Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.
ಗಂಗಾವತಿ (ಆ.02): ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು. ನಗರದ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ನಿವಾಸದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ನೀರು ಹೆಚ್ಚಿನ ರೀತಿಯಲ್ಲಿ ಹರಿದು ಬರುತ್ತದೆ.
ಪ್ರಸ್ತುತ ದಿನ ಜಲಾಶಯದಲ್ಲಿ 41 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಎಡದಂಡೆ ಮತ್ತು ಬಲದಂಡೆ ಸೇರಿದಂತೆ ವಿಜಯನಗರ, ರಾಯಬಸವ ಮತ್ತು ಎಚ್.ಎಲ್ ಸಿ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿರುವ ಜಲಾಶಯಗಳು ಭರ್ತಿಯಾಗುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ನೀರು ಹರಿಸಲಾಗುತ್ತದೆ ಎಂದರು. ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಕೃಷಿಗೂ ನೀರು ಪೂರೈಸುತ್ತದೆ ಎಂದ ಅವರು ಸಾಣಾಪುರ ಬಳಿ ಹೊಸ ಜಲಾಶಯ ನಿರ್ಮಿಸುವ ಕುರಿತು ರೈತರು ನೀಡಿದ ಮನವಿ ಕುರಿತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದರು.
ತುಂಗಭದ್ರಾ ಜಲಾಶಯದ ಗೇಟ್ ಮುರಿದು ಹೋಗಿದ್ದ ಸಂದರ್ಭದಲ್ಲಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಎಲ್ಲಾ ಗೇಟುಗಳ ದುರಸ್ತಿಗೆ ಮುಂದಾದರು. ಆಂಧ್ರ ಪ್ರದೇಶದ ಸಹಕಾರ ಪಡೆದು ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ಈ ಭಾಗದ ರೈತರಿಗೆ ಕಳೆದ ಎರಡು ಬೆಳೆಗಳು ಇಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ಸರಕಾರ ರೈತರ ಬಗ್ಗೆ ಕಾಳಜಿವಹಿಸ ಬೇಕೆಂದರು.
ಎಲ್ಲರ ಅಭಿಪ್ರಾಯ ಪಡೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಶಿಫಾರಸ್ಸು
ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೇರಿದಂತೆ ತಾಲೂಕಿನ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಪ್ರಾಯ ಪಡೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಶಿಫಾರಸ್ತು ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯ ಎಲ್ಲಾ ಮುಖಂಡರನ್ನು ವೀಕ್ಷಕರು ಭೇಟಿಯಾಗಿದ ಅಭಿಪ್ರಾಯ ಪಡೆಯುತ್ತಿದ್ದಾರೆ. ಅದರಂತೆ ಗಂಗಾವತಿ ನಗರಕ್ಕೆ ವೀಕ್ಷಕರು ಆಗಮಿಸಿ ಅಭಿಪ್ರಾಯ ಪಡೆದು 5 ರಿಂದ6 ಜನ ಮುಖಂಡರ ಹೆಸರುರುಗಳನ್ನು ಕೆಪಿಸಿಸಿಗೆ ಕಳಿಸಿಕೊಡಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ನಾಯಕರನ್ನು ಗುರುತಿಸಲಾಗುತ್ತದೆ. ಇದಕ್ಕಾಗಿ ವೀಕ್ಷಕರ ತಂಡ ಇದೆ ಎಂದು ಹೇಳಿದರು. ಗಂಗಾವತಿ ನಗರದಲ್ಲಿ ಮೂರು ಕಾಂಗ್ರೆಸ್ ಗುಂಪುಗಾರಿಕೆ ಇದೆ ಎನ್ನುವುದಕ್ಕೆ ಇನ್ನು ಎರಡು ಮೂರು ತಿಂಗಳಲ್ಲಿ ಪಕ್ಷವನ್ನು ಸರಿಪಡಿಸಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು. ಈ ವೇಳೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ರಾಯಚೂರು ಎಪಿಎಂಸಿ ಮಾಜಿ ಅಧ್ಯಕ್ಷ ಶಾಂತಪ್ಪ ಇದ್ದರು.


