ಬೆಂಗಳೂರು:  ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನೌಕರರು ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ 75 ಸಾವಿರ ಲೀಟರ್‌ ನೀರಿನ ಕ್ಯಾನ್‌ ಹಾಗೂ ನೀರಿನ ಬಾಟಲಿಗಳನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಡಲಾಯಿತು.

ಬಿಬಿಎಂಪಿ ಕೇಂದ್ರ ಕಚೇರಿ ರಾಜಕುಮಾರ್‌ ಗಾಜಿನ ಮನೆಯಲ್ಲಿ ಸಂಗ್ರಹಿಸಿದ್ದ ನೀರಿನ ಕ್ಯಾನ್‌ಗಳನ್ನು ಧರ್ಮಸ್ಥಳಕ್ಕೆ ಕಳುಹಿಸುವ ಕಾರ್ಯಕ್ಕೆ ಮಂಗಳವಾರ ಮೇಯರ್‌ ಗಂಗಾಂಬಿಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನೀರಿನ ಅಭಾವವಿರುವುದರಿಂದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 75 ಸಾವಿರ ಲೀಟರ್‌ ನೀರು ಕಳುಹಿಸಿಕೊಡಲಾಗುತ್ತಿದೆ. ಬೇಸಿಗೆಯಿಂದಾಗಿ ಕುಡಿಯುವ ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಮತ್ತು ಅಡುಗೆಗೆ ಶುದ್ಧವಾದ ನೀರನ್ನು ಕಳುಹಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಮೃತರಾಜ್‌, ಪ್ರಧಾನ ಕಾರ್ಯದರ್ಶಿ ನಲ್ಲಪ್ಪ, ಪದಾಧಿಕಾರಿಗಳಾದ ಸಂಗೊಳ್ಳಿ ಕೃಷ್ಣಮೂರ್ತಿ, ಡಿ. ಗಂಗಾಧರ್‌, ಡಿ. ರಾಮಚಂದ್ರ, ನಂಜಪ್ಪ, ರವಿ, ಸುರೇಶ್‌, ನರಸಿಂಹ, ಭಾಸ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ಬಸವನಗುಡಿ ಭಕ್ತರಿಂದ ಧರ್ಮಸ್ಥಳಕ್ಕೆ ನೀರು :   ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತರು ಸೋಮವಾರ ರಾತ್ರಿ 6,780 ಲೀ. ಕುಡಿಯುವ ನೀರನ್ನು ಶ್ರೀಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದರು. 339 ಕ್ಯಾನ್‌ಗಳಲ್ಲಿ ತಲಾ 20 ಲೀಟರ್‌ನಂತೆ ಒಟ್ಟು 6,780 ಲೀ. ನೀರನ್ನು ಸೋಮವಾರ ರಾತ್ರಿ ಭಕ್ತರು ತಂದುಕೊಟ್ಟರು. ಅನ್ನಪೂರ್ಣ ಛತ್ರದಲ್ಲಿ ಅನ್ನ ಬೇಯಿಸಲು ಹಾಗೂ ಭಕ್ತಾದಿಗಳಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿ.ಹರ್ಷೇಂದ್ರ ಕುಮಾರ್‌ ಇದ್ದರು.