ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ, ರಾಜ್ಯದ ಪ್ರಮುಖ ವಿದ್ಯುತ್ ಮೂಲವಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಇದು ವಿದ್ಯುತ್ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಮಳೆ ಬಾರದೆ ಹೋದರೆ ರಾಜ್ಯವು ಗಂಭೀರ ವಿದ್ಯುತ್ ಸಂಕಷ್ಟವನ್ನು ಎದುರಿಸುವ ಸಾಧ್ಯತೆಯಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದ ಜೂನ್ ತಿಂಗಳು ಗತಿಸುತ್ತಿದ್ದರೂ ಮಳೆಗಾಲ ಪ್ರಾರಂಭವಾಗಿಲ್ಲ. ಇದರಿಂದ ಮಳೆಯನ್ನೇ ಅವಲಂಬಿಸಿದ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಇಲ್ಲದೆ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ.

ನಾಡಿನ ಬೆಳ್ಳಿ ಬೆಳಕಿನ ಮೂಲ ಸೆಲೆ ಲಿಂಗನಮಕ್ಕಿ ಜಲಾಶಯ. ಶಕ್ತಿ ನದಿ ಶರಾವತಿಗೆ ಲಿಂಗನಮಕ್ಕಿ ಎಂಬ ಸ್ಥಳದಲ್ಲಿ 9020 ಅಡಿ (2750 ಮೀಟರ್)ಉದ್ದ ಹಾಗೂ ನದಿ ಪಾತಳಿಯಿಂದ 181 ಅಡಿ (55 ಮೀಟರ್) ಎತ್ತರದ ಅಣೆಕಟ್ಟೆ ಕಟ್ಟಿ ಈ ಜಲಾಶಯ ನಿರ್ಮಿಸಲಾಗಿದೆ. 2000 ಚದುರ ಕಿಮಿ ಜಲಾಯನ ಪ್ರದೇಶ ಹೊಂದಿರುವ ಲಿಂಗನಮಕ್ಕಿ ಜಲಾಶಯವು ಮಾನವ ನಿರ್ಮಿತವಾಗಿದೆ.

ನಿರ್ಮಾಣ ಕಾಲದಲ್ಲಿ ಏಷಿಯಾ ಖಂಡದಲ್ಲಿ ಬೃಹತ್ ಎನಿಸಿಕೊಂಡಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ 1963 ರಿಂದ ನೀರು ಸಂಗ್ರಹಣೆ ಪ್ರಾರಂಭಗೊಂಡಿದೆ. 156 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಕ್ಕಿದ್ದು, 326 ಚದುರ ಕಿಮೀ ಪ್ರದೇಶ ವ್ಯಾಪ್ತಿಯ ಹಿನ್ನೀರು ಹೊಂದಿದೆ.

ವಿದ್ಯುತ್ ಉತ್ಪಾದನಾ ಸಾಮರ್ಥ್ಯ

ಶರಾವತಿ ಕಣಿವೆಯ ಜಲವಿದ್ಯುತ್ ಯೋಜನೆಗೆ ಲಿಂಗನಮಕ್ಕಿ ಜಲಾಶಯವೇ ಮೂಲಾಧಾರ. ಈ ಜಲಾಶಯವನ್ನು ಅವಲಂಬಿಸಿ 1035 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶರಾವತಿ ಜಲ ವಿದ್ಯುದಾಗರ, 139 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಮಹಾತ್ಮಾಗಾಂಧಿ ವಿದ್ಯುದಾಗರ, 55 ಮೆಗಾವಾಟ್ ಉತ್ಪಾದನಾ ಸಾಮಥ್ರ್ಯದ ಲಿಂಗನಮಕ್ಕಿ ವಿದ್ಯುದಾಗರ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ವಿದ್ಯುತ್ ಬಳಕೆಯ ಶೇ 30 ರಷ್ಟು ಶರಾವತಿ ಕಣಿವೆಯ ಜಲ ವಿದ್ಯುದೋಜನೆಯಿಂದಲೇ ಲಭ್ಯವಾಗುತ್ತದೆ.

