ಕಬಿನಿ, ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು
ತಮಿಳುನಾಡಿಗೆ ನಿತ್ಯ ೫ ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶಿಸಿದ ಬೆನ್ನಹಿಂದೆಯೇ ಸೋಮವಾರ ಮಧ್ಯ ರಾತ್ರಿಯಿಂದಲೇ ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯಗಳಿಂದ ತಮಿಳುನಾಡಿಗೆ ೩೮೩೪ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಮಂಡ್ಯ : ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶಿಸಿದ ಬೆನ್ನಹಿಂದೆಯೇ ಸೋಮವಾರ ಮಧ್ಯ ರಾತ್ರಿಯಿಂದಲೇ ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯಗಳಿಂದ ತಮಿಳುನಾಡಿಗೆ 3834 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಸೋಮವಾರವಷ್ಟೇ ಪ್ರಾಧಿಕಾರ ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಿತ್ತು. ಕೆಆರ್‌ಎಸ್‌ನಿಂದ ೨೧೭೧ ಕ್ಯುಸೆಕ್, ಕಬಿನಿಯಿಂದ ೧೬೬೩ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಅಣೆಕಟ್ಟೆಯ ಕೆಳಭಾಗದಲ್ಲಿ ಬಿದ್ದ ಮಳೆ ನೀರು ಸೇರಿ ಉಳಿದ 1166 ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದುಹೋಗಲಿದೆ. ಮಳೆ ನೀರು ಹಾಗೂ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ 5 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಸಮಿತಿಯಿಂದ ಹೊರಬರಬೇಕು
ರಾಮನಗರ(ಸೆ.20): ರಸ್ತೆಯಲ್ಲಿ ನಿಂತು ಟೈರ್ ಗಳಿಗೆ ಬೆಂಕಿ ಹಚ್ಚುವುದರಿಂದ ಏನೂ ಆಗುವುದಿಲ್ಲ. ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಒಗ್ಗೂಡಿ ಕರ್ನಾಟಕದವರು ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವ ಬೆದರಿಕೆ ಹಾಕಿದಾಗ ಮಾತ್ರ ಕಾವೇರಿ ನದಿ ನೀರು ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಬಿಡದಿ ಸಮೀಪದ ಕೇತಗಾನಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ತಮಿಳುನಾಡಿನವರ ದಬ್ಬಾಳಿಕೆ ಸಹಿಸಿಕೊಂಡು ಬಂದಿದ್ದೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಬೇಕೆಂದರೆ ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವಂತಹ ಕಠಿಣ ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ರೈತರು, ಕನ್ನಡಪರ ಎಲ್ಲ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದರು.
ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ
ನಮ್ಮ ಜನರ ಹಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದೇವೆ. ಇದಕ್ಕೇನು ಕೇಂದ್ರ ಸರ್ಕಾರ 5 ರುಪಾಯಿ ನೀಡಿಲ್ಲ. ಅಣೆಕಟ್ಟೆ ಇರುವುದು ನಮ್ಮಲ್ಲಿ, ಅದನ್ನು ಕಟ್ಟಿದ್ದು ನಾವು. 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂಡಿದ್ದೇವೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕಾ ಎಂದು ಕಿಡಿಕಾರಿದರು.
ಕಾವೇರಿಗಾಗಿ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿ ಹೋರಾಟ ಮಾಡಲೇಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂತಹ ಸಂದರ್ಭಗಳಲ್ಲಿ ಒಗ್ಗೂಡುತ್ತಾರೊ ಹಾಗೆಯೇ ನಾವೂ ಒಗ್ಗೂಡಬೇಕು. ಆದರೆ, ರಾಜಕೀಯ ಅಂತ ನಾವಿಲ್ಲಿ ಹೊಡೆದಾಡಿಕೊಂಡು ಕೂತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನವರ ದಬ್ಬಾಳಿಕೆಯನ್ನು ಎಷ್ಟು ವರ್ಷ ಸಹಿಸಲು ಸಾಧ್ಯ. ಅಂತಿಮವಾಗಿ ನಾವು ಕೂಡ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕುತ್ತಾರಾ, ಹಾಕಲಿ. ಅರೆಸೇನಾ ಪಡೆಯನ್ನು ಕರೆಸುತ್ತಾರಾ, ಕರೆಸಲಿ ನೋಡೋಣ. ಹೀಗೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರೆ ಸಹಿಸಲು ಸಾಧ್ಯವೆ. ಇದು ಯಾವ ಸೀಮೆ ಒಕ್ಕೂಟದ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ನಾಲ್ಕು ವರ್ಷದಿಂದ ಸಮುದ್ರಕ್ಕೆ ನೀರು ಹರಿಸುತ್ತಿದೆ. ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಅವರು (ತಮಿಳುನಾಡು) ಬೇಕಾದರೆ ಅಲ್ಲಿ ಅಣೆಕಟ್ಟೆ ಕಟ್ಟಿಕೊಳ್ಳಲಿ ಬೇಡ ಅಂದವರು ಯಾರು. ನಮ್ಮ ಹಣದಲ್ಲಿ ನಾವು ಅಣೆಕಟ್ಟೆ ಕಟ್ಟಲು ಅವರ ಅನುಮತಿ ಬೇಕಾ? ಇದು ಯಾವ ಒಕ್ಕೂಟ ವ್ಯವಸ್ಥೆ ಎಂದು ಪ್ರಶ್ನೆ ಮಾಡಿದರು.
ತಮಿಳುನಾಡಿನವರು ಕರ್ನಾಟಕದವರನ್ನು ಒಕ್ಕೂಟ ವ್ಯವಸ್ಥೆಗೆ ಅಗೌರವ ತರುವವರೆಂಬ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ. ಆದರೆ, ನಾವಿಲ್ಲಿ ಒಡೆದಾಡಿಕೊಂಡು ಕೂತಿದ್ದೇವೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ನದಿ ನೀರಿನ ಹಂಚಿಕೆ ಸಮಸ್ಯೆ ಬರುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕೀಯ ಧಿಕ್ಕರಿಸಿ ಎಲ್ಲ ಪಕ್ಷಗಳು ಒಗ್ಗೂಡಬೇಕಾಗಿದೆ ಎಂದು ನಾನು ಎಲ್ಲಾ ಪಕ್ಷದವರಿಗೂ ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಇತರರಿದ್ದರು.