* ಐದು ದಿನಗಳಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ * ಪ್ರಸ್ತುತ ಜಲಾಶಯಕ್ಕೆ 20705  ಕ್ಯುಸೆಕ್‌ ನೀರು ಒಳಹರಿವು* ಜೂನ್‌ ತಿಂಗಳ ಕಂತಿನ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆಯೇ ಎಂಬ ಶಂಕೆ 

ಮಂಡ್ಯ(ಜೂ.21):ಕೆಆರ್‌ಎಸ್‌ ಒಳಹರಿವು ಹೆಚ್ಚಿದ ಬೆನ್ನಲ್ಲೇ ಹೊರಹರಿವನ್ನು ದಿಢೀರನೆ ಹೆಚ್ಚಿಸಲಾಗಿದ್ದು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವ ಬಗ್ಗೆ ರೈತ ಸಮುದಾಯದಲ್ಲಿ ಅನುಮಾನಗಳು ವ್ಯಕ್ತವಾಗಿವೆ.

ಕೊಡಗಿನಲ್ಲಿ ನಿರಂತರ ಮಳೆಯಿಂದ ಐದು ದಿನಗಳಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ ಜಲಾಶಯಕ್ಕೆ 20705 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಇದೇ ವೇಳೆ ಅಣೆಕಟ್ಟೆಯಿಂದ 5141 ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 94.58 ಅಡಿ ನೀರು ಸಂಗ್ರಹವಾಗಿದ್ದರೂ 425 ಕ್ಯುಸೆಕ್‌ ನೀರನ್ನು ಮಾತ್ರ ಹೊರಬಿಡಲಾಗುತ್ತಿತ್ತು. 

ಕೆಆರ್‌ಎಸ್‌ ಅಣೆಕಟ್ಟೆ ಒಳಹರಿವಿನಲ್ಲಿ ಹೆಚ್ಚಳ

ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 92.75 ಅಡಿ ಇದ್ದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಜೂನ್‌ ತಿಂಗಳ ಕಂತಿನ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅಣೆಕಟ್ಟೆಯ ಅಧಿಕಾರಿಗಳು ಯಾವುದೇ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ.