ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದೊಂದು ಪತ್ತೆಯಾಗಿ ಕುತೂಹಲ ಮೂಡಿಸಿತ್ತು. ತನಿಖೆಯ ನಂತರ, ಇದು ಮಹಾರಾಷ್ಟ್ರ ಅರಣ್ಯ ಇಲಾಖೆಯ ಸಂಶೋಧನಾ ಅಧ್ಯಯನದ ಭಾಗವೆಂದು ತಿಳಿದುಬಂದಿದೆ. 

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮೆರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದುವೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಕೊನೆಗೆ ಅದರ ರಹಸ್ಯ ಬಯಲಾಗಿದೆ.

ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್

ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112ಕ್ಕೆ ಕರೆ ಮಾಡಿದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಇದರಿಂದ ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚಾರ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಬಸವಳಿದ ಸ್ಥಿತಿಯಲ್ಲಿ ಪತ್ತೆ

ಜಿಪಿಎಸ್ ಮತ್ತು ಟ್ರ್ಯಾಕರ್‌ಗಳ ಭಾರದಿಂದ ರಣಹದ್ದು ಬಸವಳಿದ ಸ್ಥಿತಿಯಲ್ಲಿದ್ದು, ಅದೇ ಕಾರಣದಿಂದ ಹಾರಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ದಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ.

ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಲಾಗಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇಲಘಾಟ್ ಅರಣ್ಯ

ಈ ಹದ್ದು ಮಹಾರಾಷ್ಟ್ರ ರಾಜ್ಯದ ಮೇಲಘಾಟ್ ಅರಣ್ಯ ಪ್ರದೇಶದಲಿ ವಾಸಿಸುತಿತ್ತು. ಚಲನ ವಲನದ ಬಗ್ಗೆ ತಿಳಿಯಲು ಮಹಾರಾಷ್ಟ್ರ ಅರಣ್ಯ ಇಲಾಖೆಯವರು ಈ ಟ್ಯಾರ್‌ ಅನ್ನು ಹಾಕಿದ್ದಾರೆ. ಈ ಪಕ್ಷಿಗೆ ಬೇಟೆ ಸಿಗದೆ ಸುಸ್ತಾಗಿ ಗೋಟ್ಯಾಳ ಗ್ರಾಮದಲ್ಲಿರುವ ಹೊಲದಲ್ಲಿ ಉಳಿದಿದೆ. ಅದನ್ನು ನೋಡಿದ ಗ್ರಾಮಸ್ಥರು 112ಕ್ಕೆ ಕರೆ ಮಾಡಿದರು. ನಂತರ ಹದ್ದನ್ನು ಪರಿಶೀಲನೆಗೆಂದು ಠಾಣೆಗೆ ತೆಗೆದುಕೊಂಡು ಬರಲಾಯಿತು. ನಂತರ ಅದರ ಬೆನ್ನ ಮೇಲಿದ್ದ ಟ್ಯಾಗ್‌ ಅನ್ನು ನೋಡಿದಾಗ ಅದರ ಮೇಲೆ ಒಂದು ವೆಬ್‌ಸೈಟ್ ಅಡ್ರೆಸ್ ಇದ್ದು ಅದನ್ನು ಸರ್ಚ್ ಮಾಡಿದಾಗ ಮೇಲಘಾಟ್ ಅರಣ್ಯದ ಬಗ್ಗೆ ಮಾಹಿತಿ ದೊರೆತಿದೆ.

 ಸ್ಥಳೀಯ ಅರಣ್ಯ ಇಲಾಖೆಯವರನ್ನು ವಿಚಾರಿಸಿದಾಗ ಅವರು ಅದು ಅರಣ್ಯ ಇಲಾಖೆಯವರು ಹಾಕಿದ ಟ್ಯಾಗ್‌ ಎಂದು ತಿಳಿಸಿದ್ದಾರೆ. ಕರ್ನಾಟಕದ ಅರಣ್ಯ ಇಲಾಖೆಯ ಜೇವೂರ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಜೇವೂರ ಸಾಮಾಜಿಕ ಅರಣ್ಯ ವಲಯ ಕೇಂದ್ರದಲ್ಲಿ ಇರಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.