ಈ ವರ್ಷದ ಮಳೆಗಾಲದ ಹಂಗಾಮಿನಲ್ಲಿ ಜಲಾನಯನ ಪ್ರದೇಶದಲ್ಲಿ ಕೇವಲ ಒಂಬತ್ತು ಸೆಂಟಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 72 ಸೆ.ಮೀ ನಷ್ಟು ಮಳೆ ಆಗಿತ್ತು. ಪ್ರಸ್ತುತ ಜಲಾಶಯದಲ್ಲಿ 1746.00 ಅಡಿ ನೀರು ಮಾತ್ರವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1772.80 ಅಡಿ ನೀರಿತ್ತು. ಸದ್ಯ ಇರುವ ನೀರಲ್ಲಿ ಸುಮಾರು 473 .85 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದ್ದು, ಬೇಡಿಕೆಗೆ ಅನುಗುಣವಾಗಿ ವಿದ್ಯುದುತ್ಪಾದನೆಗೆ ಬಳಸಲಾಗುತ್ತಿದೆ ಎನ್ನುತ್ತಾರೆ ಕೆಪಿಸಿಯ ಅಧಿಕಾರಿಗಳು.

ನೀರಿನ ಅಭಾವದಿಂದ ಸ್ಥಗಿತಗೊಂಡ ಜನರೇಟರ್

ರಾಜ್ಯದಲ್ಲಿ ಕೆಲವೆಡೆ ಮಳೆ ಆಗುತ್ತಿರುವುದರಿಂದ ವಿದ್ಯತ್ ಬೇಡಿಕೆ ಕುಸಿದಿದೆ. ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು ಹತ್ತು ಜನರೇಟರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಕೇವಲ ಏಳು ಜನರೇಟರ್‌ಗಳನ್ನು ಮಾತ್ರ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು ಎಂಟು ಜನರೇಟರ್‌ಗಳು ಇದ್ದು ಒಂದು ದುರಸ್ತಿಯಲ್ಲಿದೆ. ಇನ್ನು 7 ಕಾರ್ಯನಿರ್ವಹಿಸುತ್ತಿದೆ. ಮಾಡಲಾಗುತ್ತಿದೆ. ಲಿಂಗನಮಕ್ಕಿ ಪವರ್ ಹೌಸ್‍ನಲ್ಲಿ ಒಂದು ಜನರೇಟರ್ ಕಾರ್ಯ ನಿರ್ವಹಿಸುತ್ತಿದೆ. ನೀರಿನ ಅಭಾವದಿಂದ ಸ್ಥಗಿತಗೊಂಡಿದೆ. ಮಳೆಬಾರದೆ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ.

ಇದನ್ನೂ ಓದಿ: ‘ವಾಡಿಕೆ ಮಳೆಯ ಆಸೆನೇ ಬಿಟ್ಟುಬಿಡಿ!’: ದೇಶಾದ್ಯಂತ ಶೇ. 42 ರಷ್ಟು ಮುಂಗಾರು ಕೊರತೆ, ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್!

ಮಳೆ ನಿರೀಕ್ಷೆ

ಶರಾವತಿ ಜಲಾನಯನ ಪ್ರದೇಶದಲ್ಲಿ ಈವರೆಗೂ ಮಳೆಬಾರದೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಆದರೆ ರಾಜ್ಯದ ಹಲವಡೆ ಮಳೆ ಆಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಕುಸಿತವಾಗಿದೆ. ಸದ್ಯ ನಾವು ಸಹ ವಿದ್ಯುತ್ ಉತ್ಪಾದನೆಯನ್ನು ಕಡಿತಗೊಳಿಸಿದ್ದು ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ನಿರೀಕ್ಷೆಯಲ್ಲಿ ಇದ್ದೇವೆ.

ಇದನ್ನೂ ಓದಿ: 3 ದಶಕಗಳ ಬಳಿಕ ಮೊದಲ ಬಾರಿಗೆ ಬರಿದಾದ ಭದ್ರೆಯ ಒಡಲು; ಬರದ ಛಾಯೆ, ಸ್ಥಳೀಯರಲ್ಲಿ ಆತಂಕ