ಸರ್ಕಾರಿ ಕೆಲಸದ ಆಮಿಷವೊಡ್ಡಿ ಅಂಗವಿಕಲ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕೊಪ್ಪಳದ ಸರ್ಕಾರಿ ಶಾಲಾ ಶಿಕ್ಷಕನಿಗೆ ಗಂಗಾವತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಯುವತಿ ಹೋರಾಟಕ್ಕೆ ಕೊನೆಗೂ ನ್ಯಾಯಾಲಯ ಆರೋಪಿಗೆ ತಕ್ಕ ಶಿಕ್ಷೆ ನೀಡಿದೆ.

ಕೊಪ್ಪಳ (ಫೆ.27): ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಬೇಕಾದ ಶಿಕ್ಷಕನೋರ್ವ ಕಾಮಪಿಶಾಚಿಯಾಗಿ ವರ್ತಿಸಿ, ನಂಬಿ ಬಂದ ಅಂಗವಿಕಲ ಮಹಿಳೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದೆ. ಅಬಲೆಗೆ ಅನ್ಯಾಯ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಎಂಬಾತನಿಗೆ ನ್ಯಾಯಾಲಯವು 'ಜೀವಾವಧಿ ಶಿಕ್ಷೆ' ವಿಧಿಸಿ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?

ಶಿಕ್ಷಕ ಮಹಮ್ಮದ್ ಅಜರುದ್ದೀನ್ ತನಗೆ ಪರಿಚಯವಿದ್ದ ಒಬ್ಬ ಅಂಗವಿಕಲ ಮಹಿಳೆಯನ್ನು ಗುರಿಯಾಗಿಸಿಕೊಂಡಿದ್ದನು. ಆಕೆಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪುಸಲಾಯಿಸಿದ್ದ ಕಿರಾತಕ, ಆಕೆಯನ್ನು ಏಕಾಂತಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಷ್ಟಕ್ಕೆ ಸುಮ್ಮನಾಗದ ಈತ, ಆ ಪೈಶಾಚಿಕ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದನು. ಆ ವಿಡಿಯೋವನ್ನೇ ಅಸ್ತ್ರವಾಗಿಸಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನು.

ಮಾನಭಂಗ ಯತ್ನ ಮತ್ತು ವಿಡಿಯೋ ವೈರಲ್:

ದಿನಾಂಕ 30-06-2022 ರಂದು ಮಹಿಳೆಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದನು. ತನ್ನ ಕಾಮದ ಹಸಿವಿಗೆ ಬಲಿಯಾಗದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಈತ, ಕೊನೆಗೆ ಮಹಿಳೆಯೊಂದಿಗಿನ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಇದು ಸಂತ್ರಸ್ತೆಯ ಜೀವನವನ್ನು ನರಕವನ್ನಾಗಿಸಿತ್ತು.

ಕಾನೂನು ಹೋರಾಟದ ಹಾದಿ:

ಕಿರಾತಕ ಶಿಕ್ಷಕನ ಅಟ್ಟಹಾಸ ತಾಳಲಾರದೆ ಸಂತ್ರಸ್ತೆ ದಿನಾಂಕ 02-07-2022 ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ತಕ್ಷಣ ಪೊಲೀಸರು ಅಜರುದ್ದೀನ್‌ನನ್ನು ಬಂಧಿಸಿದ್ದರು. ಆದರೆ ನಂತರ ಆತ ಜಾಮೀನಿನ ಮೇಲೆ ಹೊರಬಂದಿದ್ದನು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಫೆಬ್ರವರಿ 18, 2026 ರಂದು ಅಜರುದ್ದೀನ್ ದೋಷಿ ಎಂದು ತೀರ್ಪು ನೀಡಿತ್ತು.

ನ್ಯಾಯಾಧೀಶರ ತೀರ್ಪು:

ಈ ಶಿಕ್ಷಕ ದೋಷಿ ಎಂದು ಸಾಬೀತಾದ ತಕ್ಷಣ ಪೊಲೀಸರು ಆತನನ್ನು ವಾಪಸ್ ಕಸ್ಟಡಿಗೆ ಪಡೆದಿದ್ದರು. ಇಂದು ಪ್ರಕರಣದ ಅಂತಿಮ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು, ಸಮಾಜಕ್ಕೆ ತಪ್ಪು ಸಂದೇಶ ನೀಡಿದ ಮತ್ತು ಅಸಹಾಯಕ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಿದ್ದಾರೆ. ಈ ತೀರ್ಪು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಕಾಮಪಿಶಾಚಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಅಂಗವಿಕಲ ಮಹಿಳೆಗೆ ದೀರ್ಘಕಾಲದ ಹೋರಾಟದ ನಂತರ ನ್ಯಾಯ ಸಿಕ್ಕಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ನ್ಯಾಯಾಲಯದ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.