* ಹಲವೆಡೆ ಟ್ಯಾಂಕರ್ ನೀರಿಗೆ ಮೊರೆ ಹೋಗಿರುವ ಜನತೆ* ಈಗಲೇ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಭವಿಷ್ಯ ಕಷ್ಟ* ನೀರಿನ ಸಮಸ್ಯೆಗಳನ್ನು ಪರಿಹಾರ ಮಾಡಬೇಕು
ಬೆಂಗಳೂರು(ಮೇ.12): ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನದಿ ನೀರು ಹಂಚಿಕೆ(River Water Allocation) ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಸಮಸ್ಯೆ ಪರಿಹರಿಸಿ ಕೊಳ್ಳದಿದ್ದರೆ ಮುಂದಿನ ದಿನದಲ್ಲಿ ನೀರಿನ ಹಾಹಾಕಾರ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ ಜನತಾ ಜಲಧಾರೆ(Janata Jaladhare) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ(Central Government) ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ(Water) ಹಾಹಾಕಾರ ಎದುರಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ(Bengaluru) ಈಗಾಗಲೇ ನೀರಿಗಾಗಿ ಸಾಕಷ್ಟು ಕಷ್ಟ ಇದೆ. ಟ್ಯಾಂಕರ್ ನೀರನ್ನು ತರಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನೂ ಕಷ್ಟಕರವಾಗಿರಲಿದೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಹೇಳಿದರು.
ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತಂದು ಕೊನೆಯುಸಿರು ಬಿಡುವಾಸೆ: ಎಚ್.ಡಿ.ದೇವೇಗೌಡ
ಜನತಾ ಜಲಧಾರೆ ಕಾರ್ಯಕ್ರಮದ ಉದ್ದೇಶ ನಮ್ಮ ನದಿಗಳ ನೀರನ್ನು ನಾವು ಬಳಸಿಕೊಳ್ಳಬೇಕು ಎನ್ನುವುದಾಗಿದೆ. ಸದ್ಯ ನಮ್ಮ ನದಿ ನೀರನ್ನು ನಾವು ಬಳಸಿಕೊಳ್ಳಲು ಅನೇಕ ಸಮಸ್ಯೆಗಳಿವೆ. ಕೇಂದ್ರದ ನಿರ್ಲಕ್ಷ್ಯ ಮನೋಭಾವದಿಂದ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಎಲ್ಲಾ ಕಡೆ ಕಾವೇರಿ ನೀರನ್ನು(Kaveri Water) ಕೊಡಲು ಆಗಿಲ್ಲ. ಈಗಲೂ ಕುಡಿಯುವ ನೀರಿನ ಕೊರತೆ ಇದೆ ಎಂದರು.
ಜೆಡಿಎಸ್(JDS) ಸರ್ಕಾರ ಇದ್ದಾಗ ಕೊಟ್ಟ ಕಾರ್ಯಕ್ರಮಗಳಿಂದ ಬೆಂಗಳೂರು ಅಭಿವೃದ್ಧಿ ಹೊಂದಿದೆ. ಪ್ರಸ್ತುತ ಇರುವ ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ. ನಗರದಲ್ಲಿ ಸುರಿದ ಮಳೆಯಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕ್ರೀಡಾಂಗಣದ ಚಾವಣಿ ಬಿದ್ದು ಹೋಗಿದೆ. ಇದು ಇವರ ಅಭಿವೃದ್ಧಿ ಶೈಲಿಯಾಗಿದೆ. ಮನೆಗಳೇ ಇಲ್ಲದೆ ಗುಡಿಸಿಲಿನಲ್ಲಿ ಅನೇಕ ಜನ ವಾಸ ಮಾಡುತ್ತಿದ್ದಾರೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.
ರಾಜ್ಯದಲ್ಲಿ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ದೇವೇಗೌಡ: ವೈ.ಎಸ್.ವಿ.ದತ್ತಾ
ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಮಾತನಾಡಿ, ಜನತಾ ಜಲಧಾರೆ ಕಾರ್ಯಕ್ರಮವು ಶುಕ್ರವಾರ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಕಾರ್ಯಕ್ರಮಕ್ಕೆ 4-5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಜನ ಬೆಂಬಲ ಅಭೂತಪೂರ್ವವಾಗಿ ಸಿಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹುಮತ ಪಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮತ್ತೆ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇತಿಹಾಸ ಮತ್ತೆ ಮರುಕಳಿಸಲಿದೆ. ದೀನದಲಿತರ ಸೇವೆಗೆ ಒಮ್ಮೆ ಅವಕಾಶ ನೀಡಬೇಕು. ಬಸವನಗುಡಿಯಲ್ಲಿ ನಾವು ಮತ್ತಷ್ಟು ಪಕ್ಷವನ್ನು ಸಂಘಟನೆ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪಕ್ಷದ ಮುಖಂಡ ಬಾಗೇಗೌಡ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
