಎನ್ನುವಂಥ ಬಟ್ಟೆ ಧರಿಸಿ ಬರುವವರಿಗೆ ಕಟ್ಟೆಚ್ಚರ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರ, ಇನ್ನುಮುಂದೆ ಸರ್ಕಾರಿ ಕಚೇರಿಗಳಿಗೆ ಇಂಥ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಆದೇಶ ಮಾಡಿದೆ. ರಾಜ್ಯ ಸರ್ಕಾರಿ ನೌಕರರು "ಯೋಗ್ಯ" ಬಟ್ಟೆಗಳನ್ನು ಧರಿಸಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಬಾರದು ಎಂದು ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆ (ಡಿಪಿಎಆರ್) ಸುತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪ ಆಯುಕ್ತರು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಪಟ್ಟಿ ಮಾಡಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಗಂಭೀರವಾಗಿ ಪರಿಗಣನೆ
ಸರ್ಕಾರದ ಕೆಲವು ಕಚೇರಿಗಳಲ್ಲಿ ಕೆಲವು ಸಿಬ್ಬಂದಿ ಅಸಭ್ಯ, ಅಶ್ಲೀಲ ಎನ್ನುವಂಥ ಬಟ್ಟೆಗಳನ್ನು ಧರಿಸಿ ಬರುವ ಬಗ್ಗೆ ಸರ್ಕಾರಕ್ಕೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆ. ಇಂಥ ನೌಕರರಿಗೆ ಯೋಗ್ಯವಾದ ಬಟ್ಟೆಗಳನ್ನು ಧರಿಸಲು ಹೇಳಲಾಗಿದ್ದರೂ, ಅನೇಕರು ಸೂಚನೆಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಇನ್ನು ಮುಂದೆ ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು ಮುಂದೆ ಇಂಥ ಬಟ್ಟೆಗಳಿಗೆ ಕಡಿವಾಣ ಬೀಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.
ಇನ್ಮುಂದೆ ಸಹಿಸಲ್ಲ
"ಕಾರ್ಪೊರೇಟ್ ಕಚೇರಿಗಳಿಗಿಂತ ಭಿನ್ನವಾಗಿ, ಸರ್ಕಾರಿ ನೌಕರರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದಾಗ್ಯೂ, ಕೆಲವು ಯುವಕರು ಕಾಲೇಜು ಹೋಗುವವರಂತೆ ಧರಿಸುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಅವರು ಹರಿದ ಜೀನ್ಸ್, ತೋಳಿಲ್ಲದ ಉಡುಪುಗಳು ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಇನ್ನುಮುಂದೆ ಸಹಿಸುವುದಿಲ್ಲ ಎಂದು ತಿಳಿಸಲಾಗಿದೆ.
ಕಚೇರಿ ಪ್ರವೇಶ ನಮೂದು
ಇದರ ಜೊತೆಗೆ, ಸರ್ಕಾರವು ಚಲನೆಯ ರಿಜಿಸ್ಟರ್ (movement register) ಮತ್ತು ನಗದು ಘೋಷಣೆ ರಿಜಿಸ್ಟರ್ (cash declaration register) ಅನ್ನು ಪರಿಚಯಿಸಿದೆ. ಆದ್ದರಿಂದ ಸರ್ಕಾರಿ ನೌಕರರು ಕಚೇರಿಗೆ ಪ್ರವೇಶಿಸುವಾಗ ಮತ್ತು ಹೊರಡುವಾಗ ಈ ಲೆಡ್ಜರ್‌ಗಳಲ್ಲಿ ನಮೂದುಗಳನ್ನು ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಅನೇಕರು ನಿಯಮವನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಚಲನವಲನ ರಿಜಿಸ್ಟರ್ ನೌಕರರನ್ನು ಪತ್ತೆಹಚ್ಚಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಜೇಬಿನಲ್ಲಿರುವ ದುಡ್ಡು ನಮೂದು
ಉದ್ಯೋಗಿಗಳು ಬೆಳಗ್ಗೆ 10:10 ರೊಳಗೆ ಕಚೇರಿಯಲ್ಲಿರಬೇಕು ಮತ್ತು ಕೆಲಸದ ಸಮಯ ಮುಗಿಯುವವರೆಗೆ ತಮ್ಮ ಸ್ಥಾನದಲ್ಲಿರಬೇಕು. "ಅವರು ಅಧಿಕೃತ ಕರ್ತವ್ಯದ ಮೇಲೆ ಹೋಗುತ್ತಿದ್ದರೆ, ಅದನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು" ಎಂದು ಅದು ಹೇಳುತ್ತದೆ. ನಗದು ರಿಜಿಸ್ಟರ್‌ನಲ್ಲಿ, ಅವರು ಕಚೇರಿಗೆ ಪ್ರವೇಶಿಸುವ ಮೊದಲು ಮತ್ತು ನಿರ್ಗಮಿಸುವಾಗ ತಮ್ಮ ಪರ್ಸ್ / ಜೇಬಿನಲ್ಲಿರುವ ಮೊತ್ತವನ್ನು ನಮೂದಿಸಬೇಕು ಎಂದೂ ಉಲ್ಲೇಖಸಲಾಗಿದೆ.


